
ಮಂಡ್ಯ (ನ.10): ಮೇಘಶ್ರೀ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸದ ಪೊಲೀಸ್ ಅಧಿಕಾರಿಗಳ ಅಮಾನತ್ತಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ಕೆಲಕಾಲ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ತೆರಳಿ ಧರಣಿ ಕುಳಿತರು.
ಮಳವಳ್ಳಿ ತಾಲ್ಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಪರಿಶಿಷ್ಟ ಜಾತಿಯ ಮಹಾದೇವಮ್ಮಳ ಪುತ್ರಿ ಮೇಘಶ್ರೀ ಹಾಗೂ ತಿರುಮಲಾಪುರದ ಸವರ್ಣೀಯ ಟಿ.ಕೆ.ಸ್ವಾಮಿ ಬೆಂಗಳೂರಿನಲ್ಲಿದ್ದಾಗ ಪರಸ್ಪರ ಪ್ರೀತಿಸಿ ಐದು ವರ್ಷದ ಹಿಂದೆ ಮದುವೆಯಾಗಿದ್ದರು. ಈ ದಂಪತಿ ತಿರುಮಲಾಪುರಕ್ಕೆ ಬಂದ ಕೆಲ ತಿಂಗಳ ಬಳಿಕ ಮೇಘಶ್ರೀಯ ಜಾತಿ ತಿಳಿದ ಟಿ.ಕೆ.ಸ್ವಾಮಿ ಕುಟುಂಬದ ಸದಸ್ಯರು ಮೇಘಶ್ರೀಯನ್ನು ಕೊಲೆ ಮಾಡಿದ್ದಾರೆ. ಈ ಅಮಾನವೀಯ ಘಟನೆ ಇತ್ತೀಚೆಗೆ ಮೇಘಶ್ರೀ ಕುಟುಂಬಕ್ಕೆ ತಿಳಿದ ಬಳಿಕ ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಕನ ಹೆಂಡ್ತಿ ಲವ್ವಿ-ಡವ್ವಿ : ಹೊಳೆದಂಡೇಲಿ ಅವನ ಜೊತೆ ಸಿಕ್ಕಿಬಿದ್ದು ದಾರುಣ ಅಂತ್ಯ ...
ಮೇಘಶ್ರೀ ಮರ್ಯಾದೆ ಗೇಡು ಹತ್ಯೆಯಾಗಿರುವುದಕ್ಕೆ ಸಾಕ್ಷಿಗಳಿದ್ದರೂ ಡಿವೈಎಸ್ಪಿ$ಅರುಣ್‌ನಾಗೇಗೌಡ ನೊಂದ ದಂಪತಿಗಳಿಗೆ ಸಮಾಧಾನ ಹೇಳಿ ನ್ಯಾಯ ಕೊಡಿಸುವ ಭರವಸೆ ನೀಡದೆ ಆರೋಪಿಗಳನ್ನು ಬಂಧಿಸುವ ಬದಲು ಕೇವಲ ಹೇಳಿಕೆಗಳನ್ನು ಪಡೆದು ಕೊಲೆಗಾರರು ನೆಮ್ಮದಿಯಾಗಿ ಮನೆಗೆ ತೆರಳುವಂತೆ ಮಾಡಿರುವುದು ಪೊಲೀಸ್ ವ್ಯವಸ್ಥೆಯನ್ನೇ ಸಂಶಯಿಸುವಂತೆ ಮಾಡಿದೆ ಎಂದು ದೂರಿದರು.
ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಶ್ರೀರಂಗಪಟ್ಟಣ ಉಪ ವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ಬದಲಾಗಿ ಸಮರ್ಥ ಪೊಲೀಸ್ ಅಧಿಕಾರಿಯೊಬ್ಬರನ್ನು ನೇಮಿಸಿ ಎಸ್‌ಪಿ ಅವರ ಕಣ್ಗಾವಲಿನಲ್ಲೇ ಸೂಕ್ತ ತನಿಖೆ ನಡೆಸಬೇಕು ಹಾಗೂ ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಂ.ಬಿ. ಶ್ರೀನಿವಾಸ್, ಸುನಂದಾ ಜಯರಾಂ, ಚಂದ್ರಶೇಖರ್, ಮುದ್ದೇಗೌಡ, ಸಂತೋಷ್, ಮಹಾದೇವಪ್ಪ, ಎನ್. ಪರಮೇಶ್, ಚುಂಚಯ್ಯ, ಹುರುಗಲವಾಡಿ ರಾಮಯ್ಯ, ಪವನ್ಕುಮಾರ್, ದೇವರಾಜು, ಯತೀಶ್, ಧರ್ಮಾತ್ಮ, ವೈರಮುಡಿ, ಕೃಷ್ಣಪ್ಪ, ರವಿ, ಸೋಮರಾಜ್, ಜನಾರ್ಧನ್ ಇತರರಿದ್ದರು.