
ಮಂಗಳೂರು: ಮಂಗಳೂರು ರೈಲ್ವೆ ಪ್ರದೇಶ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ಶುಕ್ರವಾರ ಮಂಗಳೂರು ಭಾಗದ ಪ್ರಮುಖ ರೈಲು ನಿಲ್ದಾಣಗಳು, ಸರಕು ಸಾಗಣೆ ಯಾರ್ಡ್‌ಗಳು ಹಾಗೂ ಇತರ ರೈಲ್ವೆ ಸೌಲಭ್ಯಗಳನ್ನು ಪರಿಶೀಲಿಸಿದರು.
ಅ. 1ರಿಂದ ಮಂಗಳೂರು ಪ್ರದೇಶ ಮೈಸೂರು ವಿಭಾಗದ ವ್ಯಾಪ್ತಿಗೆ ಸೇರ್ಪಡೆಯಾಗಿದ್ದು, ರೈಲು ಕಾರ್ಯಾಚರಣೆ, ಸುರಕ್ಷತಾ ವ್ಯವಸ್ಥೆ, ನಿರ್ವಹಣಾ ಚಟುವಟಿಕೆ ಹಾಗೂ ಪ್ರಯಾಣಿಕರ ಸೌಲಭ್ಯಗಳ ಸಿದ್ಧತೆಯನ್ನು ಪರಿಶೀಲಿಸುವ ಉದ್ದೇಶದಿಂದ ಪ್ರಧಾನ ವ್ಯವಸ್ಥಾಪಕರು ಭೇಟಿ ನೀಡಿದರು. ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಮತ್ತು ಜೋಕಟ್ಟೆ ಸೇರಿದಂತೆ ಪ್ರಮುಖ ರೈಲ್ವೆ ಸ್ಥಳಗಳಿಗೆ ಭೇಟಿ ನೀಡಿ, ಕಾರ್ಯಾಚರಣೆಯ ಸ್ಥಿತಿಗತಿ ಅವಲೋಕಿಸಿದರು.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.
ರೈಲುಗಳ ಸುರಕ್ಷತೆ, ಸಮಯಪಾಲನೆ, ನಿರ್ವಹಣಾ ವ್ಯವಸ್ಥೆ, ಮಾನವ ಸಂಪನ್ಮೂಲ, ಮೂಲಸೌಕರ್ಯ ಹಾಗೂ ಪ್ರಯಾಣಿಕರ ಸೌಲಭ್ಯಗಳ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಯಿತು. ಕಾರ್ಯಾಚರಣೆಗೆ ಎದುರಾಗಿರುವ ಸಮಸ್ಯೆಗಳು ಹಾಗೂ ಅಗತ್ಯ ಸೌಲಭ್ಯಗಳ ಬೇಡಿಕೆಗಳನ್ನು ಪರಿಶೀಲಿಸಿ, ಅವುಗಳನ್ನು ಸಕಾಲದಲ್ಲಿ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
ಪಡೀಲ್-ಸುಬ್ರಹ್ಮಣ್ಯ ರಸ್ತೆ ರೈಲು ಮಾರ್ಗದ ನಡುವಿನ ಲೆವೆಲ್ ಕ್ರಾಸಿಂಗ್‌ಗಳು, ಫರಂಗಿಪೇಟೆಯಲ್ಲಿ ಹೊಸ ರೈಲು ನಿಲ್ದಾಣ ಸ್ಥಾಪಿಸುವ ಪ್ರಸ್ತಾವ, ಪುತ್ತೂರಿನಲ್ಲಿ ಪ್ಲಾಟ್‌ಫಾರ್ಮ್ ಕಾಮಗಾರಿಗಳನ್ನು ತ್ವರಿತಗೊಳಿಸುವುದು, ಪಾಂಡೇಶ್ವರ ರೈಲ್ವೆ ಕ್ರಾಸಿಂಗ್ ಹಾಗೂ ಮಂಗಳೂರು ವಿಮಾನ ನಿಲ್ದಾಣದ ಸಮೀಪ ಹೊಸ ರೈಲು ನಿಲ್ದಾಣ ಸ್ಥಾಪಿಸುವ ಸಾಧ್ಯತೆ ಕುರಿತು ಸಂಸದ ಕ್ಯಾ.ಬ್ರಿಜೇಶ್ ಚೌಟ ಜೊತೆ ಚರ್ಚಿಸಲಾಯಿತು.
ಮಂಗಳೂರು ಪ್ರದೇಶ ಹೊಸದಾಗಿ ಮೈಸೂರು ವಿಭಾಗದ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ, ರೈಲುಗಳ ಸುಗಮ ಸಂಚಾರ, ನಿರ್ವಹಣಾ ವ್ಯವಸ್ಥೆ ಹಾಗೂ ಪ್ರಯಾಣಿಕ ಸ್ನೇಹಿ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿಭಾಗೀಯ ಆಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.