ಮಂಗಳೂರು/ಕಾರವಾರ (ಮೇ.18): ರಾಜ್ಯಕ್ಕೆ ಭೀತಿಯನ್ನುಂಟುಮಾಡಿದ್ದ ತೌಕ್ಟೆಚಂಡಮಾರುತ ಗುಜರಾತ್ ಕಡೆಗೆ ಚಲಿಸಿದ ಹಿನ್ನೆಲೆಯಲ್ಲಿ ಶನಿವಾರದಿಂದೀಚೆಗೆ ಕರಾವಳಿ ಭಾಗದಲ್ಲಿ ಸುರಿದ ಬಿರುಗಾಳಿ ಮಳೆ ಸೋಮವಾರ ವೇಳೆ ಸಂಪೂರ್ಣ ಮಾಯವಾಗಿದ್ದು ಕಡಲು ಕೊರೆತವೂ ತಹಬದಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರೀ ಹಾನಿಗೊಳಗಾಗಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಏಟಿನಿಂದ ಚೇತರಿಸಿಕೊಳ್ಳಲು ಸಾಕಷ್ಟುಸಮಯ ಬೇಕಾಗಲಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಶನಿವಾರದಿಂದ ಸುರಿದ ಮಳೆ ಭಾನುವಾರದ ವೇಳೆಗೆ ಬಹುತೇಕ ಇಳಿಮುಖವಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಭಾನುವಾರವೂ ಬಿರುಗಾಳಿ ಮಳೆ ಮುಂದುವರಿದಿತ್ತು. ಸೋಮವಾರ ಬೆಳಗಾಗುತ್ತಿದ್ದಂತೆ ಬಿರುಗಾಳಿಯೂ ನಿಂತಿದ್ದು ಮಳೆಯೂ ಭಾರಿ ಪ್ರಮಾಣದಲ್ಲಿ ಸುರಿಯಲಿಲ್ಲ. ಹಾಗಂತ ಕಡಲು ಪ್ರಕ್ಷುಬ್ದವಾಗಿಯೇ ಇದ್ದು ಅಲೆಗಳು ಏಳುತ್ತಲೇ ಇವೆ.
ತೌಕ್ಟೆ ಚಂಡಮಾರುತ ಹಿನ್ನೆಲೆ ಮುಂಬೈನಲ್ಲಿ ಆರೆಂಜ್ ಅಲರ್ಟ್, ಲಸಿಕೆ ಅಭಿಯಾನಕ್ಕೆ ಬ್ರೇಕ್! .
ಏತನ್ಮಧ್ಯೆ ಉತ್ತರ ಕನ್ನಡ ಜಿಲ್ಲೆಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಸುಮಾರು 70 ಮಂದಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಜನತೆ ಈಗ ಹಾನಿಗೊಳಗಾದ ಮನೆಯನ್ನು ಸರಿಪಡಿಸುತ್ತಿದ್ದಾರೆ. ಮನೆಯೊಳಗೆ ನೀರು ನುಗ್ಗಿ ಉಂಟಾಗಿದ್ದ ಸಮಸ್ಯೆಯನ್ನು ನಿವಾರಿಸಿಕೊಳ್ಳುತ್ತಿದ್ದಾರೆ. ವಿದ್ಯುತ್ ಕಂಬಗಳು, ಟಿಸಿ, ಲೈನ್‌ಗಳು ಎಲ್ಲೆಂದರಲ್ಲಿ ಹರಿದು ಬಿದ್ದಿರುವುದರಿಂದ, ವಿದ್ಯುತ್ ಲೈನ್‌ಗಳ ಮೇಲೆ ಮರ, ಟೊಂಗೆಗಳು ಉರುಳಿದ್ದರಿಂದ ಹೆಸ್ಕಾಂ ಸಿಬ್ಬಂದಿ ಅವುಗಳನ್ನು ಸರಿಪಡಿಸಿ ವಿದ್ಯುತ್ ಪೂರೈಕೆ ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಇನ್ನು ಭಟ್ಕಳದಿಂದ ಕಾರವಾರ ತನಕ ವಿವಿಧೆಡೆ ಕಡಲಕೊರತ ಉಂಟಾಗಿದ್ದು ಹೊಲಗದ್ದೆಗಳಿಗೆ ನೀರು ನುಗ್ಗಿ ಅವಾಂತರ ಉಂಟಾಗಿದೆ. ತೋಟಗಾರಿಕೆ ಬೆಳೆಗಳಿಗೂ ಹಾನಿ ಉಂಟಾಗಿದೆ. ತೀರದುದ್ದಕ್ಕೂ ಮೀನುಗಾರಿಕೆ ಬೋಟುಗಳು, ಮೀನು ಬಲೆಗಳಿಗೆ ಹಾನಿ ಉಂಟಾಗಿದೆ.