ದಾವಣಗೆರೆ ಸ್ಮಾರ್ಟ್ ಸಿಟಿಯಿಂದಲೇ ಮುನ್ನುಡಿ: ಸೈಕಲ್ ಬಳಸಿ ಪೆಟ್ರೋಲ್‌ ಉಳಿಸಿ

By Web DeskFirst Published Sep 23, 2019, 11:12 AM IST
Highlights

ಸೈಕಲ್‌ ಬಳಕೆಗೆ ದಾವಣಗೆರೆ ‘ಸ್ಮಾರ್ಟ್‌ ಸಿಟಿ’ ಮುನ್ನುಡಿಯಾಗಲಿ| ಸೈಕಲ್‌ ಜಾಥಾ ಸೈಕ್ಲಥಾನ್‌-2019 ಸಮಾರೋಪದಲ್ಲಿ ಹಿರಿಯ ವ್ಯಂಗ್ಯ ಚಿತ್ರಕಾರ ಎಚ್‌.ಬಿ.ಮಂಜುನಾಥ್‌ ಅಭಿಮತ| ಕಾರು, ಬೈಕ್‌ ಬಳಸುವವರು ಸ್ವಯಂ ಪ್ರೇರಣೆಯಿಂದ ವಾರಕ್ಕೊಂದು ದಿನ ಸೈಕಲ್‌ ಬಳಸುವುದು ಉತ್ತಮ| ವಾರಕ್ಕೊಂದು ದಿನ ಸೈಕಲ್‌ ಬಳಸಿದರೂ ವಾರ್ಷಿಕ 16 ಕೋಟಿ ಬ್ಯಾರಲ್‌ ಪೆಟ್ರೋಲ್‌ ಉಳಿಸಬಹುದು| 

ದಾವಣಗೆರೆ:(ಸೆ.23) ವಾರಕ್ಕೊಂದು ದಿನ ಸೈಕಲ್‌ ಬಳಸಿದರೂ ವಾರ್ಷಿಕ 16 ಕೋಟಿ ಬ್ಯಾರಲ್‌ ಪೆಟ್ರೋಲ್‌ ಉಳಿಸಬಹುದು. ಸ್ಮಾರ್ಟ್‌ ಸಿಟಿಗಳಲ್ಲಿ ಸೈಕಲ್‌ ಸವಾರರಿಗೆ ಸೌಲಭ್ಯ ಕಲ್ಪಿಸುವ ಮೂಲಕ ಇದಕ್ಕೆ ಮುನ್ನುಡಿ ಬರೆಯುವ ಕೆಲಸ ದಾವಣಗೆರೆಯಿಂದಲೇ ಆರಂಭವಾಗಲಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವ್ಯಂಗ್ಯ ಚಿತ್ರಕಾರ ಎಚ್‌.ಬಿ.ಮಂಜುನಾಥ್‌ ಒತ್ತಾಯಿಸಿದರು.

ನಗರದ ಜಯದೇವ ವೃತ್ತದಲ್ಲಿ ಭಾನುವಾರ ಸ್ಫೂರ್ತಿ ಎಜುಕೇಷನಲ್‌ ಟ್ರಸ್ಟ್‌, ದವನ್‌ ಇನ್ಸಟಿಟ್ಯೂಟ್‌ ಆಫ್‌ ಅಡ್ವಾನ್ಸಡ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಿಂದ ಹಮ್ಮಿಕೊಂಡಿದ್ದ ಸೈಕಲ್‌ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಿದ್ಯಾರ್ಥಿಗಳ ಸೈಕಲ್‌ ಜಾಥಾ ಸೈಕ್ಲಥಾನ್‌-2019 ಸಮಾರೋಪದಲ್ಲಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಾರು, ಬೈಕ್‌, ದ್ವಿಚಕ್ರ ವಾಹನ ಬಳಸುವವರು ಸ್ವಯಂ ಪ್ರೇರಣೆಯಿಂದ ವಾರಕ್ಕೊಂದು ದಿನ ಸೈಕಲ್‌ ಬಳಸುವುದು ಉತ್ತಮ ಎಂದು ಹೇಳಿದರು. ಪ್ರತಿಯೊಬ್ಬರೂ ವಾರಕ್ಕೊಮ್ಮೆ ಸೈಕಲ್‌ ಬಳಸಿದರೂ ದೇಶದಲ್ಲಿ ವಾರ್ಷಿಕ 16 ಕೋಟಿ ಬ್ಯಾರಲ್‌ ಪೆಟ್ರೋಲ್‌, ಹಣ ಉಳಿಸಬಹುದು. ಇದರಿಂದ ನಮ್ಮ ದೇಹಾರೋಗ್ಯ, ದೇಶದ ಆರ್ಥಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ದೇಶದಲ್ಲಿ ಪೆಟ್ರೋಲಿಯಂ ವಾಹನಗಳ ಸುಮಾರು 16 ಕೋಟಿಯಷ್ಟಿದ್ದು, ಇದರಲ್ಲಿ ಶೇ.72ರಷ್ಟು ದ್ವಿಚಕ್ರ ವಾಹನಗಳೇ ಇವೆ. ವಾರ್ಷಿಕ ಪೆಟ್ರೋಲಿಯಂ ಬಳಕೆಯಲ್ಲಿ ಶೇ.62 ದ್ವಿಚಕ್ರ ವಾಹನಗಳಿಗೆ ಬಳಕೆಯಾಗುತ್ತಿದೆ. ವಾರಕ್ಕೊಂದು ದಿನ ಸೈಕಲ್‌ ಬಳಸಿದರೂ ಸಾಕಷ್ಟು ಪೆಟ್ರೋಲ್‌ ಉಳಿಸಬಹುದು ಎಂದು ಹೇಳಿದರು. 

ಸೈಕಲ್‌ ಬಳಸುವುದು ಸಂಕೋಚ ಪಡಬೇಕಾದ ವಿಷಯವಲ್ಲ. ಪೆಟ್ರೋಲ್‌, ಪರಿಸರ ಉಳಿಸುತ್ತಿದ್ದೇವೆಂದು ಹೆಮ್ಮೆಪಡುವ ವಿಷಯ, ಎದೆಯುಬ್ಬಿಸಿಕೊಂಡು ಗೌರವ ಮತ್ತು ಹೆಮ್ಮೆಯಿಂದ ರಸ್ತೆಯಲ್ಲಿ ಸೈಕಲ್‌ ತುಳಿಯುವ ಮೂಲಕ ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು, ಉತ್ತಮ ಆರೋಗ್ಯ ಹೊಂದಲು, ಪರಿಸರ ಸಹಕಾರಿ ಎಂದರು.

ಅನೇಕ ರಾಷ್ಟ್ರಗಳಲ್ಲಿ ಪೆಟ್ರೋಲಿಯಂ ಕೊರತೆ ಇಲ್ಲದಿದ್ದರೂ ಪರಿಸರ ರಕ್ಷಣೆಗಾಗಿ ಅಲ್ಲೆಲ್ಲಾ ಸೈಕಲ್‌ ಬಳಕೆದಾರರಿಗೆ ಪ್ರತ್ಯೇಕ ಪಥ, ತೆರಿಗೆಗಳ ವಿನಾಯಿತಿ, ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ, ನಮ್ಮ ದೇಶದಲ್ಲಿ ಇದೆಲ್ಲವೂ ಇಲ್ಲ. ಸ್ಮಾರ್ಟ್‌ಸಿಟಿ ಪರಿಕಲ್ಪನೆಯಲ್ಲಿ ಸೈಕಲ್‌ ಸವಾರರಿಗೆ ಹೆಚ್ಚು ಸೌಲಭ್ಯ ವ್ಯವಸ್ಥೆ ನೀಡಬೇಕು. ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಆರ್ಥಿಕ ಸಂಪನ್ಮೂಲಗಳ ಸದ್ಭಳಕೆ, ಮಾನವ ಸಂಪನ್ಮೂಲದ ಗರಿಷ್ಟಬಳಕೆಯಾದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ದವನ್‌ ಕಾಲೇಜು ಗೌರವ ಕಾರ್ಯದರ್ಶಿ ವೀರೇಶ ಪಟೇಲ್‌ ಮಾತನಾಡಿ, ಸೈಕಲ್‌ ಬಳಸುವುದರಿಂದ ಸಮಯ ಪಾಲನೆ ಸಾಧ್ಯವಿಲ್ಲವೆಂಬ ಮಾತು ಸುಳ್ಳು, ಶಿಸ್ತು ಬದ್ಧ ಜೀವನದಲ್ಲಿ ಸೈಕಲ್‌ ಬಳಕೆಯಿಂದ ಸಮಯ ಉಳಿಯಸಲೂ ಬಹುದು. ಶಿಸ್ತುಬದ್ಧ ಜೀವನದಲ್ಲಿ ಸೈಕಲ್‌ ಬಳಕೆಯಿಂದ ಸಮಯ ಉಳಿಸಲುಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನೂತನ ಕಾಲೇಜಿನಿಂದ ಆರಂಭಗೊಂಡ ಸೈಕ್ಲಥಾನ್‌-2019 ನಗರದ ವಿವಿಧ ರಸ್ತೆಗಳಲ್ಲಿ ಸಾಗಿ, ಜಯದೇವ ವೃತ್ತದಲ್ಲಿ ಮುಕ್ತಾಯಗೊಂಡಿತು. ಸುಮಾರು ಒಂದು ಸಾವಿರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಸೈಕಲ್‌ಗಳೊಂದಿಗೆ ಭಾಗವಹಿಸಿದ್ದರು. ಇದೇ ವೇಳೆ ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳು ರೂಪಕ ಪ್ರದರ್ಶಿಸಿದರು.
 

click me!