ಶಿವಮೊಗ್ಗ : 2 ಸಾವಿರಕ್ಕೂ ಹೆಚ್ಚು ನಿವೇಶನ ಹಂಚಿಕೆ

By Kannadaprabha News  |  First Published Sep 23, 2019, 11:08 AM IST

ಸಮಾಜವನ್ನು ಅಭಿವೃದ್ಧಿ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಿವಮೊಗ್ಗದ ನೂತನ ಡಿಡಿಪಿಐ ಮಂಜುನಾಥ್‌ ಕಾರ್ಯಕ್ರಮವೊಂದರಲ್ಲಿ ಹೇಳಿದರು.


ಶಿವಮೊಗ್ಗ [ಸೆ.23]:  ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದ್ದು, ಈ ವೃತ್ತಿಯಿಂದ ಗೌರವ ಸಂಪಾದಿಸಬಹುದೇ ಹೊರತು ಬೇರೆ ಸರ್ಕಾರಿ ನೌಕರರಂತೆ ಆದಾಯಕ್ಕಿಂತ ಹೆಚ್ಚು ಸಂಪಾದನೆ ಸಾಧ್ಯವಿಲ್ಲ ಎಂದು ನೂತನ ಡಿಡಿಪಿಐ ಮಂಜುನಾಥ್‌ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದ ನಿಜಲಿಂಗಪ್ಪ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ 9ನೇ ವರ್ಷದ ಮಹಾಸಭೆಯ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

Tap to resize

Latest Videos

undefined

ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘವು ಕಡಿಮೆ ಸಮಯದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದು, ರಾಜ್ಯ ಮಟ್ಟಕ್ಕೆ ವಿಸ್ತಾರಗೊಂಡಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಸಹಕಾರ ಸಂಘಗಳಲ್ಲಿ ಆರ್ಥಿಕ ಶಿಸ್ತು, ಸಮರ್ಪಣಾ ಮನೋಭಾವ ಬಹಳ ಮುಖ್ಯ. ಆಗ ಮಾತ್ರ ಸಹಕಾರ ಸಂಘಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ಸುಮಾರು 2 ಸಾವಿರಕ್ಕೂ ಅಧಿಕ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಹೆಮ್ಮೆಯ ಸಂಗತಿ. ಲಾಭದಾಯಕವಾಗಿರುವ ಸಹಕಾರ ಸಂಘಗಳಲ್ಲಿ ಹಣ ದುರುಪಯೋಗದ ಅರೋಪ ಸಾಮಾನ್ಯ. ಆದರೆ ಶಿಕ್ಷಕರ ಗೃಹ ನಿರ್ಮಾಣ ಮಂಡಳಿಯು ಇದಕ್ಕೆ ವ್ಯತಿರಿಕ್ತವಾಗಿರುವುದು ಆಡಳಿತ ಮಂಡಳಿಯ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ ಎಂದರು.

ಶಿಕ್ಷಕರಿಂದ ವಿದ್ಯೆ ಕಲಿತ ಅನೇಕ ವಿದ್ಯಾರ್ಥಿಗಳು ಒಳ್ಳೆಯ ಉದ್ಯೋಗ ಪಡೆದು ಕೈತುಂಬಾ ಸಂಬಳ, ಮನೆ, ಆಸ್ತಿ-ಪಾಸ್ತಿ, ಸಂಪತ್ತನ್ನು ಸಂಪಾದಿಸುತ್ತಾರೆ. ಆದರೆ ವಿದ್ಯೆ ಕಲಿಸಿದ ಗುರುಗಳು ನಿವೃತ್ತಿ ಅಂಚನ್ನು ತಲುಪಿದರೂ ಕೂಡ ಸ್ವತಃ ಮನೆಯೊಂದನ್ನು ಕಟ್ಟಿಕೊಳ್ಳುವುದು ಸುಲಭವಲ್ಲ. ಆದರೆ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘವು ಸಹಕಾರಿ ಕ್ಷೇತ್ರದ ಮೂಲಕ ನಿವೇಶನ ನೀಡುತ್ತಿರುವುದು ಶ್ಲಾಘನೀಯ. ಶಿಕ್ಷಕರು ತಾವು ಗಳಿಸುವ ಆದಾಯದಲ್ಲೇ ಕನಿಷ್ಠ ನಿವೃತ್ತಿಯ ವೇಳೆಗಾದರೂ ತಲೆಯ ಮೇಲೊಂದು ಸೂರು (ಮನೆ) ನಿರ್ಮಿಸಿಕೊಳ್ಳುವಂತಾಗಲಿ. ಈ ನಿಟ್ಟಿನಲ್ಲಿ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘವು ಕಾರ್ಯೋನ್ಮುಖವಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು ಹರ್ಷ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮಾತನಾಡಿ, ಪ್ರತಿಯೊಬ್ಬ ಪ್ರಾಥಮಿಕ ಶಿಕ್ಷಕರು ಸ್ವತಃ ಮನೆಯನ್ನು ಹೊಂದಬೇಕೆಂಬುವುದೇ ಗೃಹ ನಿರ್ಮಾಣ ಸಹಕಾರ ಸಂಘದ ಗುರಿಯಾಗಿದೆ. ಭೂಮಿಯ ಬೆಲೆ ಜಾಸ್ತಿಯಾಗಿದ್ದು, ಮನೆ ನಿರ್ಮಾಣದ ವಸ್ತುಗಳೂ ಕೂಡ ದುಬಾರಿಯಾಗಿವೆ. ಶಿಕ್ಷಕರು ಕಡಿಮೆ ವೆಚ್ಚದಲ್ಲಿ ಸ್ವತಃ ಮನೆ ಹೊಂದಲು ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದರು.

ವೇದಿಕೆಯಲ್ಲಿ ಎಸ್‌ಎಸ್‌ಎನ್‌ ಯೋಜನಾ ಸಮನ್ವಯಾಧಿಕಾರಿ ಟಿ.ಶಂಕರಪ್ಪ, ಬಿಇಒಗಳಾದ ಎಚ್‌.ಆರ್‌.ಕೃಷ್ಣಮೂರ್ತಿ, ಎಂ.ಸಿ.ಆನಂದ್‌, ಆನಂದ್‌ಕುಮಾರ್‌, ಪಿ.ನಾಗರಾಜ್‌, ಮಂಜುನಾಥ್‌, ಸುಮಂಗಳ, ಗಣಪತಿ, ಮಂಜುನಾಥ್‌, ರಾಮಪ್ಪಗೌಡ, ಹಾವೇರಿ ಜಿಪ್ರಾಶಾಶಿ ಸಂಘದ ಅಧ್ಯಕ್ಷ ಎಸ್‌.ಆರ್‌.ಆಣ್ಣಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ನಿವೃತ್ತ ಮತ್ತು ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು.

click me!