ಪೊಲೀಸ್ ವಶದಲ್ಲಿದ್ದಾಗಲೇ ವ್ಯಕ್ತಿ ಸಾವು; ಹುಳಿಯಾರು ಠಾಣೆಗೆ ಗ್ರಾಮಸ್ಥರ ಮುತ್ತಿಗೆ, ಬೀಗ ಜಡಿದು ಪ್ರತಿಭಟನೆ

Published : Mar 20, 2026, 07:21 AM IST
Custodial Death Sparks Protests Villagers Lay Siege to Huliyaru Police Station tumakuru

ಸಾರಾಂಶ

ತುಮಕೂರಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ, ಇಸ್ಪೀಟ್ ಆಟದ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯು ಪೊಲೀಸ್ ದೌರ್ಜನ್ಯದಿಂದ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಎಸ್‌ಪಿ ಮನವೊಲಿಕೆ ಬಳಿಕ ಪ್ರತಿಭಟನೆ ಕೈಬಿಟ್ಟರು.

ತುಮಕೂರು (ಮಾ.20): ಇಸ್ಪಿಟ್ ಆಡುತ್ತಿದ್ದಾರೆಂದು ವಶಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬರು ಪೊಲೀಸ್ ವಶದಲ್ಲಿದ್ದಾಗಲೇ ಸಾವನ್ನಪ್ಪಿದ ಹಿನ್ನೆಲೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ ನಡೆದು ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಘಟನೆ ನಡೆದಿದ್ದು ಹೇಗೆ?

ಯಳನಾಡು ಗ್ರಾಮದಲ್ಲಿ ಇಸ್ಪೀಟ್ ಆಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಹುಳಿಯಾರು ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಕಾಂತರಾಜು (45) ಸೇರಿದಂತೆ ಆರು ಜನರನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆತಂದಿದ್ದರು. ಆದರೆ, ಠಾಣೆಗೆ ಬಂದ ಕೆಲವೇ ಸಮಯದಲ್ಲಿ ಕಾಂತರಾಜು ಸಾವನ್ನಪ್ಪಿದ್ದಾರೆ. ಇದು ಗ್ರಾಮಸ್ಥರ ಮತ್ತು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಯಿತು.

ಠಾಣೆಗೆ ಬೀಗ ಜಡಿದು ಕುಟುಂಬಸ್ಥರು, ಗ್ರಾಮಸ್ಥರು ಆಕ್ರೋಶ

ಕಾಂತರಾಜು ಅವರ ಸಾವು ಪೊಲೀಸ್ ದೌರ್ಜನ್ಯದಿಂದಲೇ ನಡೆದಿದೆ ಎಂದು ಆರೋಪಿಸಿದ ನೂರಾರು ಗ್ರಾಮಸ್ಥರು, ಹುಳಿಯಾರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬೀಗ ಜಡಿದರು. ಮೃತದೇಹವನ್ನು ಠಾಣೆಯ ಒಳಗೇ ಇಟ್ಟುಕೊಂಡು, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದರು. ಠಾಣೆಯ ಆವರಣದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಯಿತು.

ಹೃದಯಾಘಾತದಿಂದ ಸಾವು?

ಪ್ರಾಥಮಿಕ ಮಾಹಿತಿಯ ಪ್ರಕಾರ, ಠಾಣೆಗೆ ಕರೆತಂದ ಬಳಿಕ ಕಾಂತರಾಜು ಅವರಿಗೆ ಪೊಲೀಸರ ಭಯದಿಂದಾಗಿ ತೀವ್ರ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಭೇಟಿ

ವಿಷಯ ತಿಳಿಯುತ್ತಿದ್ದಂತೆಯೇ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶೋಕ್ ಕೆ.ವಿ. ಅವರು ಹುಳಿಯಾರು ಠಾಣೆಗೆ ಭೇಟಿ ನೀಡಿದರು. ಆಕ್ರೋಶಗೊಂಡಿದ್ದ ಗ್ರಾಮಸ್ಥರು ಮತ್ತು ಮೃತನ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ ಎಸ್ಪಿ, 'ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಒಂದು ವೇಳೆ ಪೊಲೀಸರ ತಪ್ಪು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.

ಪ್ರತಿಭಟನೆ ಅಂತ್ಯ; ಶವ ಪರೀಕ್ಷೆಗೆ ರವಾನೆ

ಎಸ್ಪಿ ಅವರ ಭರವಸೆಯ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು. ಬಳಿಕ ಮೃತದೇಹವನ್ನು ಠಾಣೆಯಿಂದ ಹೊರತೆಗೆದು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಉಡುಪಿ ಜಿಲ್ಲೆಗೆ ಇಂದು ಸಾರ್ವತ್ರಿಕ ರಜೆ ಘೋಷಿಸಿದ ಜಿಲ್ಲಾಧಿಕಾರಿ, ಹಬ್ಬದ ಸಂಭ್ರಮ ಡಬಲ್
Karnataka News Live: ಉಡುಪಿ ಜಿಲ್ಲೆಗೆ ಇಂದು ಸಾರ್ವತ್ರಿಕ ರಜೆ ಘೋಷಿಸಿದ ಜಿಲ್ಲಾಧಿಕಾರಿ, ಹಬ್ಬದ ಸಂಭ್ರಮ ಡಬಲ್