ವಿದ್ಯಾರ್ಥಿಗಳು ಸಂಸ್ಕೃತಿ ಮತ್ತು ಪರಿಸರವನ್ನು ಉಳಿಸಬೇಕು. ಕನ್ನಡವನ್ನು ಓದುವುದು, ಬಳಸುವುದು ಮತ್ತು ಮಾತಾಡುವುದರ ಮೂಲಕ ಕನ್ನಡವನ್ನೂ ಉಳಿಸಬೇಕು ಎಂದು ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.
ಮೈಸೂರು (ಜು.23): ವಿದ್ಯಾರ್ಥಿಗಳು ಸಂಸ್ಕೃತಿ ಮತ್ತು ಪರಿಸರವನ್ನು ಉಳಿಸಬೇಕು. ಕನ್ನಡವನ್ನು ಓದುವುದು, ಬಳಸುವುದು ಮತ್ತು ಮಾತಾಡುವುದರ ಮೂಲಕ ಕನ್ನಡವನ್ನೂ ಉಳಿಸಬೇಕು ಎಂದು ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು. ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ 2023- 24ನೇ ಸಾಲಿನ ಸಾಂಸ್ಕೃತಿಕ ವೇದಿಕೆ ಮತ್ತು ಕ್ರೀಡಾ ಚಟುವಟಿಕೆಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಅಂತಃಶಕ್ತಿ, ಧೀಃಶಕ್ತಿಗಳನ್ನು ಬಳಸಿಕೊಂಡು ಸಾಧನೆಯ ಹಾದಿಯಲ್ಲಿ ಮುಂದುವರಿಯಬೇಕು ಎಂದರು.
ಸಾಮಾಜಿಕವಾಗಿ ಸಂಸ್ಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಕಲೆಯಾಗಿ ಅರಳಿಸಬೇಕು. ಭ್ರಷ್ಟಾಚಾರ ದೇಶಕ್ಕೆ ಹಾನಿ, ಜಾತಿ ಸಮಾಜಕ್ಕೆ ಹಾನಿ, ಕ್ರೀಡೆಯಲ್ಲಿ ಜಾತಿಗೆ ಅವಕಾಶವಿಲ್ಲ. ಧರ್ಮದಲ್ಲಿ ಜಾತಿ ಸೇರಿಕೊಂಡರೆ ದೇಶದ ಅವನತಿ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆದರೆ ಮಾತ್ರ ದೇಶದ ಪ್ರಗತಿ ಎಂದು ಅವರು ಹೇಳಿದರು. ಕಾಲೇಜು ವಿದ್ಯಾರ್ಥಿಗಳನ್ನು ಕಾಲುದಾರಿಯಿಂದ ಹೆದ್ದಾರಿಗೆ ತರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತದೆ. ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ 20 ಕೃಪಾಂಕಗಳನ್ನು ಕೊಡಬೇಕೆಂದು ನೋಡಿದಾಗ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಮತ್ತು ಆಲೋಚನಾ ಶಕ್ತಿಗೇ ನಾವು ರಜೆ ಕೊಟ್ಟಂತೆ ಕಾಣುತ್ತದೆ.
undefined
ಬಿ.ಕೆ.ಹರಿಪ್ರಸಾದ್ ನೋವು ಸರ್ಕಾರಕ್ಕೆ ಅಪಾಯಕಾರಿ: ಕೋಟ ಶ್ರೀನಿವಾಸ ಪೂಜಾರಿ
ಹದಿಹರೆಯದ ಮಕ್ಕಳು ತಂದೆ ತಾಯಿಯೊಂದಿಗೆ, ಹಿರಿಯರೊಂದಿಗೆ ಮತ್ತು ಸಹವರ್ತಿಗಳೊಂದಿಗೆ ಅಚಾತುರ್ಯದಿಂದ ನಡೆದುಕೊಂಡ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಓದುವಾಗ, ನೋಡುವಾಗ ದೇಶದ ಭವಿಷ್ಯದ ಬಗ್ಗೆ ಚಿಂತೆ ಕಾಡುತ್ತದೆ ಎಂದು ಅವರು ವಿಷಾದಿಸಿದರು. ಜೆಎಸ್‌ಎಸ್ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ಎ. ಸಾಂಬಶಿವಯ್ಯ ಮಾತನಾಡಿ, ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸುವ ಸಂಪನ್ಮೂಲ ಕೇಂದ್ರಗಳಾಗಬೇಕು. ಪಠ್ಯಗಳಷ್ಟೇ ಪಠ್ಯೇತರ ಚಟುವಟಿಕೆಗಳು ಸಹ ಬಹಳ ಮುಖ್ಯ. ವ್ಯಕ್ತಿತ್ವ ವಿಕಸನ, ಕ್ರೀಡಾ ಮನೋಭಾವ ಮತ್ತು ಶಿಸ್ತು ಬೆಳೆಸಿಕೊಳ್ಳಲು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವೇದಿಕೆಯಾಗುತ್ತವೆ ಎಂದು ತಿಳಿಸಿದರು.
2022- 23ನೇ ಶೈಕ್ಷಣಿಕ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದ ಬೇಲೂರು ಸರ್ಕಾರಿ ಪಾಲಿಟೆಕ್ನಿಕ್‌ನ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಕನಸಿಗೆ ಆಡಚಣೆ ಇಲ್ಲದ ನಿದ್ರೆಬೇಕು. ಗುರಿಗೆ ನಿದ್ರೆಯೇ ಅಡಚಣೆ. ಪರಿಶ್ರಮ, ಚತುರತೆ, ಚುರುಕುತನ ಮತ್ತು ಸಂಘಟನಾತ್ಮಕ ಕಾರ್ಯನಿರ್ವಹಣೆಯ ಕಲೆಗಳು ಇದ್ದಾಗ ಮಾತ್ರ ಗುರಿ ಮುಟ್ಟುವುದು ಸುಲಭ ಎಂದು ಹೇಳಿದರು. ಅಂತಾರಾಷ್ಟ್ರೀಯ ಖೋಖೋ ಕ್ರೀಡಾಪಟು ಎಂ. ವೀಣಾ ಮಾತನಾಡಿ, ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲ ಕಾಪಾಡಿಕೊಳ್ಳಲು ಬಹಳ ಮುಖ್ಯ. ಯಾವುದೇ ಕ್ಷೇತ್ರದಲ್ಲಾದರೂ ಸಾಧನೆಗೆ ಕೊನೆಯಿಲ್ಲ. ಸಾಧನೆಗೆ ಬಹಳ ಪರಿಶ್ರಮಬೇಕು. ಪರಿಶ್ರಮವನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.
ಗೃಹಜ್ಯೋತಿ, ಗೃಹಲಕ್ಷ್ಮಿಯಿಂದ ಬಡವರಿಗೆ ಸಹಾಯ: ಸಚಿವ ನಾಗೇಂದ್ರ
ಇದೇ ವೇಳೆ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಜೆಎಸ್‌ಎಸ್ ಮಹಾವಿದ್ಯಾಪೀಠ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್. ಮೂಗೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಪಿ. ವಿಜಯೇಂದ್ರಕುಮಾರ್, ಪಿಯು ಕಾಲೇಜಿನ ಪ್ರಾಂಶುಪಾಲ ಎಸ್. ಸೋಮಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ಟಿ. ಅರವಿಂದ ಇದ್ದರು. ಎಂ. ಶಿವಕುಮಾರ್ ನಿರೂಪಿಸಿದರು. ಅಂಕಿತಾ ತಂಡದವರು ಪ್ರಾರ್ಥಿಸಿದರು. ಟಿ. ಗುರುಪಾದಸ್ವಾಮಿ ಸ್ವಾಗತಿಸಿದರು. ಎಚ್.ಆರ್. ಗಾಯತ್ರಿ ವಂದಿಸಿದರು.