ಶೀಘ್ರದಲ್ಲಿ ಚಿತ್ರದುರ್ಗ ಮೆಡಿಕಲ್‌ ಕಾಲೇಜು ಶುರು: ಸಚಿವ ಡಿ.ಸುಧಾಕರ್‌

By Kannadaprabha NewsFirst Published Jul 23, 2023, 5:21 PM IST
Highlights

ಆರ್ಥಿಕ ಇಲಾಖೆ ಅನುಮತಿ ಕೊಟ್ಟತಕ್ಷಣವೇ ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು.

ಚಿತ್ರದುರ್ಗ (ಜು.23): ಆರ್ಥಿಕ ಇಲಾಖೆ ಅನುಮತಿ ಕೊಟ್ಟತಕ್ಷಣವೇ ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು. ಜಿಲ್ಲಾ ನಾಯಕ ಸಮಾಜದ ವತಿಯಿಂದ ರೆಡ್ಡಿ ಸಮುದಾಯಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮೆಡಿಕಲ್‌ ಕಾಲೇಜು, ಅಪ್ಪರ್‌ಭದ್ರಾ ಯೋಜನೆ ಮುಗಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ರಾಜ್ಯದ ಜನ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಯಿಟ್ಟು ಕಾಂಗ್ರೆಸ್‌ಗೆ ಸ್ಪಷ್ಟಬಹುಮತ ನೀಡಿದ್ದಾರೆ. ನುಡಿದಂತೆ ನಡೆಯುವ ಪಕ್ಷ ನಮ್ಮದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ತಿಂಗಳಲ್ಲಿ ಐದು ಗ್ಯಾರಂಟಿ ಜನತೆಗೆ ನೀಡಿ ಮೂರು ಲಕ್ಷ ಕೋಟಿಗೂ ಅಧಿಕ ಬಜೆಟ್‌ ಮಂಡಿಸಿದ್ದಾರೆ. ರಾಜ್ಯದ ಜನತೆ ಆಶೋತ್ತರ ಈಡೇರಿಸಲು ಸರ್ಕಾರ ಬದ್ಧವಿದೆ ಎಂದರು. ಮಾಜಿ ಸಚಿವ ಎಚ್‌.ಆಂಜನೇಯ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತೀಶ್‌ ಜಾರಕಿಹೊಳಿ, ರಾಜಣ್ಣ ಹಾಗೂ ವಾಲ್ಮೀಕಿ ಸಮುದಾಯದ ಎಲ್ಲರನ್ನು ಕರೆಸಿ ವಾಲ್ಮೀಕಿ ಭವನ ಉದ್ಘಾಟಿಸೋಣ. ನಾಯಕ ಸಮುದಾಯದ ಶಕ್ತಿ ಕೇಂದ್ರವಾಗಿರುವ ವಾಲ್ಮೀಕಿ ಭವನಕ್ಕೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಹಣ ಮಂಜೂರು ಮಾಡಿದ್ದೆ. 

ಚಂದ್ರವಳ್ಳಿ ಪಕ್ಕದ‌ ಗುಡ್ಡದಲ್ಲಿ ಚಿರತೆ ಹಾವಳಿ: ‌ಹಸು ಕೊಂದು ಪರಾರಿ

ಚಿತ್ರದುರ್ಗ ಮೆಡಿಕಲ್‌ ಕಾಲೇಜಿಗೆ ಮದಕರಿನಾಯಕನ ಹೆಸರಿಡಲು ನನ್ನ ಸಹಮತವಿದೆ. ಹಂಪಿ ಮಾದರಿಯಲ್ಲಿ ಪ್ರತಿ ವರ್ಷವೂ ದುರ್ಗೋತ್ಸವ ವಿಜೃಂಭಣೆಯಿಂದ ಆಚರಿಸೋಣ. ಮದಕರಿನಾಯಕ ಥೀಂ ಪಾರ್ಕ್ ಕೂಡ ಕಾಂಗ್ರೆಸ್‌ ಸರ್ಕಾರದಲ್ಲಿ ಆಗುತ್ತದೆ. ಜಿಲ್ಲೆಯ ಅಭಿವೃದ್ದಿಗಾಗಿ ಮುಖ್ಯಮಂತ್ರಿ ಬಳಿ ನಿಯೋಗ ಹೋಗೋಣ ಎಂದು ಹೇಳಿದರು. ಮೊಳಕಾಲ್ಮುರು ಶಾಸಕ ಎನ್‌.ವೈ.ಗೋಪಾಲಕೃಷ್ಣ ಮಾತನಾಡಿ ಚಿತ್ರದುರ್ಗ ಜಿಲ್ಲೆಗೆ ಅಪ್ಪರ್‌ಭದ್ರಾ ಯೋಜನೆ ತಂದು ಚಳ್ಳಕೆರೆ ಮೂಲಕ ಮೊಳಕಾಲ್ಮುರಿಗೂ ನೀರು ಹರಿಸಬೇಕಿದೆ ಎಂದರು.

ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಮಾತನಾಡಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್‌ ಮೇಲೆ ನಂಬಿಕೆಯಿಟ್ಟು ಸ್ಪಷ್ಟಬಹುಮತ ನೀಡಿದ್ದರಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಸರ್ಕಾರದ ಮೇಲೆ ಜನ ಇಟ್ಟಿರುವ ಭರವಸೆಗೆ ಚ್ಯುತಿ ಬಾರದಂತೆ ಅಭಿವೃದ್ಧಿ ಕೆಲಸಗಳಾಗುತ್ತದೆ. ಅಧಿಕಾರ ಸುಖದ ಸುಪ್ಪತ್ತಿಗೆಯಲ್ಲ. ಮುಳ್ಳಿನ ಹಾಸಿಗೆಯಿದ್ದಂತೆ. ರಾಜ್ಯದಲ್ಲೀಗ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದರು. ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಮಾತನಾಡಿ ಹಿರಿಯರ ಸಲಹೆ ಸಹಕಾರ ಸೂಚನೆಗಳಂತೆ ಅಭಿವೃದ್ಧಿ ಕಾರ್ಯ ನಡೆಯುತ್ತದೆ. ವಿದೇಶಿ ಪ್ರವಾಸಿಗರು ಸೇರಿ ಎಲ್ಲರೂ ಬಂದು ನಮ್ಮ ದುರ್ಗದ ಕೋಟೆ ವೀಕ್ಷಿಸುವಂತೆ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದೆಂದು ಹೇಳಿದರು.

ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ. ಕಾಂತರಾಜ್‌ ಪ್ರಾಸ್ತಾವಿಕ ಮಾತನಾಡಿ ಇಲ್ಲಿಯವರೆವಿಗೂ ನಮ್ಮ ಸಮುದಾಯಕ್ಕೆ ಯಾವುದೇ ಗುರುತರವಾದ ಕೆಲಸ ಆಗಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಚಿತ್ರದುರ್ಗ ಆಳಿದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿಯಿಂದಲೂ ಊರಿಗೆ, ನಮ್ಮ ಜನಾಂಗಕ್ಕೆ ಕಿಂಚಿತ್ತೂ ಸಹಾಯವಾಗಿಲ್ಲ. ಚಿತ್ರದುರ್ಗ ಕೋಟೆಗೆ ಹೋಗಲು ನೇರವಾದ ರಸ್ತೆಯಿಲ್ಲ. ನಮ್ಮ ಜನಾಂಗದ ಯಾರೊಬ್ಬರಿಗೂ ಮಾಹಿತಿ ನೀಡದೆ ವಾಲ್ಮೀಕಿ ಭವನವನ್ನು ನೆಪ ಮಾತ್ರಕ್ಕೆ ಉದ್ಘಾಟಿಸಲಾಗಿದೆ. ಅಲ್ಲ​ದೆ ಚಿತ್ರದುರ್ಗದಲ್ಲಿ ಮೆಡಿಕಲ್‌ ಕಾಲೇಜು ಆರಂಭವಾದರೆ ಮದಕರಿನಾಯಕ ಹೆಸರಿಡುವಂತೆ ವೇದಿಕೆಯಲ್ಲಿದ್ದ ಎಲ್ಲಾ ಮುಖಂಡರಿಗೆ ಮನವಿ ಮಾಡಿದರು.

ಯು.ಟಿ.ಖಾದರ್‌ ಸಭಾ​ಧ್ಯಕ್ಷ ಪೀಠಕ್ಕೆ ಯೋಗ್ಯ​ರ​ಲ್ಲ: ಈಶ್ವ​ರಪ್ಪ

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ವದಿಗೆರೆ ರಮೇಶ್‌ ಮಾತನಾಡಿದರು. ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಎಚ್‌.ಜೆ. ಕೃಷ್ಣಮೂರ್ತಿ, ಮದಕರಿನಾಯಕ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಸಂದೀಪ್‌, ತಿಪ್ಪೇಸ್ವಾಮಿ ಕಲ್ಲವ್ವನಾಗತಿಹಳ್ಳಿ, ನಾಗರಾಜ್‌ ಜಾನ್ಹವಿ, ಮದಕರಿನಾಯಕ, ಸಿರುವಲ್ಲಪ್ಪ, ಶೇಖರಪ್ಪ, ಜೆ.ಎನ್‌.ಕೋಟೆ ಗುರುಸಿದ್ದಪ್ಪ, ರತ್ನಮ್ಮ, ಸರ್ವೆ ಬೋರಣ್ಣ, ಲೋಹಿತ್‌ ಸೇರಿ ನಾಯಕ ಸಮಾಜದ ಅನೇಕರು ವೇದಿಕೆಯಲ್ಲಿದ್ದರು. ಶೈಲೇಂದ್ರ ಪ್ರಾರ್ಥಿಸಿದರು. ಎಚ್‌.ಅಂಜಿನಪ್ಪ ಸ್ವಾಗತಿಸಿದರು. ಡಿ.ಗೋಪಾಲಸ್ವಾಮಿ ನಾಯಕ ನಿರೂಪಿಸಿದರು.

click me!