ನಂಜೇಶ್‍ಸ್ವಾಮಿಗೆ ಸೇರಿದ ಅಕ್ಕಿ ಗಿರಣಿ ಬಳಿ ಹಂದಿ ಬೇಟೆಗೆಂದು ಇಟ್ಟಿದ್ದ ಎರಡು ಬಾಂಬ್‍ಗಳಲ್ಲಿ ಒಂದು ಬಾಂಬ್ ಅನ್ನು ಮಾಟ-ಮಂತ್ರಕ್ಕೆ ಇಟ್ಟಿರುವ ತೆಂಗಿನ ಕಾಯಿ ಎಂದು ಭಾವಿಸಿ ಅದನ್ನು ಜಜ್ಜಲು ಹೋದ ನೌಶದ್ ಪಾಷಾಗೆ ನಾಡಬಾಂಬ್ ಸಿಡಿದು ಕೈ ಬೆರಳುಗಳು ಛಿದ್ರವಾಗಿದೆ.
ಕನಕಪುರ(ಡಿ.05): ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಳ್ಳಹಳ್ಳಿ ಸಮೀಪದ ನೇರಳಹಳ್ಳಿದೊಡ್ಡಿಯಲ್ಲಿ ಮತ್ತೆ ನಾಡಬಾಂಬ್ ಸದ್ದು ಕೇಳಿಸಿದ್ದು, ಬಾಂಬ್ ಸಿಡಿತಕ್ಕೆ ವ್ಯಕ್ತಿಯೊಬ್ಬನ ಕೈ ಛಿದ್ರಗೊಂಡು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ. ಭಾನುವಾರ ಗ್ರಾಮದ ನಂಜೇಶ್‍ಸ್ವಾಮಿಗೆ ಸೇರಿದ ಅಕ್ಕಿ ಗಿರಣಿ ಬಳಿ ಹಂದಿ ಬೇಟೆಗೆಂದು ಇಟ್ಟಿದ್ದ ಎರಡು ಬಾಂಬ್‍ಗಳಲ್ಲಿ ಒಂದು ಬಾಂಬ್ ಅನ್ನು ಮಾಟ-ಮಂತ್ರಕ್ಕೆ ಇಟ್ಟಿರುವ ತೆಂಗಿನ ಕಾಯಿ ಎಂದು ಭಾವಿಸಿ ಅದನ್ನು ಜಜ್ಜಲು ಹೋದ ನೌಶದ್ ಪಾಷಾಗೆ ನಾಡಬಾಂಬ್ ಸಿಡಿದು ಕೈ ಬೆರಳುಗಳು ಛಿದ್ರವಾಗಿದೆ. ವಿಷಯ ತಿಳಿದ ಕೂಡಲೇ ಗ್ರಾಮಸ್ಥರು, ಪೋಷಕರು ಗಾಯಾಳುವನ್ನು ಬೆಂಗಳೂರಿನ ಸಂಜಯ್‍ಗಾಂಧಿ ಆಸ್ಪತ್ರೆಗೆ ಸಾಗಿಸಿದ್ದಾರೆನ್ನಲಾಗಿದೆ.
ಈ ಹಿಂದೆಯೂ ಸಹ ಇದೇ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ ಇದೇ ರೀತಿ ಘಟನೆ ನಡೆದ ಬಗ್ಗೆ ಗ್ರಾಮಸ್ಥರು ತಿಳಿಸಿದ್ದಾರೆ. ವಿಷಯ ತಿಳಿದ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಎಲ್.ಕೃಷ್ಣ, ಸಬ್‍ಇನ್ಸ್‍ಪೆಕ್ಟರ್ ರವಿಕುಮಾರ್ ಸ್ಥಳಕ್ಕೆ ಧಾವಿಸಿ, ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಾಜಿ ಸಚಿವ ಸಿಪಿ ಯೋಗೇಶ್ವರ್ ಭಾವ ಮಹದೇವಯ್ಯ ಕೊಲೆಯಾದ್ರಾ? ದಟ್ಟ ಕಾಡೊಳಗೆ ಮೂಟೆಯಲ್ಲಿ ಶವ ಪತ್ತೆ!
ಹಂದಿ ಬೇಟೆಗೆ ತಯಾರಿ:
ನೇರಳಹಳ್ಳಿದೊಡ್ಡಿಯಲ್ಲಿ ಹಂದಿ ಬೇಟೆಗೆಂದು ನಾಡಬಾಂಬುಗಳನ್ನು ತಂದಿಡಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಕ್ಕಿ ಗಿರಣಿಯಲ್ಲಿ ಕೆಲಸ ನಿರ್ವಹಿಸುವ ನೌಶದ್ ಪಾಷ ಮಾಟ-ಮಂತ್ರ ಮಾಡಿಸಿ ತೆಂಗಿನ ಕಾಯಿ ಇಲ್ಲಿ ಇಟ್ಟಿರಬಹುದು ಎಂದು ಪಾಷ ಅದನ್ನು ಪರಿಶೀಲಿಸಿ ಪಕ್ಕದಲ್ಲಿದ್ದ ಕಲ್ಲಿನ ಮೇಲಿಟ್ಟು ಜಜ್ಜುವ ವೇಳೆ ಈ ಅವಘಡ ಸಂಭವಿಸಿದೆ. ಸ್ಫೋಟದ ಶಬ್ಧಕ್ಕೆ ಗ್ರಾಮಸ್ಥರೂ ಬೆಚ್ಚಿ ಬಿದ್ದು ಸ್ಥಳಕ್ಕೆ ಬಂದು ನೋಡಿದಾಗ ನೌಶದ್ ಪಾಷನಿಗೆ ಗಾಯವಾಗಿರುವುದು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕ್ರಮಕ್ಕೆ ಆಗ್ರಹ:
ಬಿಎಸ್ಪಿ ಜಿಲ್ಲಾಧ್ಯಕ್ಷ ನೇರಳಹಳ್ಳಿದೊಡ್ಡಿ ಕೃಷ್ಣಪ್ಪ ಮಾತನಾಡಿ, ಇಂತಹ ಘಟನೆಗಳನ್ನು ನಮ್ಮ ತಾಲೂಕಿನಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು.ಗ್ರಾಮದಲ್ಲಿ ಈ ರೀತಿ ನಾಡಬಾಂಬ್ ಸ್ಪೋಟ ಹೊಸದೇನಲ್ಲ ಈ ಹಿಂದೆ ಯೂ ಸ್ಫೋಟವಾಗಿತ್ತು. ಕಳೆದ ಮೂರು ತಿಂಗಳ ಹಿಂದೆಯೂ ಹಾರೋಬಲೆ ಸಮೀಪದ ಜ್ಯೋತಿ ನಗರದಲ್ಲೂ ನಾಡಬಾಂಬ್ ಸ್ಫೋಟದಿಂದ ವ್ಯಕ್ತಿಗೆ ತೀವ್ರ ಗಾಯವಾಗಿತ್ತು. ಇಂತಹ ಪ್ರಕರಣಗಳನ್ನು ಸಮಗ್ರ ತನಿಖೆ ಮಾಡಿ ಶಿಸ್ತು ಕ್ರಮ ಕೈಗೊಳ್ಳದ ಕಾರಣ ಇಂತಹ ಪ್ರಕರಣಗಳು ಮರು ಕಳುಹಿಸುತ್ತಿವೆ. ಸರ್ಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳ ಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.