ರೋಗ ಬಾಧೆಗೆ ಔಷಧಿ ಮೊರೆ; ರೈತರ ಜೇಬಿಗೆ ಹೊರೆ!

By Kannadaprabha News  |  First Published Oct 12, 2022, 2:43 PM IST

ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಎದುರಿಸುತ್ತಿರುವ ವಿವಿಧ ರೋಗಗಳನ್ನು ನಿಯಂತ್ರಿಸಲು ಬಳಸಲಾಗುವ ರಾಸಾಯನಿಕ ಔಷಧಿಗಳ ಬಳಕೆಯಲ್ಲಿ ರೈತರಿಗೆ ಭಾರೀ ಮೋಸ ಆಗುತ್ತಿದ್ದು, ಈ ವಿಚಾರದಲ್ಲಿ ಮುಗ್ದ ರೈತರನ್ನು ವಂಚಿಸುತ್ತಿರುವ ವ್ಯಾಪಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.


ಗೋಪಾಲ್‌ ಯಡಗೆರೆ

ಶಿವಮೊಗ್ಗ (ಅ.12) : ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಎದುರಿಸುತ್ತಿರುವ ವಿವಿಧ ರೋಗಗಳನ್ನು ನಿಯಂತ್ರಿಸಲು ಬಳಸಲಾಗುವ ರಾಸಾಯನಿಕ ಔಷಧಿಗಳ ಬಳಕೆಯಲ್ಲಿ ರೈತರಿಗೆ ಭಾರೀ ಮೋಸ ಆಗುತ್ತಿದ್ದು, ಈ ವಿಚಾರದಲ್ಲಿ ಮುಗ್ದ ರೈತರನ್ನು ವಂಚಿಸುತ್ತಿರುವ ವ್ಯಾಪಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Tap to resize

Latest Videos

ಕೈಗೆ ಬಂದ ಹೆಸರು ಬೆಳೆ: ಖರೀದಿ ಕೇಂದ್ರ ಆರಂಭಿಸುವಂತೆ ರೈತರ ಒತ್ತಾಯ

ಇತ್ತೀಚಿನ ವರ್ಷಗಳಲ್ಲಿ ಬೆಳೆಗಳಲ್ಲಿ ವಿಪರೀತ ಕೀಟಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಔಷಧಗಳ ಬಳಕೆ ಅನಿವಾರ್ಯ. ಶೀಘ್ರ ನಿಯಂತ್ರಿಸಬೇಕೆಂದು ರಾಸಾಯನಿಕ ಔಷಧಗಳ ಬಳಕೆಗೆ ರೈತರು ಮೊರೆ ಹೋಗುತ್ತಿದ್ದಾರೆ. ರೈತರ ಚಡಪಡಿಕೆ, ಆತಂಕವನ್ನು ಸರಿಯಾಗಿ ಬಳಸಿಕೊಳ್ಳುವ ಕೆಲವು ಔಷಧ ವ್ಯಾಪಾರಿಗಳು ಅಗತ್ಯ ಔಷಧಿಯ ಜೊತೆಗೆ ಅನಗತ್ಯ ಔಷಧಿಗಳನ್ನು ಸೇರಿಸಿ ಮಾರಾಟ ಮಾಡುತ್ತಿದ್ದಾರೆ. ಅವರನ್ನೇ ನಂಬಿ ಅನಗತ್ಯ ಔಷಧಿಗೆ ದುಪ್ಪಟ್ಟು ಹಣಕ್ಕೆ ಕೊಂಡು ತಂದು, ತಮ್ಮ ಕೃಷಿ ಕ್ಷೇತ್ರದಲ್ಲಿ ಸಿಂಪಡಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಾಗಲಿ, ರೈತ ಸಂಘಟನೆಗಳಾಗಲಿ ಗಮನ ಹರಿಸಿದಂತೆ ಕಾಣುತ್ತಿಲ್ಲ. ರೈತರೂ ತಮಗಾದ ಮೋಸವನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದಾರೆಯೇ ವಿನಃ ಈ ಕುರಿತು ಧ್ವನಿ ಎತ್ತುತ್ತಿಲ್ಲ.

ರೈತರೊಬ್ಬರು ತಮ್ಮ ತೋಟದಲ್ಲಿನ ಎಲೆಚುಕ್ಕಿ ರೋಗಕ್ಕೆ ಸಿಂಪಡಿಸಲು ಔಷಧ ನೀಡಿ ಎಂದರು. ವಾಸ್ತವವಾಗಿ ಎಲೆಚುಕ್ಕಿ ಎಂಬುದು ಫಂಗಸ್‌ ರೋಗ. ಇದಕ್ಕೆ ಫಂಗಸ್‌ ನಿಯಂತ್ರಣದ ಔಷಧಿ ನೀಡಬೇಕು. ಆದರೆ ಅಂಗಡಿಯವರು ಫಂಗೀಸೈಡ್‌ ಜೊತೆಗೆ ಪೆಸ್ಟಿಸೈಡ್‌(ಕೀಟನಾಶಕ) ಅನ್ನೂ ಸೇರಿಸಿ ನೀಡಿದ್ದಾರೆ. ಮಾಹಿತಿ ಇಲ್ಲದ ರೈತರು ಎರಡೂ ಔಷಧಿ ಸೇರಿಸಿ ತಮ್ಮ ತೋಟಕ್ಕೆ ಸಿಂಪಡಿಸಿದ್ದಾರೆ. ಆಕಸ್ಮಿಕವಾಗಿ ತೋಟಗಾರಿಕಾ ವಿವಿಯ ವಿಜ್ಞಾನಿಯೊಬ್ಬರಿಗೆ ಈ ಔಷಧ ತೋರಿಸಿದಾಗ ಫೆಸ್ಟಿಸೈಡ್‌ ಔಷಧ ಬೇಕಾಗಿಲ್ಲ, ಫಂಗೀಸೈಡ್‌ ಔಷಧ ಮಾತ್ರ ಸಿಂಪಡಿಸಬೇಕೆಂದರು.

ಜೊತೆಗೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಪ್ರತಿ ಲೀಟರ್‌ ನೀರಿಗೆ 1 ಎಂಎಲ್‌ ಫಂಗೀಸೈಡ್‌ ಸೇರಿಸಬೇಕೆಂದು ಸೂಚನೆ ನೀಡಿದರು. ಆದರೆ ಅಂಗಡಿಯವರು ಪ್ರತಿ ಲೀಟರ್‌ಗೆ 2.5 ಎಂಎಲ್‌ ಬಳಕೆ ಮಾಡುವಂತೆ ಹೇಳಿಕೊಟ್ಟಿದ್ದರು. ಮಾಹಿತಿ ಸಿಗದ ಶೇ. 99 ರಷ್ಟುರೈತರು ಅಂಗಡಿಯವರು ಹೇಳಿದ ಔಷಧ ಮತ್ತು ಪ್ರಮಾಣವನ್ನೇ ಸಿಂಪರಣೆಯಲ್ಲಿ ಬಳಕೆ ಮಾಡುತ್ತಾರೆ. ಒಂದೆಡೆ ಅನಗತ್ಯವಾಗಿ ತಮ್ಮ ಕೃಷಿ ಕ್ಷೇತ್ರಕ್ಕೆ ವಿಷ ಹಾಕುತ್ತಿದ್ದರೆ, ಇನ್ನೊಂದೆಡೆ ರೈತರ ಜೇಬಿಗೂ ಹೊರೆಯಾಗಿದೆ.

ಇದು ಒಂದು ಉದಾಹರಣೆ ಮಾತ್ರ. ನಿತ್ಯ ರೈತರು ಒಂದಲ್ಲ ಒಂದು ರೀತಿಯ ಔಷಧ ಖರೀದಿಸುತ್ತಾರೆ. ನಿಜವಾಗಿಯೂ ಆ ಔಷಧ ಬೇಕಿತ್ತೊ ಇಲ್ಲವೋ ಎಂದು ಹೇಳುವವರಾರು? ತಾವು ಹಲವು ವರ್ಷಗಳಿಂದ ವ್ಯವಹಸುತ್ತಿರುವ ಅಂಗಡಿಯವ ಹೇಳಿದ್ದನ್ನೇ ನಂಬಿಕೊಂಡು ಕೇಳಿದಷ್ಟುಹಣ ನೀಡಿ ರೈತರು ಖರೀದಿಸುತ್ತಾರೆ. ಬೇಡದ ಔಷಧ ತಂದು ಬೆಳೆಗಳಿಗೆ ಸಿಂಪಡಿಸುತ್ತಾರೆ. ಸರಿಯಾದ ಫಲಿತಾಂಶ ಸಿಗದಾಗ ಅದೇ ಅಂಗಡಿಯ ಇನ್ನೊಂದು ಬ್ರಾಂಡ್‌ನ ಔಷಧ ಮೊರೆಹೋಗುತ್ತಾರೆ. ಈ ಬಗ್ಗೆ ಇಲಾಖೆ ಸಮರ್ಪಕ ರೀತಿಯಲ್ಲಿ ಗಮನ ಹರಿಸಬೇಕು. ಇಲ್ಲದಿದ್ದರೆ ರೈತರು ಅನಗತ್ಯ ಆರ್ಥಿಕ ನಷ್ಟಕ್ಕೆ ಒಳಗಾಗುತ್ತಾರೆ.

ಇತ್ತೀಚೆಗೆ ಜಾರಿಯಾದ ಕಾನೂನಿನಂತೆ ಔಷಧ ಮಾರಾಟಗಾರರಿಗೆ ಒಂದು ವರ್ಷದ ತರಬೇತಿ ನೀಡಲಾಗಿದೆ. ಏನೂ ಮಾಹಿತಿ ಇಲ್ಲದೆ ಔಷಧ ಮಾರುವಂತಿಲ್ಲ. ಹೀಗಿರುವಾಗ ಮಾರಾಟಗಾರರು ರೈತರಿಗೆ ಔಷಧ ನೀಡುವಾಗ ಯಾವ ಕಾಯಿಲೆಗೆ ಮತ್ತು ಎಷ್ಟುಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಅಂಗಡಿಯ ಲೆಟರ್‌ಹೆಡ್‌ನಲ್ಲಿ ಬರೆದು ಕೊಡಲಿ. ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಂದು ಅನೇಕ ಪ್ರಗತಿಪರ ರೈತರು ಹೇಳುತ್ತಾರೆ.\

ಔಷಧಿ ಬೇಡ… ಜಾಂಡೀಸ್ ನಿವಾರಣೆಗೆ ಈ ಗಿಡಮೂಲಿಕೆ ಸಾಕು

ನಾನು ಖರೀದಿಸಿ ಔಷಧದ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಔಷಧ ಅಂಗಡಿಯವರನ್ನೇ ನಂಬುತ್ತಿದ್ದೆ. ಅವರು ಹೇಳಿದ ಹಾಗೆ ಔಷಧ ಸಿಂಪರಣೆ ಮಾಡುತ್ತಾ ಬಂದವನು. ಆಕಸ್ಮಿಕವಾಗಿ ಔಷಧದ ಬಗ್ಗೆ ವಿಜ್ಞಾನಿಗಳಿಗೆ ತೋರಿಸಿದಾಗ ಸತ್ಯ ಶಬಯಲಾಯಿತು.

-ಮಹಾಬಲೇಶ್‌, ಮುಂಬಾರು, ಹೊಸನಗರ

ನಿಜ, ಈ ರೀತಿ ರೈತರನ್ನು ಏಮಾರಿಸಲಾಗುತ್ತಿದೆ. ಈ ಬಗ್ಗೆ ರೈತರಲ್ಲಿ ಸ್ಪಷ್ಟಮಾಹಿತಿ ಇರುವುದಿಲ್ಲ. ಸಾಮಾನ್ಯವಾಗಿ ಇಲಾಖೆ ಅಥವಾ ಕೃಷಿ ಮತ್ತು ತೋಟಗಾರಿಕಾ ವಿವಿ ಕಾಲಕಾಲಕ್ಕೆ ಮಾಹಿತಿ ನೀಡುತ್ತದೆ. ಈ ಮಾಹಿತಿಯನ್ನು ಆಧರಿಸಿ ರೈತರು ಔಷಧ ಖರೀದಿಸಿ ಸಿಂಪರಣೆ ಮಾಡಬೇಕು.

-ವಿಜ್ಞಾನಿ, ಕೃಷಿ ಮತ್ತು ತೋಟಗಾರಿಕಾ ವಿವಿ

click me!