ಧಾರವಾಡ: ಮೈದುಂಬಿದ ಬೆಣ್ಣಿಹಳ್ಳ, ಬೆಳೆಗಳು ಜಲಾವೃತ

By Kannadaprabha News  |  First Published Aug 31, 2022, 6:23 AM IST

ಬೆನಕನಹಳ್ಳಿ, ಮುಳ್ಳೂಳ್ಳಿ, ಹಿರೇನರ್ತಿ, ಚಿಕ್ಕನರ್ತಿ, ಯರೇನಾರಾಯಣಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಣ್ಣಿಹಳ್ಳ ಅಪಾರ ಪ್ರಮಾಣದಲ್ಲಿ ತುಂಬಿ ಹರಿಯುತ್ತಿರುವ ಪರಿಣಾಮ ಸಾರಿಗೆ ಸಂಪರ್ಕ ಕಡಿತ 


ಕುಂದಗೋಳ(ಆ.31):  ತಾಲೂಕಿನಲ್ಲಿ ಕಳೆದೆರೆಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬರದ್ವಾಡ ನಡೆಗಡ್ಡೆಯಂತಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆನಕನಹಳ್ಳಿ, ಮುಳ್ಳೂಳ್ಳಿ, ಹಿರೇನರ್ತಿ, ಚಿಕ್ಕನರ್ತಿ, ಯರೇನಾರಾಯಣಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಣ್ಣಿಹಳ್ಳ ಅಪಾರ ಪ್ರಮಾಣದಲ್ಲಿ ತುಂಬಿ ಹರಿಯುತ್ತಿರುವ ಪರಿಣಾಮ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಹೊಲಗಳಿಗೆ ನೀರು ನುಗ್ಗಿ ಕಟಾವಿಗೆ ಬಂದಿದ್ದ ಬೆಳೆ ಸಂಪೂರ್ಣ ಜಲಾವೃತವಾಗಿದೆ.

ರೊಟ್ಟಿಗವಾಡ-ಕೊಂಕಣಕುರಟ್ಟಿಮಧ್ಯದ ಹೊರಹಳ್ಳ ತುಂಬಿಕೊಂಡು ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಸಂಶಿಯಿಂದ ಚಾಕಲಬ್ಬಿ ಮಧ್ಯದ ಗೂಗಿಹಳ್ಳ ತುಂಬಿ ಹರಿಯುತ್ತಿದೆ. ಬರದ್ವಾಡದಿಂದ ಕೊಡ್ಲಿವಾಡ ಗ್ರಾಮದ ಮಧ್ಯದ ಬಮ್ಮನ ಸರುವು ಮತ್ತು ದೊಡ್ಡ ಹಳ್ಳದ ನೀರು ಗ್ರಾಮದ ಮನೆಗಳಿಗೆ ನುಗ್ಗಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.

Latest Videos

undefined

2 ತಿಂಗಳಲ್ಲಿ ಮಳೆ ಅನಾಹುತಕ್ಕೆ 96 ಬಲಿ, 7,548 ಕೋಟಿ ನಷ್ಟ

ಯರೇಬೂದಿಹಾಳ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿರುವುದರಿಂದ ಹುಲಗೂರ ಮತ್ತು ಪಶುಪತಿಹಾಳಕ್ಕೆ ಹೋಗುವ ದಾರಿ ಮಧ್ಯದ ಜಮೀನು ಹಾಗೂ ಗ್ರಾಮದ ಬಸ್‌ನಿಲ್ದಾಣದವರೆಗೂ ನೀರು ನುಗ್ಗಿದೆ.

ಯರೇಬೂದಿಹಾಳಕ್ಕೆ ಜಿಪಂ ಸಿಇಒ ಭೇಟಿ:

ಯರೇಬೂದಿಹಾಳ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸುರೇಶ ಇಟ್ನಾಳ್‌ ಭೇಟಿ ನೀಡಿ ಹಾನಿಗೊಳಗಾದ ಮನೆ ಹಾಗೂ ಪ್ರದೇಶ ವೀಕ್ಷಿಸಿದರು. ಹಾನಿಗೊಳಗಾದ ಬೆಳೆ ಹಾಗೂ ಮನೆ ಸರ್ವೇ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ ಪರಿಹಾರ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬರದ್ವಾಡ, ರೊಟ್ಟಿಗವಾಡ, ಚಾಕಲಬ್ಬಿ, ಯರೇಬೂದಿಹಾಳ ಸೇರಿ ಹಲವೆಡೆ ಮಳೆಯಿಂದ 44 ಮನೆ ಬಿದ್ದಿವೆ. ರೈತರ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಅತಿವೃಷ್ಟಿಯಾಗಿದೆ ಎಂದು ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ ಮಾಹಿತಿ ನೀಡಿದರು. ಈ ವೇಳೆ ತಾಪಂ ಇಒ ಡಾ. ಮಹೇಶ ಕುರಿಯವರ, ಲೋಕೋಪಯೋಗಿ ಇಲಾಖಾ ಅಧಿಕಾರಿ ಆರ್‌.ಪಿ. ಕಿತ್ತೂರ, ಎಸ್‌.ಆರ್‌. ವೀರಕರ, ಸಿಪಿಐ ಮಾರುತಿ ಗುಳ್ಳಾರಿ, ಗ್ರಾಪಂ ಸದಸ್ಯರಿದ್ದರು.
 

click me!