ಫೋನ್‌ನಲ್ಲಿ ಹರಟುತ್ತಾ ಕೊರೋನಾ ಒತ್ತಡ ಮರೆತ ವ್ಯಾಪಾರಿ!

By Kannadaprabha NewsFirst Published Jul 29, 2020, 10:06 AM IST
Highlights

ಮನೆಯಲ್ಲಿ 80ರ ವೃದ್ಧೆ ತಾಯಿ, ಪತ್ನಿ ಹಾಗೂ ಪುತ್ರಿ ಇದ್ದರೂ ಅವರಿಂದ ಅಂತರ ಕಾಯ್ದುಕೊಂಡು ತಂದೆ ಮತ್ತು ಮಗ ಇಬ್ಬರೂ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ.

ಮಂಗಳೂರು(ಜು.29): ಮನೆಯಲ್ಲಿ 80ರ ವೃದ್ಧೆ ತಾಯಿ, ಪತ್ನಿ ಹಾಗೂ ಪುತ್ರಿ ಇದ್ದರೂ ಅವರಿಂದ ಅಂತರ ಕಾಯ್ದುಕೊಂಡು ತಂದೆ ಮತ್ತು ಮಗ ಇಬ್ಬರೂ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ.

ನಗರದ ಹಳೆ ಬಂದರು ಬಳಿಯ ಅಡಕೆ ವ್ಯಾಪಾರಿ ರಾಜೇಶ್‌ ಎಂಬವರಿಗೆ ಕೆಮ್ಮು ಶುರುವಾಗಿತ್ತು. ಅವರ ಮಗನಿಗೆ ಆಹಾರ ರುಚಿಸುತ್ತಿರಲಿಲ್ಲ. ಇದರ ಮುನ್ಸೂಚನೆ ಅರಿತ ಇವರಿಬ್ಬರು ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರುತ್ತಿದ್ದರು. ಹಗಲು ಅಂಗಡಿಯಲ್ಲಿ ಕೆಲಸ, ರಾತ್ರಿ ಮನೆಯಲ್ಲಿ ಜೋಪಾನ. ಸುತ್ತಮುತ್ತ ಕೊರೋನಾ ಪಾಸಿಟಿವ್‌ ಸಂಖ್ಯೆ ಏರುಗತಿಯಲ್ಲಿರುವುದರಿಂದ ತಮಗೂ ಸೋಂಕು ಬರಬಾರದು ಎಂದು ಸಾಕಷ್ಟುಮುನ್ನೆಚ್ಚರಿಕೆಯಲ್ಲಿದ್ದರು. ಆದರೂ ಜೂ.30ರಂದು ಖಾಸಗಿ ಆಸ್ಪತ್ರೆಯ ಲ್ಯಾಬ್‌ನಲ್ಲಿ ಸ್ವಾಬ್‌ ಪರೀಕ್ಷೆ ನಡೆಸಿದಾಗ ಇಬ್ಬರಿಗೂ ಪಾಸಿಟಿವ್‌ ಬಂದಿತ್ತು. ಬಳಿಕ ಜು.2ರಂದು ತಂದೆ, ಮಗ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು.

ಫೋನಲ್ಲೇ ಕಾಲಕಳೆದರು:

ಕೆಮ್ಮು ಮತ್ತು ರುಚಿಯ ಸಮಸ್ಯೆ ಹೊರತುಪಡಿಸಿದರೆ ಇವರಿಗೆ ಬೇರೆ ಯಾವುದೇ ರೋಗ ಲಕ್ಷಣ ಇರಲಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ತಂದೆಗೆ ಇಸಿಜಿ ಮೊದಲಾದ ಆರೋಗ್ಯ ತಪಾಸಣೆಯನ್ನು ಆಸ್ಪತ್ರೆಯಲ್ಲಿ ಮಾಡಿಸಿಕೊಂಡಿದ್ದರು. ಕೊರೋನಾಗೆ ವಿಟಮಿನ್‌ ಹಾಗೂ ಝಿಂಕ್‌ ಮಾತ್ರೆ ಹೊರತುಪಡಿಸಿದರೆ ಬೇರೆ ಯಾವುದೇ ಔಷಧವನ್ನು ನೀಡಬೇಕಾಗಿ ಬರಲಿಲ್ಲ. ಆಸ್ಪತ್ರೆಯಲ್ಲಿ ಇದ್ದಷ್ಟುದಿನ ಸಂಬಂಧಿಕರೊಂದಿಗೆ ಫೋನ್‌ನಲ್ಲಿ ಹರಟುತ್ತಾ ಕಾಲಕಳೆದಿದ್ದೇವೆ. ಕೊರೋನಾ ಬಂತು ಎಂದು ಭೀತಿ ಪಡುವ ಅಗತ್ಯವೇ ಇಲ್ಲ ಎನ್ನುತ್ತಾರೆ ರಾಜೇಶ್‌.

ಮನೆ ಮಂದಿ ಮಾತ್ರವಲ್ಲ ಸಂಬಂಧಿಕರು, ಸ್ನೇಹಿತರು ಎಲ್ಲರೂ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಕೊರೋನಾಗೆ ಯಾವ ರೀತಿಯಲ್ಲಿ ಉಪಚಾರ ಮಾಡುತ್ತಾರೆ ಎಂಬುದನ್ನು ತಿಳಿದು ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಹಾಗಾಗಿ ಕೊರೋನಾ ಬಂದರೆ ಹೆದರದೆ ಚಿಕಿತ್ಸೆ ಪಡೆಯಬಹುದು ಎನ್ನುತ್ತಾರೆ ಅವರು.

ಅಯೋಧ್ಯೆ ಭೂಮಿಪೂಜೆ: ಉಡುಪಿಯಲ್ಲಿ ಲಕ್ಷ ತುಳಸಿ ಅರ್ಚನೆ

ರಾಜೇಶ್‌ ಅವರು ಒಂದು ವಾರ ಕಾಲ ಆಸ್ಪತ್ರೆಯಲ್ಲಿ ಇದ್ದಾಗಲೂ ಹೊರಗಿನಿಂದ ಊಟ ತರಿಸುತ್ತಿದ್ದರು. ಒಂದೆರಡು ದಿನ ಆಸ್ಪತ್ರೆಯಲ್ಲೇ ತಿಂಡಿ, ಊಟ ಸೇವಿಸಿದ್ದಾರೆ. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಚೆನ್ನಾಗಿ ನೋಡಿಕೊಂಡಿದ್ದಾರೆ ಎನ್ನುತ್ತಾರೆ. ಈಗ ಡಿಸ್ಚಾಜ್‌ರ್‍ ಆಗಿ 14 ದಿನಗಳ ಕಾಲ ಮತ್ತೆ ನಾನು ಮತ್ತು ನನ್ನ ಮಗ ಹೋಂ ಕ್ವಾರಂಟೈನ್‌ನಲ್ಲಿದ್ದೇವೆ ಎನ್ನುತ್ತಾರೆ ರಾಜೇಶ್‌.

ವಿನ್ಯಾಸದಲ್ಲಿ ಸಣ್ಣ ಬದಲಾವಣೆ: ರಾಮ ಮಂದಿರ ಜಗತ್ತಿನಲ್ಲಿಯೇ ಮೂರನೇ ದೊಡ್ಡ ಹಿಂದೂ ದೇಗುಲ ..!

ಕೊರೋನಾ ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ಸ್ವಾಬ್‌ ಪರೀಕ್ಷೆ ಮಾಡಿಸಿ, ಅದರಲ್ಲಿ ಉದಾಸೀನ ಮಾಡಬೇಡಿ. ಇದೇ ವೇಳೆ ಸರ್ಕಾರದ ಕೋವಿಡ್‌ ನಿಯಮವನ್ನು ಕಟ್ಟುನಿಟ್ಟು ಪಾಲಿಸಿ. ಕೊರೋನಾ ಇದ್ದರೂ ಧೃತಿಗೆಡದೆ ಬದುಕಲು ಕಲಿಯಿರಿ ಎಂದು ಮಂಗಳೂರು ಅಡಕೆ ವ್ಯಾಪಾರಿ ಸತೀಶ್‌ ತಿಳಿಸಿದ್ದಾರೆ.

click me!