ದಕ್ಷಿಣ ಕನ್ನಡದಲ್ಲಿ ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ

By Kannadaprabha NewsFirst Published Jun 10, 2020, 7:09 AM IST
Highlights

ದ.ಕ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಬರೋಬ್ಬರಿ 23 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದ್ದು, 218ಕ್ಕೆ ಏರಿಕೆಯಾಗಿದೆ.

ಮಂಗಳೂರು(ಜೂ.10): ದ.ಕ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಬರೋಬ್ಬರಿ 23 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇವರಲ್ಲಿ 18 ಮಂದಿ ಸೌದಿ ಅರೇಬಿಯಾದಿಂದ ಬಂದವರಾಗಿದ್ದರೆ, ಮೂವರು ದುಬೈನಿಂದ, ಇಬ್ಬರು ಮುಂಬೈನಿಂದ ಆಗಮಿಸಿದವರು. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದ್ದು, 218ಕ್ಕೆ ಏರಿಕೆಯಾಗಿದೆ.

ಜೂ. 2ರಂದು ಸೌದಿ ಅರೇಬಿಯಾದಿಂದ ಮಂಗಳೂರಿಗೆ ಆಗಮಿಸಿದ್ದ 18 ಮಂದಿಯನ್ನು ನಗರದ ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಸೌದಿಯಿಂದ ಬಂದವರೆಲ್ಲರೂ 22 ರಿಂದ 31 ವರ್ಷದೊಳಗಿನ ಯುವಕರು. ಜೂ. 1ರಂದು ದುಬೈಯಿಂದ ಆಗಮಿಸಿದ್ದ ಮೂವರನ್ನು (30, 38 ಹಾಗೂ 32 ವರ್ಷದ ಪುರುಷರು) ನಗರದ ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕೊರೋನಾ ಸೋಂಕಿತರ ಪೈಕಿ 21 ಮಂದಿಗೆ ಗಲ್ಫ್ ನಂಟಿದೆ.

ಹುಟ್ಟಿ ಕೇವಲ 20 ನಿಮಿಷ, ಡ್ಯಾನ್ಸ್ ರಾಜಾ ಡ್ಯಾನ್ಸ್; ವಿಡಿಯೋ

ಮೇ 20ರಂದು ಮುಂಬೈನಿಂದ ಆಗಮಿಸಿದ್ದ 46 ವರ್ಷದ ವ್ಯಕ್ತಿಯನ್ನು ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್‌ ಅವ​ಧಿ ಪೂರ್ಣಗೊಂಡ ನಂತರ ಅವರು ಮೂಡುಬಿದಿರೆಗೆ ತೆರಳಿದ್ದರು. ಮೇ 13ರಂದು ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿದ್ದ 46 ವರ್ಷದ ವ್ಯಕ್ತಿಯನ್ನು ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್‌ ಬಳಿಕ ಅವರು ಬಂಟ್ವಾಳಕ್ಕೆ ತೆರಳಿದ್ದರು. ಈ ಎಲ್ಲರಿಗೂ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ವೆನ್ಲಾಕ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ​ಧಿಕಾರಿ ಸಿಂಧೂ ರೂಪೇಶ್‌ ತಿಳಿಸಿದ್ದಾರೆ.

16 ಮಂದಿ ಕೊರೋನಾ ಮುಕ್ತ

ಮಂಗಳವಾರ 16 ಮಂದಿ (16 ವರ್ಷದ ಬಾಲಕ, 10 ಪುರುಷರು, ಐವರು ಮಹಿಳೆ) ಗುಣಮುಖರಾಗಿ ವೆನ್ಲಾಕ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಈವರೆಗೆ 115 ಮಂದಿ ಗುಣಮುಖರಾದಂತಾಗಿದೆ. ಸದ್ಯ 96 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಒಟ್ಟು 199 ಗಂಟಲು ದ್ರವ ಮಾದರಿ ವರದಿಗಳು ಬಂದಿದ್ದು, ಇದರಲ್ಲಿ 23 ಪಾಸಿಟಿವ್‌. ಇನ್ನುಳಿದ 176 ವರದಿಗಳು ನೆಗೆಟಿವ್‌ ಬಂದಿದೆ. 39 ವರದಿ ಬರಲು ಬಾಕಿ ಇದೆ. 95 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸಕ್ತ 42 ಮಂದಿ ಅಬ್ಸರ್ವೇಷನ್‌ನಲ್ಲಿದ್ದು, ಓರ್ವರಲ್ಲಿ ಶ್ವಾಸಕೋಶದ ಸೋಂಕು ಪತ್ತೆಯಾಗಿದೆ.

click me!