ಬೆಂಗಳೂರು (ಆ.04): ನೆರೆಯ ರಾಜ್ಯಗಳಲ್ಲಿ ಕೊರೋನಾ ಮಹಾಮಾರಿ 3ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಹಾಗೂ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಸ್ವತಃ ಎಡಿಜಿಪಿಗಳೇ ಗಡಿಗೆ ತೆರಳಿ ಪರಿಶೀಲನೆ ನಡೆಸಿದ್ದು, ನೆಗೆಟಿವ್ ರಿಪೋರ್ಟ್ ಇಲ್ಲದೆ ಗಡಿಯಾಚೆಯಿಂದ ಯಾರನ್ನೂ ಒಳಗೆ ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಮಧ್ಯೆ, ಆ.3ರಿಂದ 15ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ಮದ್ಯದಂಗಡಿ ಬಂದ್ ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ತಾಲೂಕಿನಲ್ಲಿ ಗಡಿಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಆದೇಶಿಸಿದ್ದಾರೆ. ಅದರಂತೆ ಒಟ್ಟು 19 ಗ್ರಾಮಗಳ 29 ಮದ್ಯದಂಗಡಿ ಬಂದ್ ಆಗಲಿದೆ. ಕೇರಳದಿಂದ ಮದ್ಯಪಾನಕ್ಕಾಗಿ ಜನ ಆಗಮಿಸುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
undefined
ಕರ್ನಾಟಕದಲ್ಲಿ ಕೊರೋನಾ 3ನೇ ಅಲೆ ಭೀತಿ: ಇಲ್ಲಿದೆ ಅ.03ರ ಅಂಕಿ-ಸಂಖ್ಯೆ
ಎಡಿಜಿಪಿಗಳ ಭೇಟಿ: ಬೆಳಗಾವಿಯಲ್ಲಿ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಚೆಕ್‌ಪೋಸ್ಟ್‌ಗೆ ಎಡಿಜಿಪಿ ಉಮೇಶಕುಮಾರ್, ದಕ್ಷಿಣ ಕನ್ನಡದಲ್ಲಿ ಪ್ರತಾಪ್ ರೆಡ್ಡಿ ಅವರು ಗಡಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಬಸ್ ಇಲ್ಲ: ಅಂತಾರಾಜ್ಯ ಪ್ರವಾಸಕ್ಕೆ ನೆಗೆಟಿವ್ ವರದಿ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಚಾಮರಾಜನಗರದ ಗುಂಡ್ಲುಪೇಟೆಯಿಂದ ಕೇರಳಕ್ಕೆ 2 ದಿನದಿಂದ ನೇರ ಬಸ್ ಸಂಚಾರ ಬಂದ್ ಆಗಿದೆ. ಜನರೇ ಬಾರದ ಕಾರಣ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ತಲಪಾಡಿ ಗಡಿಯಲ್ಲಿ ತುರ್ತು ಅಗತ್ಯ ವಾಹನಗಳನ್ನು ಹೊರತು ಪಡಿಸಿ ಇತರ ವಾಹನ ಸಂಚಾರ ಸಂಚಾರವನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಯುಡಿಎಫ್, ಸಂಯುಕ್ತ ಜನತಾದಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯನ್ನೂ ನಡೆಸಿದ್ದಾರೆ. ಜಿಲ್ಲಾಡಳಿತದ ಈ ಕ್ರಮದಿಂದ ಸ್ಥಳೀಯರಿಗೆ ತೊಂದರೆಯಾಗುತ್ತದೆ ಎಂದು ಕಿಡಿಕಾರಿದ್ದಾರೆ.