
ಬೆಂಗಳೂರು (ಆ.14): ನಗರದ ಮಾಣೆಕ್ ಷಾ ಪೆರೆಡ್ ಮೈದಾನದಲ್ಲಿ ಇದೇ ಭಾನುವಾರ ನಡೆಯಲಿರುವ 75ನೆ ಸ್ವಾತಂತ್ರ್ಯ ದಿನಾಚರಣೆಗೆ ಕೊರೋನಾ ಸೊಂಕು ತಗುಲಿ ಗುಣಮುಖರಾದ 25 ಮಂದಿ ಸಾರ್ವಜನಿಕರು ಮತ್ತು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 100 ಮಂದಿ ಕೊರೋನಾ ವಾರಿಯರ್ಸ್‌ಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಿದ್ಧತೆಗಳ ಕುರಿತು ನಗರದಲ್ಲಿ ಶುಕ್ರವಾರ ನಡದ ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಕೊರೋನಾ ಸೊಂಕು ಇರುವುದರಿಂದ ಸಾರ್ವಜನಿಕರನ್ನು ಅಹ್ವಾನಿಸದೇ ಸುರಕ್ಷತೆ ಮತ್ತು ಸರಳ ರೀತಿಯಲ್ಲಿ ಆಚರಣೆ ಮಾಡಲಾಗುವುದು ಎಂದರು.
ಭಾರತ ಆಚರಿಸುತ್ತಿರುವುದು 74 ಅಥವಾ 75ನೇ ಸ್ವಾತಂತ್ರ್ಯ ದಿನಾಚರಣೆ? ಗೊಂದಲಕ್ಕೆ ಇಲ್ಲಿದೆ ಉತ್ತರ!
ಭಾನುವಾರ ಬೆಳಗ್ಗೆ 8.55ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಣೆಕ್ ಷಾ ಮೈದಾನಕ್ಕೆ ಆಗಮಿಸಲಿದ್ದಾರೆ. 9 ಗಂಟೆಗೆ ಸರಿಯಾಗಿ ಧ್ವಜಾರೊಹಣ ನೆರವೇರಿಸಲಿದ್ದಾರೆ. ಅ ಬಳಿಕ ತೆರೆದ ಜೀಪಿನಲ್ಲಿ ಪರೇಡ್ ವೀಕ್ಷಣೆ ಮಾಡಲಿದ್ದಾರೆ. ಬಳಿಕ ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಸಂದೇಶ ನೀಡಲಿದ್ದಾರೆ.
ಈ ಬಾರಿ ಕೋವಿಡ್ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದಿಲ್ಲ. ಇನ್ನು 20 ತುಕಡಿಗಳಿಂದ ಪಥ ಸಂಚಲನ ನಡೆಯಲಿದೆ.