ಪೊಲೀಸ್‌ ಹುದ್ದೆಗಾಗಿ 1.36 ನಿಮಿಷದಲ್ಲಿ 400 ಮೀ. ಓಡಿದ ಎರಡೂವರೆ ತಿಂಗಳ ಗರ್ಭಿಣಿ

By Kannadaprabha News  |  First Published Aug 14, 2021, 10:46 AM IST
  •  ಪೊಲೀಸ್‌ ಹುದ್ದೆಗಾಗಿ 1.36 ನಿಮಿಷದಲ್ಲಿ 400 ಮೀ. ಓಡಿದ ಎರಡೂವರೆ ತಿಂಗಳ ಗರ್ಭಿಣಿ 
  • ಪಿಎಸ್‌ಐ ಕೆಲಸ ಗಿಟ್ಟಿಸಲೇಬೇಕೆಂಬ ಹಂಬಲ ಹೊಂದಿರುವ ಬೀದರ್‌ ಮೂಲದ ಎಂಜಿನಿಯರಿಂಗ್‌ ಪದವೀಧರೆ ಅಶ್ವಿನಿ

 ಕಲಬುರಗಿ (ಆ.14): ಪಿಎಸ್‌ಐ ಕೆಲಸ ಗಿಟ್ಟಿಸಲೇಬೇಕೆಂಬ ಹಂಬಲದಿಂದ ಬೀದರ್‌ ಮೂಲದ ಎಂಜಿನಿಯರಿಂಗ್‌ ಪದವೀಧರೆ, ಎರಡೂವರೆ ತಿಂಗಳ ಗರ್ಭಿಣಿ ಅಶ್ವಿನಿ ಸಂತೋಷ್‌ ಕೋರೆ (24) ಓಟದ ಪರೀಕ್ಷೆಯಲ್ಲಿ 1.36 ನಿಮಿಷದಲ್ಲಿ 400 ಮೀಟರ್‌ ದೂರ ಕ್ರಮಿಸಿ ಗಮನ ಸೆಳೆದಿದ್ದಾರೆ.

ಎರಡು ದಿನದ ಹಿಂದೆ ಕಲಬುರಗಿ ಜಿಲ್ಲಾ ಪೊಲೀಸ್‌ ಸಶಸ್ತ್ರ ಮೀಸಲು ಪಡೆ (ಡಿಎಆರ್‌) ಪರೇಡ್‌ ಮೈದಾನದಲ್ಲಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿಗಾಗಿ ದೈಹಿಕ ಪರೀಕ್ಷೆ (ಫಿಜಿಕಲ್‌ ಟೆಸ್ವ್‌) ಆಯೋಜಿಸಲಾಗಿತ್ತು. ಪಿಎಸ್‌ಐ ದೈಹಿಕ ಪರೀಕ್ಷೆ ಅರ್ಹತಾ ಮಾನದಂಡ ಪ್ರಕಾರ 2 ನಿಮಿಷಗಳ ಒಳಗೆ 400 ಮೀಟರ್‌ ದೂರ ಕ್ರಮಿಸಬೇಕಿತ್ತು. ಅಶ್ವಿನಿ ಕೇವಲ 1.36 ನಿಮಿಷದಲ್ಲಿ ಕ್ರಮಿಸುವ ಮೂಲಕ ಸುದ್ದಿಯಾಗಿದ್ದಾರೆ. ಓಟದ ಜೊತೆಗೆ ಉದ್ದ ಜಿಗಿತ, ಶಾಟ್‌ಪುಟ್‌ನಲ್ಲಿಯೂ ತೇರ್ಗಡೆಯಾಗಿದ್ದಾರೆ.

Tap to resize

Latest Videos

undefined

ಸೇನೆಯ ನಾನ್ ಡಿಪಾರ್ಟಮೆಂಟಲ್ ಆಫೀಸರ್‌ ನೇಮಕಾತಿ, ತಿಂಗಳಿಗೆ 1,77,500 ರೂ.ವರೆಗೆ ಸಂಬಳ

ಇವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸೋದು ಬೇಡವೆಂದು ಸಲಹೆ ನೀಡಿದ್ದರಂತೆ. ಆದಾಗ್ಯೂ ಪಿಎಸ್‌ಐ ಆಗಲೇಬೇಕೆಂಬ ಹಂಬಲದಲ್ಲಿ ಗರ್ಭಿಣಿ ಅನ್ನುವ ಸಂಗತಿಯನ್ನೇ ಮರೆತು ಓಟ, ಜಿಗಿತ ಎಲ್ಲದರಲ್ಲೂ ಸೈ ಎನ್ನಿಸಿಕೊಂಡಿದ್ದಾರೆ.

24 ವರ್ಷದ ಅಶ್ವಿನಿ ಮೂಲತಃ ಬೀದರ್‌ ಜಿಲ್ಲೆಯವರು. ಓದಿನಲ್ಲಿ ಚುರುಕು, ಎಂಜಿನಿಯರಿಂಗ್‌ ಪದವೀಧರೆ. ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಪಡೆಯುವುದು ಕಷ್ಟವಾಗಿರಲಿಲ್ಲವಾದರೂ ಪಿಎಸ್‌ಐ ಆಗಬೇಕೆಂಬ ಇಚ್ಛೆ ಇವರನ್ನು ಇಂತಹ ಸಾಹಸಕ್ಕೆ ಪ್ರೇರಣೆ ನೀಡಿದೆ. ಎರಡೂವರೆ ತಿಂಗಳ ಗರ್ಭಿಣಿಯಾಗಿರುವ ಅಶ್ವಿನಿಗಿದು ಚೊಚ್ಚಿಲ ಗರ್ಭ. ಈಗಾಗಲೇ 2 ಬಾರಿ ದೈಹಿಕ ಪರೀಕ್ಷೆ ಎದುರಿಸಿದ್ದ ಅಶ್ವಿನಿ ಲಿಖಿತ ಪರೀಕ್ಷೆಯಲ್ಲಿ ತುಸು ಹಿನ್ನಡೆ ಅನುಭವಿಸಿದ್ದರು. ಇದು ಅವರ ಮೂರನೇ ಪ್ರಯತ್ನ.

ಅಶ್ವಿನಿ ಪತಿ ಸಂತೋಷ ಕೊರೆ ಅವರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ ದೈಹಿಕ ಪರೀಕ್ಷೆ ನಂತರ ಪತ್ನಿಯನ್ನು ಮತ್ತೊಮ್ಮೆ ವೈದ್ಯರ ಬಳಿಗೆ ಕರೆದೊಯ್ದು ಸಮಗ್ರ ದೈಹಿಕ ತಪಾಸಣೆ ಮಾಡಿಸಲಾಗಿದೆ. ಸ್ಕ್ಯಾನಿಂಗ್‌ ಇತ್ಯಾದಿಗಳನ್ನೆಲ್ಲ ಮಾಡಿರುವ ವೈದ್ಯರು ಶಿಶುವಿನ ಆರೋಗ್ಯ, ಆಕೆಯ ಆರೋಗ್ಯ ಯಾವುದಕ್ಕೂ ತೊಂದರೆ ಆಗಿಲ್ಲವೆಂದು ಹೇಳಿದ್ದಾರೆಂದು ತಿಳಿಸಿದ್ದಾರೆ.

ಅಶ್ವಿನಿಯ ಬಯಕೆಗೆ ಬೆಂಬಲಿಸುವುದಾಗಿ ಹೇಳುವ ಪತಿ, ಈ ಬಾರಿ ಮತ್ತೆ ಲಿಖಿತ ಪರೀಕ್ಷೆ ನಡೆಯಲಿದೆ. ಅದಕ್ಕಾಗಿ ತಯಾರಿ ಮಾಡುತ್ತೇವೆ, ಈ ಬಾರಿಯ ಪ್ರಯತ್ನದಲ್ಲಿ ಯಶಸ್ಸು ಪಡೆಯಲೇಬೇಕು ಎಂಬುದು ಅಶ್ವಿನಿಯ ಮನದಾಸೆ. ಅದು ಕೈಗೂಡಲಿ ಎಂದು ಹಾರೈಸಿದ್ದಾರೆ.

ಈ ಬಗ್ಗೆ ಈಶಾನ್ಯ ವಲಯ ಐಜಿಪಿ ಮನೀಶ್‌ ಖರ್ಬಿಕರ್‌ ಪ್ರತಿಕ್ರಿಯಿಸಿದ್ದು, ದೈಹಿಕ ಪರೀಕ್ಷೆಯಲ್ಲಿ ಗರ್ಭಿಣಿ ಇರುವುದು ಗಮನಕ್ಕೆ ಬಂದಿಲ್ಲ. ಗರ್ಭಿಣಿಯರು ಪೊಲೀಸ್‌ ಫಿಜಿಕಲ್‌ ಟೆಸ್ಟ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ. ಹಾಗಾಗಿ ಮಹಿಳೆಯರು ತಮ್ಮ ಗರ್ಭಾವಸ್ಥೆಯನ್ನು ಮುಚ್ಚಿಡುತ್ತಾರೆ ಎಂದಿದ್ದಾರೆ.

click me!