Bengaluru: ಹೊಸ ವರ್ಷಾಚರಣೆಗೆ ಕೋವಿಡ್‌ ಕರಿ ನೆರಳು: ನಿರ್ಬಂಧದ ಆತಂಕ ಸೃಷ್ಟಿ

By Govindaraj SFirst Published Dec 23, 2022, 9:26 AM IST
Highlights

ಕ್ರಿಸ್ಮಸ್‌, ಹೊಸ ವರ್ಷ ಸ್ವಾಗತಿಸಲು ನಗರ ಸಜ್ಜಾಗುತ್ತಿದೆ. ಫೈವ್‌ಸ್ಟಾರ್‌ ಸೇರಿ ಎಲ್ಲ ಪ್ರತಿಷ್ಠಿತ ಹೊಟೆಲ್‌ಗಳ ಕೊಠಡಿಗಳು ಬಹುತೇಕ ಭರ್ತಿಯಾಗಿದ್ದು, ಈ ನಡುವೆ ತಡರಾತ್ರಿಯ ಪಾರ್ಟಿ ಸೇರಿ ಸಂಭ್ರಮಾಚರಣೆಗೆ ಕೋವಿಡ್‌ ಆತಂಕ, ನಿರ್ಬಂಧದ ಬರೆಯ ಛಾಯೆ ಆವರಿಸಿದೆ. 

ಬೆಂಗಳೂರು (ಡಿ.23): ಕ್ರಿಸ್ಮಸ್‌, ಹೊಸ ವರ್ಷ ಸ್ವಾಗತಿಸಲು ನಗರ ಸಜ್ಜಾಗುತ್ತಿದೆ. ಫೈವ್‌ಸ್ಟಾರ್‌ ಸೇರಿ ಎಲ್ಲ ಪ್ರತಿಷ್ಠಿತ ಹೊಟೆಲ್‌ಗಳ ಕೊಠಡಿಗಳು ಬಹುತೇಕ ಭರ್ತಿಯಾಗಿದ್ದು, ಈ ನಡುವೆ ತಡರಾತ್ರಿಯ ಪಾರ್ಟಿ ಸೇರಿ ಸಂಭ್ರಮಾಚರಣೆಗೆ ಕೋವಿಡ್‌ ಆತಂಕ, ನಿರ್ಬಂಧದ ಬರೆಯ ಛಾಯೆ ಆವರಿಸಿದೆ. ಈ ಬಾರಿ ಹೋಟೆಲ್‌ಗಳು, ಮಾಲ್‌, ಕನ್ವೆಂನ್ಷನ್‌ ಸೆಂಟರ್‌, ನಗರದ ಹೊರವಲಯದ ಪಾರ್ಟಿ ಲಾನ್ಸ್‌, ಹೋಂ ಸ್ಟೇ, ರೆಸ್ಟೋರೆಂಟ್‌ಗಳು ವೈಭವೋಪೇತ ಹೊಸ ವರ್ಷ ಆಚರಣೆಗೆ ಸಜ್ಜಾಗಿವೆ. ಕ್ರಿಸ್ಮಸ್‌ ಹಬ್ಬ, ಹೊಸ ವರ್ಷಗಳೆರಡೂ ವಾರಾಂತ್ಯದಲ್ಲೆ ಬಂದಿರುವ ಕಾರಣ ಅದ್ಧೂರಿ ಆಚರಣೆಗೆ ತಯಾರಿ ನಡೆದಿದೆ. 

ಎಲ್ಲೆಡೆ ಡಿನ್ನರ್‌ - ಡ್ರಿಂಕ್ಸ್‌, ತಡರಾತ್ರಿ ಪಾರ್ಟಿ ಪ್ಯಾಕೆಜ್‌ಗಳು ಸಿದ್ಧವಾಗಿವೆ. ರಿಯಾಯಿತಿ ದರ ತಿಳಿಸಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಈಗಾಗಲೇ ಹಲವು ಶಾಲೆ ಕಾಲೇಜು, ಖಾಸಗಿ ಕಂಪನಿಗಳಿಗೆ ಹಬ್ಬದ ರಜೆ ಆರಂಭವಾಗಿದೆ. ಜತೆಗೆ ಸುದೀರ್ಘ ರಜೆಯಿರುವ ಕಾರಣ ವಿದೇಶಿಗರು, ಎನ್‌ಆರ್‌ಐ ಸೇರಿ ಮುಂಬೈ, ದೆಹಲಿಯಿಂದ ತಮ್ಮ ಊರುಗಳಿಗೆ ವರ್ಷದ ಬಳಿಕ ವಾಪಸ್ಸಾಗುತ್ತಿದ್ದಾರೆ. ಅದರ ಜತೆಗೆ ಹೊಸ ವರ್ಷ ಸ್ವಾಗತಿಸಲು ನಗರದವರು ಮಂಗಳೂರು, ಗೋಕರ್ಣ, ಮುರ್ಡೇಶ್ವರ, ಗೋವಾ ಸೇರಿ ಇತರೆಡೆಗೆ ತೆರಳುತ್ತಿದ್ದಾರೆ.

ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿಗಳಿಗೆ ಬ್ರೇಕ್ ಹಾಕುವಂತೆ ಬಜರಂಗದಳ ಒತ್ತಾಯ

ನಗರದ ಯಶವಂತಪುರದ ತಾಜ್‌, ಏರ್‌ಪೋರ್ಟ್‌ ಬಳಿಯ ಎಟ್ಟೈಡ್‌, ವೈಟ್‌ಫೀಲ್ಡ್‌ ತಾಜ್‌ ಹೊಟೆಲ್‌, ವೆಸ್ಟ್‌ಎಂಡ್‌, ಐಟಿಸಿ ಗಾರ್ಡೆನಿಯಾ, ವಿಲ್ಸನ್‌ ಮ್ಯಾನರ್‌, ಅಶೋಕ ಹೋಟೆಲ್‌ ಸೇರಿ ಎಂಜಿ ರಸ್ತೆ, ಬ್ರಿಗೆಡ್‌ ರಸ್ತೆ, ಇಂದಿರಾ ನಗರ, ಕೋರಮಂಗಲದ ಎಲ್ಲ ಪಾರ್ಟಿ ಹೋಟೆಲ್‌ಗಳಲ್ಲಿ ಮುಂಗಡ ಬುಕ್ಕಿಂಗ್‌ ಬಹುತೇಕ ಭರ್ತಿಯಾಗಿದೆ. ಶಾಪಿಂಗ್‌ ಸೆಂಟರ್‌ಗಳಲ್ಲೂ ಭರ್ಜರಿ ಸಿದ್ಧತೆಯಾಗಿದ್ದು, ಇಲ್ಲೆಲ್ಲ ಕಣ್ಣು ಕೋರೈಸುವ ವಿದ್ಯುತ್‌ ದೀಪಾಲಂಕಾರ, ಕ್ರಿಸ್ಮಸ್‌ ಟ್ರೀ, ಪಾರ್ಟಿ ಲಾನ್ಸ್‌ಗಳನ್ನು ಸಿಂಗರಿಸಿಕೊಳ್ಳಲಾಗುತ್ತಿದೆ. ಇನ್ನು, ನಗರದ ಹೊರವಲಯದ ಹೋಟೆಲ್‌ಗಳಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸ್ಪೆಷಲ್‌ ಡಿನ್ನರ್‌: ಯಶವಂತಪುರ ತಾಜ್‌ ಹೊಟೆಲ್‌ನ ಅಮ್ರೀಶ್‌ ‘ನ್ಯೂ ಇಯರ್‌ ಸೆಲೆಬ್ರೆಷನ್‌ ಕಪಲ್‌ಗೆ 8 ಸಾವಿರದಿಂದ 15 ರವರೆಗೆ ಪ್ಯಾಕೆಜ್‌ ಇದೆ. ಅದೇ ರೀತಿ ಐವರು, ಎಂಟು ಮಂದಿಗೆ ಬೇರೆ ಬೇರೆ ದರವಿದೆ. ಕಪಲ್‌ ಕೊಠಡಿಗೆ ಪ್ರತ್ಯೇಕ 15 ಸಾವಿರ ನಿಗದಿಸಲಾಗಿದೆ. ಮಲ್ಟಿಡಿಶ್‌ ಸವೀರ್‍ಸ್‌, ಪಾರ್ಟಿ, ಡ್ರಿಂಕ್ಸ್‌ ಇದರಲ್ಲಿ ಒಳಗೊಂಡಿರಲಿದೆ ಎಂದು ತಿಳಿಸಿದರು. ಎಟ್ಟೈಡ್‌ ಹೋಟೆಲ್‌ನ ವ್ಯವಸ್ಥಾಪಕ ಸುನೀಲ್‌ ಮಾತನಾಡಿ, ‘ಕೋವಿಡ್‌ ರೂಪಾಂತರಿಯ ಆತಂಕ ಇರುವ ಕಾರಣ ನಾವು ಈ ಬಾರಿ ಸೆಲೆಬ್ರೆಷನ್‌ಗೆ ಹೆಚ್ಚು ಒತ್ತು ನೀಡುತ್ತಿಲ್ಲ. ಆದರೆ, ವಿಶೇಷವಾಗಿ ಗಾಲಾ ಡಿನ್ನರ್‌ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನೀಡಲಾಗುವ ಖಾದ್ಯಗಳ ಜತೆಗೆ ಜಪಾನೀಸ್‌ ಸ್ಯೂಶಿಸ್‌, ಮೆಕ್ಸಿಕನ್‌ ಡಿಶಸ್‌ಗಳನ್ನು ಉಣಬಡಿಸಲಿದ್ದೇವೆ. ಡಿನ್ನರ್‌ ಪ್ಯಾಕೆಜ್‌ ವ್ಯವಸ್ಥೆ ಇದೆ’ ಎಂದು ತಿಳಿಸಿದರು.

ಕೋವಿಡ್‌ ಆತಂಕ: ಕೋವಿಡ್‌ ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಎಲ್ಲ ಆಚರಣೆಗೆ ಬ್ರೇಕ್‌ ಬಿದ್ದಿತ್ತು. ಈ ಬಾರಿಯ ಸಂಭ್ರಮಾಚರಣೆಗೆ ಸಿದ್ಧತೆ ನಡುವೆಯೆ ಕೋವಿಡ್‌ ರೂಪಾಂತರಿ ಬಿಎಫ್‌.7 ಆತಂಕ ಕೂಡ ಆವರಿಸಿದೆ. ಇದು ಪ್ರವಾಸೋದ್ಯಮ, ಹೋಟೆಲ್‌ ಉದ್ಯಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲದಿಲ್ಲ. ತಡರಾತ್ರಿ ಪಾರ್ಟಿಗಳಿಗೆ ನಿರ್ಬಂಧ, ಜನಜಂಗುಳಿ ಸೇರುವುದಕ್ಕೆ ಒಂದು ವೇಳೆ ಸರ್ಕಾರ ನಿಬಂಧನೆಯ ಮಾರ್ಗಸೂಚಿ ಹೊರಡಿಸಿದರೆ ವಹಿವಾಟಿನ ಕತೆಯೇನು ಎಂಬ ಚಿಂತೆ ಆತಿಥ್ಯ ವಲಯದ ಉದ್ಯಮಿಗಳಲ್ಲಿ ಕಾಣಿಸಿದೆ. ಇದೇ ಕಾರಣದಿಂದ ಕೆಲವು ಪ್ರತಿಷ್ಠಿತ ಹೊಟೆಲ್‌ಗಳು ಪಾರ್ಟಿ ಆಯೋಜನೆ ಕೈಬಿಟ್ಟು ಕೇವಲ ವಿಶೇಷ ಭೋಜನಕ್ಕೆ ಒತ್ತು ನೀಡಿವೆ. ಸರ್ಕಾರ ಏನೇ ನಿರ್ಣಯ ಕೈಗೊಳ್ಳಬೇಕಿದ್ದರೂ ಮೊದಲೇ ತಿಳಿಸಬೇಕು. ಹೊಸ ವರ್ಷಾಚಣೆಗೆ ಒಂದೆರಡು ದಿನ ಇದ್ದಾಗ ತಡರಾತ್ರಿ ಪಾರ್ಟಿಗಳಿಗೆ ನಿರ್ಬಂಧ ಹೊರಡಿಸುವುದು ಸರಿಯಲ್ಲ ಎಂದು ಹೋಟೆಲ್‌ ಮಾಲಿಕರು ಹೇಳುತ್ತಿದ್ದಾರೆ.

ಮತ್ತೆ ಕೋವಿಡ್‌ ಭೀತಿ: ಬೆಂಗಳೂರು ವಿವಿಯಲ್ಲಿ ಮಾಸ್ಕ್ ಕಡ್ಡಾಯ

ಹೋಟೆಲ್‌, ಪ್ರವಾಸೋದ್ಯಮಕ್ಕೆ ಧಕ್ಕೆ ಆಗುವಂತಹ ಅವೈಜ್ಞಾನಿಕ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಾರದು. ನಿರ್ಬಂಧ ವಿಧಿಸಲು ಮುಂದುಗುವುದಾದರೆ ನಮ್ಮ ಜೊತೆ ಚರ್ಚಿಸಿ ಮಾರ್ಗಸೂಚಿ ಪ್ರಕಟಿಸಬೇಕು.
-ಪಿ.ಸಿ.ರಾವ್‌, ಬೃಹತ್‌ ಬೆಂಗಳೂರು ಹೊಟೆಲುಗಳ ಸಂಘ.

click me!