ಶವದ ಪಕ್ಕವೇ ಸೋಂಕಿತರಿಗೆ ಚಿಕಿತ್ಸೆ! ಬೆಂಗಳೂರಲ್ಲಿ ಆತಂಕಕಾರಿ ಘಟನೆ

Kannadaprabha News   | Asianet News
Published : Apr 16, 2021, 07:37 AM IST
ಶವದ ಪಕ್ಕವೇ ಸೋಂಕಿತರಿಗೆ ಚಿಕಿತ್ಸೆ!  ಬೆಂಗಳೂರಲ್ಲಿ ಆತಂಕಕಾರಿ ಘಟನೆ

ಸಾರಾಂಶ

ದೇಶದಲ್ಲಿ ದಿನದಿನವೂ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.  ಈ ನಿಟ್ಟಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆಗಳ ಕೊರತೆಯೂ ಎದುರಾಗುತ್ತಿದೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಶವದ ಪಕ್ಕವೇ ರೋಗಿಗೆ ಚಿಕಿತ್ಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ. 

ಬೆಂಗಳೂರು (ಏ.16):  ರಾಜ್ಯ ರಾಜಧಾನಿಯ ರಾಜಾಜಿನಗರ ಇಎಸ್‌ಐ ಆಸ್ಪತ್ರೆ ಐಸಿಯು ಘಟಕದಲ್ಲಿ ಕರೋನಾ ಸೋಂಕಿನಿಂದ ಮೃತ ದೇಹ ಸಾಗಿಸದೇ ಅದರ ಪಕ್ಕದ ಬೆಡ್‌ನಲ್ಲಿ ಸೋಂಕಿತರೊಬ್ಬರಿಗೆ ಚಿಕಿತ್ಸೆ ನೀಡಿರುವ ಆತಂಕಕಾರಿ ಘಟನೆ ಗುರುವಾರ ಜರುಗಿದೆ.

ಐಸಿಯು ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಶಿಫ್ಟ್‌ ಬದಲಾವಣೆಯಾಗಿದ್ದರಿಂದ ಸೋಂಕಿನಿಂದ ಮೃತಪಟ್ಟವ್ಯಕ್ತಿಯ ದೇಹವನ್ನು ಶವಾಗಾರಕ್ಕೆ ಸಾಗಿಸುವುದು ಸುಮಾರು 2 ತಾಸು ವಿಳಂಬವಾಗಿದೆ. ಈ ಅವಧಿಯಲ್ಲಿ ದೇಹವಿದ್ದ ಪಕ್ಕದಲ್ಲೇ ಸೋಂಕಿತರೊಬ್ಬರಿಗೆ ಚಿಕಿತ್ಸೆ ನೀಡಲಾಗಿದೆ. ಈ ಆತಂಕಕಾರಿ ವಿಚಾರ ಬಿಬಿಎಂಪಿ ಮಾಜಿ ಸದಸ್ಯ ಎಂ. ಶಿವರಾಜು ಅವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ಆಗಿದ್ದೇನು?:  ಶಿವರಾಜು ಅವರು ಸಂಬಂಧಿಯಾದ ರಾಜಾಜಿನಗರ ನಿವಾಸಿ 73 ವರ್ಷದ ವೃದ್ಧೆಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಆದರೆ, ಚಿಕಿತ್ಸೆ ಪಡೆಯಲು ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕಿರಲಿಲ್ಲ. ಉಸಿರಾಟದ ಸಮಸ್ಯೆ ಇದ್ದಿದ್ದರಿಂದ ಸಕಾಲದಲ್ಲಿ ವೆಂಟಿಲೇಟರ್‌ ಸಿಗದೇ ಸ್ಥಿತಿ ಗಂಭೀರವಾಗಿತ್ತು. ಸೋಂಕಿತೆಯ ಕುಟುಂಬದವರಿಂದ ಈ ವಿಚಾರ ತಿಳಿದ ಶಿವರಾಜು ಅವರು, ಬಳಿಕ ವೆಂಟಿಲೇಟರ್‌ ವ್ಯವಸ್ಥೆ ಮಾಡಿಸಲು ಆಸ್ಪತ್ರೆಗೆ ತೆರಳಿದ್ದರು.

ಮಾನವೀಯತೆ ಮರೆತೋಯ್ತಾ? ಒಂದೇ ಆಂಬ್ಯುಲೆನ್ಸ್‌ನಲ್ಲಿ 2 ಶವ ಸಾಗಾಟ..!

ಈ ವೇಳೆ ಸುಮಾರು ಎರಡು ಗಂಟೆಗೂ ಅಧಿಕ ಸಮಯದಿಂದ ಐಸಿಯುದಲ್ಲಿ ಮೃತದೇಹವೊಂದು ಇರುವುದು ಗೊತ್ತಾಗಿದೆ. ಆ ಮೃತದೇಹ ಪಕ್ಕದಲ್ಲೇ ಇತರೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ವಿಚಾರಿಸಿದಾಗ, ‘ಐಸಿಯುಗೆ ದಾಖಲಾಗಿದ್ದ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬರು ಗುರುವಾರ ಬೆಳಗ್ಗೆ 6.30 ಸುಮಾರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಪ್ಯಾಕ್‌ ಮಾಡಿ ಮುಗಿಸುವಷ್ಟರಲ್ಲಿ ರಾತ್ರಿ ಪಾಳಿ ಸಿಬ್ಬಂದಿ ಕರ್ತವ್ಯ ಅವಧಿ ಮುಗಿದಿದೆ. ಬೆಳಗಿನ ಪಾಳಿಯ ಸಿಬ್ಬಂದಿಗೆ ಮಾಹಿತಿ ನೀಡಿ ಮೃತದೇಹವನ್ನು ಐಸಿಯುನಲ್ಲೇ ಬಿಟ್ಟು ರಾತ್ರಿ ಪಾಳಿ ಸಿಬ್ಬಂದಿ ಹೊರಟಿದ್ದಾರೆ. ಹೀಗಾಗಿ ಆ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲು ತಡವಾಗಿದೆ’ ಎಂದು ಆಸ್ಪತ್ರೆ ಮೂಲಗಳು ಸಮಜಾಯಿಷಿ ನೀಡಿವೆ.

ಈ ಅವಧಿಯಲ್ಲಿ ದೇಹದ ಪಕ್ಕದಲ್ಲೇ ಇತರ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಲಾಗಿದ್ದು, ಅವ್ಯವಸ್ಥೆಯ ನೈಜ ದರ್ಶನ ಮಾಡಿಸಿದೆ.

PREV
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!