ಸತ್ತವರನ್ನೂ ಕಿತ್ತು ತಿನ್ನುತ್ತಿದ್ದಾರೆ : ಬೆಂಗಳೂರಿನಲ್ಲಿ ಕರಾಳ ದಂಧೆ

By Kannadaprabha NewsFirst Published Apr 16, 2021, 7:23 AM IST
Highlights

ಬೆಂಗಳೂರಿನಲ್ಲಿ ಕೊರೋನಾದಿಂದ ಮೃತಪಟ್ಟವರ ಶವಸಂಸ್ಕಾರ ಮಾಡುವುದು ಅತ್ಯಂತ ಕಠಿಣವಾಗುತ್ತಿದೆ. ಅವರ ಅಂತ್ಯಸಂಸ್ಕಾರ ನಡೆಸಲು ಪರದಾಡಬೇಕಾದ ಸ್ಥಿತಿ ಇದ್ದು ಸತ್ತವರನ್ನೂ ಕಿತ್ತು ತಿನ್ನುತ್ತಿದ್ದಾರೆ. 

 ಬೆಂಗಳೂರು (ಏ.16):  ಬೆಂಗಳೂರಿನಲ್ಲಿ ಖಾಸಗಿ ಆ್ಯಂಬುಲೆನ್ಸ್‌ ಹಾಗೂ ಕೆಲ ಬಿಬಿಎಂಪಿ ಸಿಬ್ಬಂದಿ ಕೊರೋನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ 35ರಿಂದ 40 ಸಾವಿರ ರು.ನ ಪ್ಯಾಕೇಜ್‌ ನಿಗದಿ ಮಾಡಿದ್ದಾರೆ. ಈ ಮೂಲಕ ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿರುವವರ ಸಂಬಂಧಿಕರ ಮೇಲೆ ಧನ-ಪಿಶಾಚಿಗಳಂತೆ ಎರಗಿ ದೋಚುತ್ತಿರುವುದು ಬೆಳಕಿಗೆ ಬಂದಿದ್ದು, ‘ಅಂತ್ಯಸಂಸ್ಕಾರ ದಂಧೆ’ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಕೊರೋನಾ ಸೋಂಕಿತರ ಶವಗಳನ್ನು ಕುಟುಂಬಗಳಿಗೆ ನೇರವಾಗಿ ಹಸ್ತಾಂತರಿಸುವುದಿಲ್ಲ. ಬದಲಿಗೆ ಆ್ಯಂಬುಲೆನ್ಸ್‌ ಮೂಲಕ ಬಿಬಿಎಂಪಿ ನಿಗದಿಪಡಿಸಿರುವ ವಿದ್ಯುತ್‌ ಚಿತಾಗಾರಕ್ಕೆ ತೆಗೆದುಕೊಂಡು ಬಂದು ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.

ಕಳೆದ ವಾರದಿಂದ ಕೊರೋನಾ ಸಾವುಗಳ ಸಂಖ್ಯೆ ಹೆಚ್ಚಾಗಿವೆ. ಕಳೆದ ಎರಡು ದಿನಗಳಿಂದ ಚಿತಾಗಾರಗಳ ಎದುರು ಶವಗಳನ್ನು ಹೊತ್ತ ಆ್ಯಂಬುಲೆನ್ಸ್‌ಗಳು ‘ಕ್ಯೂ’ ನಿಂತಿವೆ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಖಾಸಗಿ ಆ್ಯಂಬುಲೆನ್ಸ್‌ ಹಾಗೂ ಬಿಬಿಎಂಪಿ ಸಿಬ್ಬಂದಿ ಶವ ಸಂಸ್ಕಾರಕ್ಕೆ ಬರೋಬ್ಬರಿ 35 ರಿಂದ 40 ಸಾವಿರ ರು. ಸುಲಿಗೆ ಮಾಡುತ್ತಿದ್ದಾರೆ. ಹಣ ನೀಡಲಿಲ್ಲವೆಂದರೆ ದಿನಪೂರ್ತಿ ಚಿತಾಗಾರಗಳ ಎದುರೇ ಶವಗಳನ್ನು ಕಾಯಿಸುತ್ತಿದ್ದಾರೆ.

ಧನ ಪಿಶಾಚಿಗಳು ಇವರು:

ಸುಮನಹಳ್ಳಿ ನಿವಾಸಿಯಾಗಿದ್ದ ಮೃತರ ಸಂಬಂಧಿ ಸತೀಶ್‌ ಮಾತನಾಡಿ, ‘ಅಂತ್ಯ ಸಂಸ್ಕಾರದ ಹೆಸರಿನಲ್ಲಿ ಶವಗಳಿಂದಲೂ ಹಣ ದೋಚುತ್ತಿದ್ದಾರೆ. ಆ್ಯಂಬುಲೆನ್ಸ್‌ಗೆ 13 ಸಾವಿರ ರು., ಪೂಜೆ ಹೆಸರಿನಲ್ಲಿ 10 ಸಾವಿರ ರು., ವಿದ್ಯುತ್‌ ಚಿತಾಗಾರದಲ್ಲಿ ಸುಡಲು 6,500 ರು., ಸಂಬಂಧಿಕರು ಧರಿಸಲು ಪಿಪಿಇ ಕಿಟ್‌ಗೆ 1 ಸಾವಿರ ರು., ಸಿಬ್ಬಂದಿಗೆ 5 ಸಾವಿರ ಸೇರಿದಂತೆ 35,500 ರು. ಪ್ಯಾಕೇಜ್‌ ನೀಡಿದ್ದಾರೆ. ಇದರಲ್ಲಿ 500 ರು. ಕಡಿಮೆಯಾಗಿದ್ದರೂ ಮುಟ್ಟಿಲ್ಲ. ತಂದೆಯನ್ನು ಕಳೆದುಕೊಂಡ ನನ್ನ ಬಳಿ ಹಣಕ್ಕಾಗಿ ಪೀಡಿಸಿದ್ದಾರೆ. ನೋವಲ್ಲಿದ್ದ ನಾವು ಸಾಲ-ಸೋಲ ಮಾಡಿ ತೆಗೆದುಕೊಂಡು ಬಂದು ನೀಡಿದೆವು’ ಎಂದು ನೋವು ತೋಡಿಕೊಂಡರು.

ಗಂಧ ಕಡ್ಡಿ ಕೂಡ ಹಚ್ಚಲ್ಲ:  ಮಂಜುನಾಥ್‌ ಎಂಬುವವರು ಮಾತನಾಡಿ, ‘ಯುಗಾದಿಗೆ ಹಿಂದಿನ ದಿನ ನನ್ನ ಸ್ನೇಹಿತನಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ತರಾತುರಿಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಉಳಿಯಲಿಲ್ಲ. ಈ ವೇಳೆ ಪರೀಕ್ಷೆ ನಡೆಸಿ, ಕೊರೋನಾ ಇದೆ. ಶವ ನೀಡುವುದಿಲ್ಲ’ ಎಂದರು.

ಬೆಂಗಳೂರೊಂದರಲ್ಲೇ ಆತಂಕದ ಪ್ರಮಾಣದ ಕೇಸ್ : ಸಾವೂ ಹೆಚ್ಚಳ- ಎಚ್ಚರ! .

‘ಈ ವೇಳೆ ಆ್ಯಂಬುಲೆನ್ಸ್‌ನವರು 34,500 ರು. ಪ್ಯಾಕೇಜ್‌ ಮಾತನಾಡಿ ತೆಗೆದುಕೊಂಡು ಬಂದರು. ಸಂಬಂಧಿಕರೊಬ್ಬರಿಗೆ ಪಿಪಿಇ ಕಿಟ್‌ ಕೊಡಲೂ ಸಹ 1 ಸಾವಿರ ರು. ಹೆಚ್ಚುವರಿ ಚಾರ್ಜ್ ಮಾಡಿದರು. ಕೇವಲ ಪೂಜೆಗೆ ಎಂದು 10 ಸಾವಿರ ತೆಗೆದುಕೊಂಡವರು ಒಂದು ಹೂವು, ಗಂಧದ ಕಡ್ಡಿಯನ್ನೂ ಹಚ್ಚಿಲ್ಲ. ಇಂದು ಬೂದಿಯನ್ನು ತೆಗೆದುಕೊಂಡು ಹೋಗಲು ಬಂದಿದ್ದೇವೆ. ಹಣ ನೀಡಲಿಲ್ಲ ಎಂದರೆ ಅಂತ್ಯ ಸಂಸ್ಕಾರ ತಡ ಮಾಡುತ್ತಾರೆ. ಕೊರೋನಾ ಹೆಚ್ಚಾಗಿರುವುದರಿಂದ ಇಲ್ಲಿ ಬಂದವರೂ ಕಾಯಲು ಹೋಗುವುದಿಲ್ಲ. ನರ ಭಕ್ಷಕರಂತೆ ಸತ್ತ ಬಳಿಕವೂ ಕಿತ್ತು ತಿನ್ನುತ್ತಿದ್ದಾರೆ’ ಎಂದು ಹಿಡಿಶಾಪ ಹಾಕಿದರು.

ಎಚ್ಚೆತ್ತ ಬಿಬಿಎಂಪಿ, ಮಾರ್ಷಲ್‌ಗಳ ನಿಯೋಜನೆ:

ಬುಧವಾರ ಹಾಗೂ ಗುರುವಾರ ತೀವ್ರ ಸಮಸ್ಯೆಯಾದ ಬೆನ್ನಲ್ಲೇ ಮೇಡಿ ಅಗ್ರಹಾರ ಹಾಗೂ ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರದ ಬಳಿ ಬಿಬಿಎಂಪಿಯು ಮಾರ್ಷಲ್‌ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದೆ. ಅಲ್ಲದೆ ಬಿಬಿಎಂಪಿ ಜಂಟಿ ಆಯುಕ್ತ ಡಾ. ಅಶೋಕ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುಲಿಗೆಯ ಪ್ಯಾಕೇಜ್‌

ಆ್ಯಂಬುಲೆನ್ಸ್‌ಗೆ 13 ಸಾವಿರ ರು.

ಶವದ ಪೂಜೆ 10 ಸಾವಿರ ರು.

ಶವದಹನ 6500 ರು.

ಪಿಪಿಇ ಕಿಟ್‌ 1000 ರು.

ಸಿಬ್ಬಂದಿಗೆ ಟಿಫ್ಸ್‌ 5000 ರು.

ಕ್ರಿಮಿನಲ್‌ ಕೇಸ್‌: ಸುಧಾಕರ್‌ ಎಚ್ಚರಿಕೆ

ಕೊರೋನಾದಂತಹ ಕಷ್ಟದ ಸಂದರ್ಭದಲ್ಲಿ ರೋಗಿಗಳ ಸಂಬಂಧಿಕರಿಂದ ಸುಲಿಗೆ ಮಾಡುವುದನ್ನು ಸಹಿಸುವುದಿಲ್ಲ. ಖಾಸಗಿ ಆ್ಯಂಬುಲೆನ್ಸ್‌ನವರು ಶವ ಸಾಗಿಸಲು ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹೆಣಗಳ ಮೇಲೆ ಶೋಷಣೆ ಮಾಡುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

- ಡಾ.ಕೆ.ಸುಧಾಕರ್‌, ಆರೋಗ್ಯ ಸಚಿವ

click me!