* ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿಲ್ಲ ಆಕ್ಸಿಜನ್ ಬೆಡ್, ವೆಂಟಿಲೇಟರ್‌ಗಳು
* ಬೆಡ್ ಸಿಗದೆ ಅದೆಷ್ಟೋ ಜನರು ಅಸು ನೀಗುತ್ತಿದ್ದಾರೆ
* ದಿನೇ ದಿನೇ ಹೆಚ್ಚುತ್ತಿರುವ ಪ್ರಕರಣಗಳು
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.12): ನಿತ್ಯವೂ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಾಗಿ ರೋಗಿಗಳು ಅಲೆಯುತ್ತಿದ್ದಾರೆ. ಆದರೆ, ಎಲ್ಲಿಯೂ ಬೆಡ್ ಸಿಗುತ್ತಿಲ್ಲ. ರೋಗಿಗಳ ಕೂಗು ಅರಣ್ಯರೋದನವಾಗುತ್ತಿದೆ. ಬೆಡ್ ಸಿಗದೆಯೇ ಅದೆಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
undefined
ಕೊಪ್ಪಳ ಜಿಲ್ಲೆಯೊಂದರಲ್ಲಿಯೇ ನಿತ್ಯವೂ 500ಕ್ಕೂ ಅಧಿಕ ಕೇಸ್‌ಗಳು ಬರುತ್ತಿವೆ. ಅದರಲ್ಲಿ ಶೇ. 90ರಷ್ಟುಜನರು ಹೋಮ್ ಐಸೋಲೇಷನ್ ಆಗುತ್ತಾರೆ. ಉಳಿದವರು ಆಸ್ಪತ್ರೆಗಾಗಿ ಆಲೆಯುತ್ತಾರೆ. ಸೋಮವಾರವೇ 520 ಪಾಸಿಟಿವ್ ಪ್ರಕರಣಗಳು ಬಂದಿವೆ. ಅದರಲ್ಲಿ 448 ಜನರು ಮನೆಯಲ್ಲಿ ಐಸೋಲೇಟ್ ಆಗಿದ್ದಾರೆ. ಉಳಿದ 72 ಜನರು ಆಸ್ಪತ್ರೆಯಲ್ಲಿ ಬೆಡ್‌ಗಾಗಿ ಅಲೆಯುತ್ತಾರೆ. ಅವರಿಗೆ ಎಲ್ಲಿ ಬೆಡ್ ವ್ಯವಸ್ಥೆ ಆಯಿತೋ ದೇವರೇ ಬಲ್ಲ.
ಈಗಿರುವ ಅಧಿಕೃತ ಮಾಹಿತಿಯ ಪ್ರಕಾರವೇ ಸರ್ಕಾರಿ ಆಸ್ಪತ್ರೆಯಲ್ಲಿ 282 ಜನರು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 239 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ವಾಸ್ತವವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಆವಶ್ಯಕತೆ ಇರುವವರ ಸಂಖ್ಯೆ ಸಾವಿರಕ್ಕೂ ಅಧಿಕ ಇದೆ. ಹೀಗಾಗಿ, ಬೆಡ್‌ಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪಳ: ಮಗುವಿನ ಚಿಕಿತ್ಸೆಗಾಗಿ ನಾಲ್ಕು ಕಿಮಿ ನಡೆದ ಬಾಣಂತಿ
ವೆಂಟಿಲೇಟರ್, ಆಕ್ಸಿಜನ್ ಹಾಸಿಗೆ ಭರ್ತಿ:
ಜಿಲ್ಲಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿಯೂ ವೆಂಟಿಲೇಟರ್ ಹಾಗೂ ಆಕ್ಸಿಜನ್ ಸೌಲಭ್ಯವಿರುವ ಬೆಡ್‌ಗಳು ಭರ್ತಿಯಾಗಿವೆ. ಯಾವುದೇ ಆಸ್ಪತ್ರೆಗೂ ಹೋದರೂ ಚಿಕಿತ್ಸೆ ಪಡೆಯುವುದಕ್ಕಾಗಿ ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಿತ್ಯವೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಸುತ್ತಲೂ ಜನರು ಬೆಡ್‌ಗಾಗಿ ಕಾಯುತ್ತಿರುತ್ತಾರೆ. ನಮಗೆ ನೀಡಿ ಎಂದು ಅಂಗಲಾಚುತ್ತಿರುತ್ತಾರೆ. ಅದನ್ನು ನೋಡಿದರೆ ಎಂಥವರ ಕರುಳು ಚುರ್ ಎನ್ನುವಂತೆ ಆಗುತ್ತದೆ.
ತಾಂತ್ರಿಕ ಸಮಸ್ಯೆ:
ಈ ನಡುವೆ ಮತ್ತೊಂದು ಸಮಸ್ಯೆ ಎದುರಾಗಿದೆ. ಕೋವಿಡ್ ಪಾಸಿಟಿವ್ ಬಂದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಶಿಫಾರಸು ಪತ್ರ ನೀಡಲಾಗುತ್ತದೆ. ಆದರೆ, ಕೋವಿಡ್ ಪಾಸಿಟಿವ್ ಬರದೆ ಅದರ ಲಕ್ಷಣದಿಂದ ಬಳಲುತ್ತಿರುವವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೂ ಅವಕಾಶ ಇಲ್ಲ, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಶಿಫಾರಸು ಪತ್ರ ನೀಡುವುದಿಲ್ಲ. ಇಂಥ ತಾಂತ್ರಿಕ ಸಮಸ್ಯೆಯನ್ನು ನೀಗಿಸಲು ಸರ್ಕಾರ ಈಗಾಗಲೇ ಲಕ್ಷಣ ಇದ್ದವರಿಗೂ ಚಿಕಿತ್ಸೆ ನೀಡಬೇಕು ಎಂದು ಹೇಳಿದೆ. ಆದರೆ, ಎಚ್‌ಡಿಆರ್‌ಎಫ್ ಸಂಖ್ಯೆ ಇರದೆ ಶಿಫಾರಸು ಪತ್ರವನ್ನು ಖಾಸಗಿ ಆಸ್ಪತ್ರೆಯಲ್ಲಿ ಸ್ವೀಕಾರ ಮಾಡುವುದಿಲ್ಲ. ಇಂಥ ತಾಂತ್ರಿಕ ಸಮಸ್ಯೆಯಿಂದ ಅನೇಕರು ತೊಂದರೆಗೆ ಸಿಲುಕುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸಾಮಾನ್ಯ ಬೆಡ್ ಇದ್ದಿದ್ದು ಭರ್ತಿ
ಕೊಪ್ಪಳ ಜಿಲ್ಲಾಸ್ಪತ್ರೆ 56 56
ಗಂಗಾವತಿ ಎಸ್‌ಡಿಎಚ್ 44 44
ಗಂಗಾವತಿ ಎಂಸಿಎಚ್ 57 57
ಯಲಬುರ್ಗಾ 24 24
ಕುಷ್ಟಗಿ 36 36
ಮುನಿರಾಬಾದ್ 20 20
ಕೋವಿಡ್ ಐಸಿಯು
ಕೊಪ್ಪಳ ಜಿಲ್ಲಾಸ್ಪತ್ರೆ 00 00
ಗಂಗಾವತಿ ಎಸ್‌ಡಿಎಚ್ 08 08
ಗಂಗಾವತಿ ಎಂಸಿಎಚ್ 03 03
ಯಲಬುರ್ಗಾ 06 06
ಕುಷ್ಟಗಿ 06 06
ಮುನಿರಾಬಾದ್ 00 00
ವೆಂಟಿಲೇಟರ್
ಕೊಪ್ಪಳ ಜಿಲ್ಲಾಸ್ಪತ್ರೆ 20 20
ಗಂಗಾವತಿ 06 0 6
ಕುಷ್ಟಗಿ 04 04
ಯಲಬುರ್ಗಾ 04 04
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona