ಮೈಸೂರು (ಜೂ.29): ಕಳೆದ ಎರಡು ತಿಂಗಳಿಂದ ಲಾಕ್‌ಡೌನ್‌ನಿಂದ ಮುಚ್ಚಿದ ವ್ಯಾಪಾರ ವಹಿವಾಟು ಸೋಮವಾರದಿಂದ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಮತ್ತೆ ಆರಂಭವಾಗಿದೆ. ಜೊತೆಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸಹ ಆರಂಭವಾಗಿದ್ದು, ನಗರಾದ್ಯಂತ ವಾಹನಗಳ ಸಂಚಾರ ಹಾಗೂ ಜನರ ಓಡಾಟ ಹೆಚ್ಚಾಗಿತ್ತು.
ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳೊಂದಿಗೆ ಕೆಲವು ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮೈಸೂರು ನಗರಾದ್ಯಂತ ಅರ್ಧ ಭಾಗ ವ್ಯಾಪಾರ ವಹಿವಾಟು ಅನ್‌ಲಾಕ್ ಆಗಿತ್ತು.
ಕರ್ನಾಟಕದಿಂದ ಅಂತಾರಾಜ್ಯಕ್ಕೆ ಬಸ್ ಸಂಚಾರ, ರೈಟ್...ರೈಟ್ ಎಂದ ಸರ್ಕಾರ
ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಅಗತ್ಯ ವಸ್ತುಗಳು ಸೇರಿದಂತೆ ಇನ್ನಿತರ ಚಟುವಟಿಕೆಗೆ ಅವಕಾಶ ಇದ್ದುದ್ದರಿಂದ ವಾಹನಗಳ ಸಂಚಾರ ಹೆಚ್ಚಾಗಿತ್ತು. ಹೀಗಾಗಿ, ಸಂಚಾರ ಪೊಲೀಸರು ನಗರಾದ್ಯಂತ ಕಳೆದ 2 ತಿಂಗಳಿಂದ ಸ್ಥಗಿತಗೊಂಡಿದ್ದಂತಹ ಟ್ರಾಫಿಕ್ ಸಿಗ್ನಲ್ ಲೈಟ್‌ಗಳನ್ನು ಆನ್ ಮಾಡಿದ್ದರು. ಅಲ್ಲದೆ, ಮಧ್ಯಾಹ್ನ 2 ರವರೆಗೆ ರಸ್ತೆಗಳಿಗೆ ಅಡ್ಡಲಾಗಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಮಧ್ಯಾಹ್ನ 2ರ ನಂತರ ಸಿಗ್ನಲ್ ಲೈಟ್ ಆಫ್ ಮಾಡಿದ ಪೊಲೀಸರು, ಮತ್ತೆ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿ, ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳನ್ನು ಪರಿಶೀಲಿಸಿದರು.
ಸುಧಾರಿಸಿದ ಜೀವನ : ಮತ್ತೆ ಬಸ್ ಸಂಚಾರ ಆರಂಭ ...
ಬಸ್‌ಗಳ ಸಂಚಾರ : ಇನ್ನೂ ಸೋಮವಾರ ಬೆಳಗ್ಗೆ 6 ರಿಂದ ಕೆಎಸ್‌ಆರ್‌ಟಿಸಿ ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣಗಳಿಂದ ಬಸ್‌ಗಳ ಸಂಚಾರ ಆರಂಭವಾಯಿತು. ನಗರ ಬಸ್ ನಿಲ್ದಾಣದಿಂದ ವಿವಿಧ ಬಡಾವಣೆಗಳಿಗೆ, ಗ್ರಾಮಾಂತರ ಬಸ್ ನಿಲ್ದಾಣದಿಂದ ಜಿಲ್ಲೆಯ ವಿವಿಧ ತಾಲೂಕು, ಹಳ್ಳಿಗಳು, ಅಂತರ ಜಿಲ್ಲೆಗಳಿಗೆ ಬಸ್‌ಗಳು ತೆರಳಿದವು.
ಪ್ರತಿ ಬಸ್‌ಗಳಲ್ಲಿ ಶೇ.50 ರಷ್ಟುಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಪ್ರತಿ ಟ್ರಿಪ್‌ಗೊಮ್ಮೆ ಬಸ್‌ಗಳನ್ನು ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿತ್ತು.
ಮೈಸೂರು ಗ್ರಾಮಾಂತರ ಸಾರಿಗೆ ಘಟಕದಿಂದ ಮೊದಲ ಹಂತವಾಗಿ ಜಿಲ್ಲೆಯ ವಿವಿಧ ತಾಲೂಕು ಹಾಗೂ ಬೆಂಗಳೂರು, ಶಿವಮೊಗ್ಗ, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆಗೆ 200 ಬಸ್‌ಗಳು ಸಂಚಾರ ಆರಂಭಿಸಿದವು. ಮೊದಲ ದಿನವಾದ್ದರಿಂದ ಪ್ರಯಾಣಿಕರ ಕೊರತೆ ಕಂಡು ಬಂದಿತು.
ಮೈಸೂರು ನಗರ ಬಸ್ ಡಿಪೋದಿಂದ 112 ಬಸ್‌ಗಳು ಬೆಳಗ್ಗೆ 6 ಗಂಟೆಯಿಂದ ಸಂಚಾರ ಆರಂಭಿಸಿದ್ದು, ನಗರದ ಎಲ್ಲಾ ಬಡಾವಣೆಗಳಿಗೆ ಓಡಾಟ ನಡೆಸಿದವು. ಬಸ್ ಸಂಚಾರ ಆರಂಭದ ಮೊದಲ ದಿನವಾದ್ದರಿಂದ ಬೆರಳೆಣಿಕೆಯಷ್ಟುಪ್ರಯಾಣಿಕರು ಮಾತ್ರ ಕಂಡು ಬಂದರು. ಸಂಜೆಯ ಹೊತ್ತಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಯಿತು.