ಒಂದೇ ಕುಟುಂಬದ ನಾಲ್ವರು ಸಹೋದರರು ನೀರು ಪಾಲು

By Kannadaprabha NewsFirst Published Jun 29, 2021, 8:15 AM IST
Highlights
  • ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಮುಳುಗಿ ಸಾವು
  •  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಘಟನೆ
  • ನೀರಲ್ಲಿ ಮುಳುಗಿ ಮೃತಪಟ್ಟಿರುವ ನಾಲ್ವರು ಸಹೋದರರ ಶವಕ್ಕಾಗಿ ಹುಡುಕಾಟ

ಅಥಣಿ (ಜೂ.29):  ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದುರಂತವೊಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.

ಹಲ್ಯಾಳ ಗ್ರಾಮದ ಪರಶುರಾಮ ಗೋಪಾಲ ಬನಸೋಡೆ (24), ಧರೆಪ್ಪ ಗೋಪಾಲ ಬನಸೋಡೆ (29), ಸದಾಶಿವ ಗೋಪಾಲ ಬನಸೋಡೆ (22), ಶಂಕರ ಗೋಪಾಲ ಬನಸೋಡೆ (20) ಮೃತ ದುರ್ದೈವಿಗಳು.

ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ! ...

ನೀರಲ್ಲಿ ಮುಳುಗಿ ಮೃತಪಟ್ಟಿರುವ ನಾಲ್ವರು ಸಹೋದರರ ಶವಕ್ಕಾಗಿ ಅಥಣಿ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಫ್‌ ತಂಡ ಮತ್ತು ಮೀನುಗಾರರು ತೀವ್ರ ಶೋಧ ನಡೆಸಿದ್ದಾರೆ. ನಾಲ್ವರು ಗಂಡು ಮಕ್ಕಳನ್ನು ಕಳೆದುಕೊಂಡಿರುವ ಆಘಾತದಿಂದ ಕುಟುಂಬದಲ್ಲೀಗ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಘಟನೆ ವಿವರ:  ಬರುವ ವಾರ ಗ್ರಾಮದ ದೇವರ ಜಾತ್ರೆ ಇರುವುದರಿಂದ ಮನೆಯನ್ನು ಸ್ವಚ್ಛ ಮಾಡಲು ಗೃಹೋಪಯೋಗಿ ವಸ್ತುಗಳನ್ನು ಮತ್ತು ಹಾಸಿಗೆ ಹೊದಿಕೆಗಳನ್ನು ತೊಳೆಯಬೇಕೆಂದು ಹಲ್ಯಾಳ ಗ್ರಾಮದ ಕೃಷ್ಣಾ ನದಿಗೆ ಬಂದಿದ್ದಾರೆ. ಅವುಗಳನ್ನು ತೊಳೆಯುವ ಸಂದರ್ಭದಲ್ಲಿ ಓರ್ವ ಸಹೋದರ ಆಯತಪ್ಪಿ ನೀರಿನಲ್ಲಿ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಇತರೆ ಮೂವರು ಸಹೋದರರು ತಕ್ಷಣ ನೀರಿನಲ್ಲಿ ಜಿಗಿದಿದ್ದಾರೆ. ಕ್ಷಣ ಮಾತ್ರದಲ್ಲಿಯೇ ಆ ನಾಲ್ವರು ಸಹೋದರರು ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ನೀರನಲ್ಲಿ ಮುಳುಗಿ ಹೋಗಿರುವ ನಾಲ್ವರಿಗಾಗಿ ಈಗ ಶೋಧ ಕಾರ್ಯ ಆರಂಭವಾಗಿದ್ದು, ಇದುವರೆಗೆ ಯಾರ ಶವವೂ ಪತ್ತೆಯಾಗಿಲ್ಲ.

ಅಥಣಿ ತಹಸೀಲ್ದಾರ್‌ ದುಂಡಪ್ಪ ಕೋಮಾರ ಹಾಗೂ ಡಿವೈಎಸ್ಪಿ ಎಸ್‌.ವಿ. ಗಿರೀಶ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎಫ್‌ ತಂಡ ಯುವಕರ ಮೃತ ದೇಹಗಳ ಪತ್ತೆಗಾಗಿ ಶೋಧಕಾರ್ಯ ಮುಂದುವರಿಸಿದೆ.

click me!