ಮಂಗಳೂರು ದಸರಾಕ್ಕೆ ಈ ಬಾರಿಯೂ ಕೊರೋನಾ ಕರಿನೆರಳು?

By Kannadaprabha NewsFirst Published Sep 22, 2021, 2:52 PM IST
Highlights
  • ಅತ್ಯಂತ ವೈಭವದಿಂದ ನಡೆಯುವ ಮಂಗಳೂರು ದಸರಾ ಉತ್ಸವಕ್ಕೆ ಈ ಬಾರಿಯೂ ಕೊರೋನಾ ಕರಿನೆರಳು
  • ‘ನಮ್ಮ ದಸರಾ- ನಮ್ಮ ಸುರಕ್ಷೆ’ ಪರಿಕಲ್ಪನೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧಾರ

 ಮಂಗಳೂರು (ಸೆ.22):  ಅತ್ಯಂತ ವೈಭವದಿಂದ ನಡೆಯುವ ಮಂಗಳೂರು (Mangaluru) ದಸರಾ ಉತ್ಸವಕ್ಕೆ ಈ ಬಾರಿಯೂ ಕೊರೋನಾ ಕರಿನೆರಳು ಕಾಡಿದೆ. ಹಾಗಾಗಿ ‘ನಮ್ಮ ದಸರಾ-  ನಮ್ಮ ಸುರಕ್ಷೆ’ ಪರಿಕಲ್ಪನೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.

ಕೊರೋನಾ  (covid ) ಹಿನ್ನೆಲೆಯಲ್ಲಿ ‘ನಮ್ಮ ದಸರಾ- ನಮ್ಮ ಸುರಕ್ಷೆ’ ಪರಿಕಲ್ಪನೆಯಲ್ಲಿ ದಸರಾ ಆಚರಿಸಲು ಭಕ್ತರಿಂದ ಅಭಿಪ್ರಾಯ ವ್ಯಕ್ತವಾಗಿತ್ತು. ಸರ್ಕಾರದ ಮಾರ್ಗಸೂಚಿ ಪಾಲಿಸಿ ಸರಳ, ಸಾಂಪ್ರದಾಯಿಕ ದಸರಾ ಮಹೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ ಹೇ​ಳಿ​ದ್ದಾ​ರೆ.

ಮೈಸೂರು : ದಸರಾ ಆನೆಗಳಿಗೆ ತಾಲೀಮು

ನವದುರ್ಗೆ, ಶಾರದೆ, ಗಣಪತಿ ಪ್ರತಿಷ್ಠೆ: ದಸರಾ ಮಹೋತ್ಸವದ ದರ್ಬಾರು ಮಂಟಪದಲ್ಲಿ ಶ್ರೀ ಮಹಾಗಣಪತಿ, ಶಾರದೆ, ನವದುರ್ಗೆಯರ ಮೂರ್ತಿ ಪ್ರತಿಷ್ಠಾಪಿ​ಸ​ಲಾ​ಗು​ವು​ದು. ದಸರಾ ಆರಂಭದ ದಿನವೇ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ. ದಸರಾ ಮಹೋತ್ಸವ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯದ ಬಗ್ಗೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಕ್ಷೇತ್ರದ ಆಡಳಿತ ಸಮಿತಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳಲಿದೆ ಎಂದವರು ತಿಳಿಸಿದರು.

ಮೂರ್ತಿಗಳಿಗೆ ಮುಹೂರ್ತ: ದಸರಾ (Dasara) ಮಹೋತ್ಸವದಲ್ಲಿ ಪೂಜಿಸುವ ಮೂರ್ತಿಗಳ ರಚನೆಗೆ ಗಣೇಶ ಚತುರ್ಥಿಯಂದು ಮುಹೂರ್ತ ನಡೆದಿದೆ. 10ಕ್ಕೂ ಅಧಿಕ ಕಲಾವಿದರು ಮೂರ್ತಿ ರಚನೆಯಲ್ಲಿ ತೊಡಗಿದ್ದಾರೆ.

ಅನುಮತಿ ಸಿಕ್ಕಿದರೆ ಶೋಭಾಯಾತ್ರೆ?

ಮಂಗಳೂರು ದಸರಾದ 10 ದಿನಗಳ ಕಾಲ ದೇವಸ್ಥಾನವು ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಲಿದೆ. ಆದರೆ ರಾಜಬೀದಿಗಳ ಅಲಂಕಾರ ಮತ್ತು ದೇವರ ನಗರ ಪ್ರದಕ್ಷಿಣೆ, ಶೋಭಾಯಾತ್ರೆ ಆಯೋಜಿಸುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಒಂದು ವೇಳೆ ಸರ್ಕಾರ, ಜಿಲ್ಲಾಡಳಿತ ಶೋಭಾಯಾತ್ರೆಗೆ ಅನುಮತಿ ನೀಡಿದರೆ ಶೋಭಾಯಾತ್ರೆ ಆಯೋಜಿಸಲು ಚಿಂತನೆ ನಡೆಸಲಾಗುವುದು. ಗಣಪತಿ, ಶಾರದೆ ಸಹಿತ ನವದುರ್ಗೆ, ಆದಿಮಾಯೆಯನ್ನು ಒಂಭತ್ತು ದಿನಗಳ ಕಾಲ ಪೂಜಿಸಿ, ವಿಜಯ ದಶಮಿಯಂದು ವಿಸರ್ಜನಾ ಪೂಜೆ ನಡೆದು ದೇವಳದ ಪುಷ್ಕರಿಣಿಯಲ್ಲಿ ಮೂರ್ತಿ ವಿಸರ್ಜನೆ ನಡೆಸಲು ನಿರ್ಧರಿಸಲಾಗಿದೆ.

click me!