ರಾಮನಗರ (ಸೆ.22): ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸಲು ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗಳಲ್ಲಿ ( municipality ) ಅಧಿಕಾರದ ಗದ್ದುಗೆ ಹಿಡಿಯಲು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಆರಂಭಗೊಂಡಿದೆ.
ಕೊರೊನಾ ಕಾರಣದಿಂದಾಗಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದ್ದ ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆ ಚುನಾಯಿತ ಜನಪ್ರತಿನಿಧಿಗಳಿಗೆ ಸಚಿವ ಸಂಪುಟದ ತೀರ್ಮಾನದಿಂದ ನಗರಸಭೆಯೊಳಗೆ ಪ್ರವೇಶಿಸುವ ಕಾಲ ಸನಿಹಗೊಂಡಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿರುವುದರಿಂದ ಎರಡೂ ನಗರಸಭೆಗಳ ವರಿಷ್ಠರ ಗಾದಿಗೆ ಶೀಘ್ರದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ.
ಆಪರೇಷನ್ ಹಸ್ತ: ನಾವ್ಯಾಕೆ ಗುಟ್ಟು ಬಿಟ್ಟು ಕೊಡೋಣ ಎಂದ ಡಿಕೆಶಿ
ಕಳೆದ ಎರಡು ವರ್ಷಗಳ ಕಾಲ ಮೀಸಲಾತಿ ತೊಡಕಿಂದ ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆ ಚುನಾವಣೆ ಮುಂದೂಡಲ್ಪಟ್ಟಿತ್ತು. ನಂತರ ನೂತನ ಜನಪ್ರತಿನಿಧಿಗಳು ನಾಲ್ಕೂವರೆ ತಿಂಗಳಿಂದ ಅಡಳಿತ ಯಂತ್ರದಿಂದ ದೂರ ಉಳಿದಿದ್ದವು.
ರಾಮನಗರ ನಗರಸಭೆಯ ಅಧಿಕಾರವಧಿ 2019ರ ಮಾರ್ಚ್ 16 ಹಾಗು ಚನ್ನಪಟ್ಟಣ ನಗರಸಭೆಯ ಅಧಿಕಾರವಧಿ ಮಾ.14 ರಂದು ಅಂತ್ಯಗೊಂಡಿತ್ತು. ಬರೋಬ್ಬರು ಎರಡು ವರ್ಷ ಗಳ ನಂತರ ಎರಡು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾದಾಗಲೂ ವಿಘ್ನಗಳು ಎದುರಾಗಿತ್ತು. ನಗರಸಭೆ ಚುನಾವಣೆ ಸಮಯದಲ್ಲಿಯೇ ಮಹಾಮಾರಿ ಕೊರೋನಾ (covid) ತೀವ್ರ ಸ್ವರೂಪ ಪಡೆದಿತ್ತು. ಸಿದ್ಧತೆಗಳು ಪೂರ್ಣಗೊಂಡಿದ್ದ ಕಾರಣ ಚುನಾವಣೆ ಸುಸೂತ್ರವಾಗಿ ನಡೆಯಿತು. ಏಪ್ರಿಲ್ 30 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು.
ಚುನಾಯಿತರಾದ ದಿನದಿಂದಲೂ ನೂತನ ಸದಸ್ಯರು ನಗರಸಭೆಯೊಳಗೆ ಪ್ರವೇಶಿಸಲು ಕಾತರರಾಗಿದ್ದರು. ಆದರೆ ರಾಜ್ಯ ಸರ್ಕಾರ ಕೋವಿಡ್ ನೆಪ ಒಡ್ಡಿ ಎಲ್ಲಾ ಬಗೆಯ ಚುನಾವಣೆಗಳನ್ನು 6 ತಿಂಗಳು ಮುಂದೂಡಿತು. ಈ ಕಾರಣದಿಂದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಆದರೀಗ ಕೋವಿಡ್ ಮಾರ್ಗಸೂಚಿ ಅನುಸರಿಸಿ ಚುನಾವಣೆ ನಡೆಸಲು ಅನುಮತಿ ನೀಡಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿತ ಸದಸ್ಯರು ತಮ್ಮ ನಾಯಕರ ಮೂಲಕ ವರಿಷ್ಠರ ಮನ ಒಲಿಸಲು ಮುಂದಾಗಿದ್ದಾರೆ.
ಕಾಂಗ್ರೆಸ್‌ಗೆ ಬಹುಮತ : ರಾಮನಗರದಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಮ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟರಿಗೆ ಮೀಸಲಾಗಿದ್ದು 19 ಸ್ಥಾನ ಹಾಗೂ ಓರ್ವ ಪಕ್ಷೇತರರ ಬೆಂಬಲದಿಂದ ಕಾಂಗ್ರೆಸ್ ಬಹುಮತ ಹೊಂದಿದೆ.
ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಹೆಚ್ಚು ಸ್ಥಾನ : ಇನ್ನು ಚನ್ನಪಟ್ಟಣದಲ್ಲಿ 16 ಸ್ಥಾನ ಜೆಡಿಎಸ್ ಪಡೆದಿದ್ದು, ಬಹುಮತ ಹೊಂದಿದೆ. ಕಾಂಗ್ರೆಸ್ 7, ಬಿಜೆಪಿ 7 ಸದಸ್ಯ ಬಲಗಳನ್ನು ಹೊಂದಿದ್ದರೆ 1 ಸ್ಥಾನ ಪಕ್ಷೆತರರದ್ದು ಇದೆ.