ಕೊರೋನ ಅಟ್ಟಹಾಸ : ಕೇರಳ ಗಡಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮ

By Kannadaprabha News  |  First Published Apr 21, 2021, 2:21 PM IST

ಕೇರಳದಲ್ಲಿ ಕೋವಿಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗಡಿ ಪ್ರವೇಶಿಸುವ ಎಲ್ಲರು ಆರ್.ಟಿ.ಪಿ‌ಸಿ.ಆರ್. ಪರೀಕ್ಷೆ ವರದಿ ನೆಗಿಟಿವ್ ಇರುವುದನ್ನು ತರಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ. ವರದಿ ಇಲ್ಲದೆ ಬರುವವರನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು  ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದರು.


ಮೈಸೂರು (ಏ.21): ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಕರ್ನಾಟಕ -ಕೇರಳ ಗಡಿಪ್ರದೇಶ ಬಾವಲಿ ಚೆಕ್ ಪೋಸ್ಟ್‌ಗೆ ಇಂದು ಖುದ್ದು ಭೇಟಿ ನೀಡಿ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಪರಿಶೀಲಿಸಿದರು.

ಕೇರಳದಲ್ಲಿ ಕೋವಿಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗಡಿ ಪ್ರವೇಶಿಸುವ ಎಲ್ಲರು ಆರ್.ಟಿ.ಪಿ‌ಸಿ.ಆರ್. ಪರೀಕ್ಷೆ ವರದಿ ನೆಗಿಟಿವ್ ಇರುವುದನ್ನು ತರಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ. ವರದಿ ಇಲ್ಲದೆ ಬರುವವರನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ಹೇಳಿದರು.

Latest Videos

undefined

ಕೋವಿಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ವಾಹನಗಳ ಸಂಖ್ಯೆ ಕಡಿಮೆಯಾಗಿದೆ. ಸುಮಾರು 120 ರಿಂದ 130 ವಾಹನಗಳು ಮಾತ್ರ ಈಗ ಬರುತ್ತಿವೆ. ಎಲ್ಲಾ ವಾಹನಗಳಲ್ಲಿರುವ ಪ್ರಯಾಣಿಕರ ಕೋವಿಡ್ ವರದಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

44 ಲಕ್ಷ ಲಸಿಕೆ ಡೋಸ್‌ ವ್ಯರ್ಥ: ಲಸಿಕೆ ವೇಸ್ಟ್‌ ಮಾಡುವುದರಲ್ಲಿ ತ.ನಾಡು ನಂ.1! ...

ಕೋವಿಡ್ ಪರೀಕ್ಷೆ ಮಾಡಿಸದೆಯೂ ಬರುವ ಪ್ರಯಾಣಿಕರಿಗೆ ಪರೀಕ್ಷೆ ಮಾಡಲು ಕೇರಳ ಸರ್ಕಾರ ಗಡಿಯಲ್ಲಿ ಸ್ಯಾಂಪಲ್ ಸಂಗ್ರಹ ಕೇಂದ್ರವನ್ನು ಮಂಗಳವಾರದಿಂದ ತೆರೆದಿದೆ. ನಮ್ಮಲ್ಲೂ ಆ ರೀತಿ ಸ್ಯಾಂಪಲ್ ಸಂಗ್ರಹ ಕೇಂದ್ರ ತೆರೆಯಲು ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.

ಕರ್ನಾಟಕದ ರೈತರು ಬೆಳೆದ ತರಕಾರಿ ಹೆಚ್ಚಾಗಿ ಈ ಗಡಿ ಮೂಲಕ ಕೇರಳಕ್ಕೆ ಸಾಗಣೆಯಾಗುತ್ತದೆ. ನಮ್ಮ ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಿದ್ದೇವೆ. ಸಾವು-ನೋವಿನ ಸಂದರ್ಭದಲ್ಲಿ ತುರ್ತಾಗಿ ಪ್ರಯಾಣಿಸಬೇಕಾದವರಿಗೂ ಸಹ ತೊಂದರೆಯಾಗದಂತೆ ಪ್ರಯಾಣಕ್ಕೆ ಸೂಕ್ತ ಅವಕಾಶ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸಲು ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಮೈಸೂರಿನ ಜನರು ಈ ನಿಯಮಗಳಿಗೆ ಯಾವಾಗಲೂ ಸ್ಪಂದಿಸುತ್ತಾರೆ. ಹೆಚ್ಚಿನ ಉಲ್ಲಂಘನೆ ಈ ಜಿಲ್ಲೆಯಲ್ಲಿ ಆಗುತ್ತಿಲ್ಲ ಎಂದು ಹೇಳಿದರು.

ಮೈಸೂರು ಜಿಲ್ಲೆಗೆ 8.75 ಲಕ್ಷ ಲಸಿಕೆ ಗುರಿ ಇತ್ತು. ಈಗಾಗಲೇ 5.70 ಲಕ್ಷ ಲಸಿಕೆ ಹಾಕಲಾಗಿದೆ. ಆಕ್ಸಿಜನ್ ಕೊರತೆ ಇಲ್ಲ‌. ಸರ್ಕಾರಿ ಆಸ್ಪತ್ರೆಯಲ್ಲಿ ರೆಮ್‌ಡಿಸಿವಿರ್ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಗಳಿಗೆ ಈ ಕೊರತೆ ಇದೆ. ಆರೋಗ್ಯ ಸಚಿವರು ಗುರುವಾರ ಮೈಸೂರಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಕ್ರಮವಹಿಸುವರು ಎಂದರು. 

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿಯವರು ಟಫ್ ರೂಲ್ಸ್ ಜಾರಿ ಮಾಡಿದ್ದಾರೆ. ಮೈಸೂರು ಜಿಲ್ಲಾಡಳಿತ ಈ ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಿದೆ ಎಂದರು.

ಮುಖ್ಯಮಂತ್ರಿಯವರಿಗೆ ಕೋವಿಡ್ ಬಂದು, ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿರುವುದರಿಂದ ರಾಜ್ಯಪಾಲರು ವೀಡಿಯೋ ಸಂವಾದದ ಮೂಲಕ ಎಲ್ಲಾ ಪಕ್ಷಗಳ ಮುಖಂಡರಿಂದ ಮಾಹಿತಿ ಪಡೆದರು. ಈ ಸಭೆಯಲ್ಲಿ ಮುಖ್ಯಮಂತ್ರಿಯವರು, ಹಲವಾರು ಸಚಿವರು ಸಹ ಭಾಗವಹಿಸಿದ್ದಾರೆ.  ರಾಜ್ಯಪಾಲರ ಈ ಸಭೆಯ ಬಗ್ಗೆ ವಿರೋಧ ಪಕ್ಷದವರು ಅಪಸ್ವರ ಎತ್ತಿರುವ ಬಗ್ಗೆ ಪತ್ರಕರ್ತರು ಕೇಳಿದಾಗ, ರಾಜ್ಯಪಾಲರ ಕ್ರಮದಲ್ಲಿ ಯಾವುದೇ ತಪ್ಪು ಇಲ್ಲ. ವಿರೋಧ ಪಕ್ಷದವರು ಕೇವಲ ವಿರೋಧ ಮಾಡುವುದಕ್ಕಾಗಿಯೇ ಟೀಕಿಸುತ್ತಾರೆ ಎಂದರು. 

ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ತಹಶೀಲ್ದಾರ್ ನರಗುಂದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

click me!