
ಬೆಳಗಾವಿ(ಏ.21): ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನಾಲ್ವರು ಸಚಿವರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಮಾಡುವುದರಿಂದ ಕಾರ್ಖಾನೆ ಬಂದ್ ಆಗುತ್ತವೆ. ಅಲ್ಲಿ ಕಾರ್ಮಿಕರು ಮನೆಯಲ್ಲಿರಬೇಕಾಗಿರುತ್ತದೆ. ಸರ್ಕಾರ ಅನಾವಶ್ಯಕವಾಗಿ ತಿರುಗಾಡುವವರ ಮೇಲೆ ಕ್ರಮ ಕೈಗೊಳ್ಳಲಿ. ಮತ್ತೆ ಲಾಕ್‌ಡೌನ್ ಮಾಡಿದ್ದಲ್ಲಿ ಸಮಸ್ಯೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರ ಜನರಪರವಾಗಿಲ್ಲ. ಜಿಲ್ಲೆಯಲ್ಲಿ ನಾಲ್ಕು ಮಂತ್ರಿಗಳ ಇದ್ದರೂ ಜಿಲ್ಲಾ ಸಮಸ್ಯೆಯ ಬಗ್ಗೆ ಒಂದು ಬಾರಿ ಸಭೆ ನಡೆಸಿಲ್ಲ, ಜನ ಗೊಂದಲದಲ್ಲಿದ್ದಾರೆ. ಸರ್ಕಾರ ಲಾಕ್‌ಡೌನ್ ಮಾಡುತ್ತಾರಾ ಅಥವಾ ಇಲ್ಲವಾ ಎಂದು ಸರ್ಕಾರದ ಮಾರ್ಗಸೂಚಿಯ ಬಗ್ಗೆ ಗೊಂದಲ ಇದೆ. ಸೆಕ್ಸನ್ 144 ಮಾಡಲಿ. ಆದರೆ ನೈಟ್ ಕರ್ಫ್ಯೂ ಮಾಡಿದರೆ ಏನೂ ಪ್ರಯೋಜನ ಇಲ್ಲ. ಜನರಿಗೆ ತೊಂದರೆ ಮಾಡುವುದು ಬೇಡ, ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಹೆಚ್ಚಳವಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕು. ಇಲ್ಲದಿದ್ದರೇ ನಾಲ್ವರು ಸಚಿವರಿದ್ದಾರೆ. ಅವರು ಒಮ್ಮತದಿಂದ ಬಂದು ಸಭೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್‌ಗೆ ನೆರವಾಗಲು ಬೆಳಗಾವಿಗೆ ಸಂಜಯ ರಾವುತ್: ಫಡ್ನವೀಸ್
ಮದುವೆ ಹಾಗೂ ಇನ್ನಿತರ ಸಮಾವೇಶಗಳಿಗೆ ಕಡಿವಾಣ ಹಾಕಬೇಕು ಎಂದು ಮೊದಲೇ ಹೇಳಿದ್ದೆ. ಜಿಲ್ಲೆಯಲ್ಲಿ ಇನ್ನೂ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದದ್ದರೆ ಅಪಾಯ ಕಟ್ಟಿಟ್ಟಬುತ್ತಿ ಎಂದರು. ಸಾರಿಗೆ ನೌಕರರ ಸಮಸ್ಯೆ ಸಾಕಷ್ಟಿದೆ. ಅವರ ಹೋರಾಟ ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ. ಈ ಹಿಂದೆಯೇ ಸರ್ಕಾರ ಪತ್ರದ ಮೂಲಕ ಆರನೇ ವೇತನ ನೀಡಲಾಗುವುದು ಎಂದು ಹೇಳಿತ್ತು. ಈಗ ನೀಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರ ಬಗ್ಗೆ ನಮ್ಮ ವರಿಷ್ಠರ ಗಮನಕ್ಕೆ ತಂದು ಅವರ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಗೆಲವು ಖಚಿತ:
ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ. ಕಳೆದ 20 ವರ್ಷಗಳಿಂದ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ವಶಪಡಿಸಿಕೊಳ್ಳುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಂಇಎಸ್ ಅಭ್ಯರ್ಥಿ ಸ್ಪರ್ಧೆ ಮಾಡಿರುವುದು ನಮಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ನಮ್ಮ ಮತಗಳು ನಮಗೆ ಇರುತ್ತವೆ. ಎಂಇಎಸ್ ಚುನಾವಣೆಗೆ ಸ್ಪರ್ಧೆ ಮಾಡುವುದು ಹೊಸತೇನಲ್ಲ. ಪ್ರತಿ ಬಾರಿಯಂತೆ ಅವರು ಈ ಬಾರಿಯೂ ಮಾಡಿದ್ದಾರೆ. ಅದರ ಪರಿಣಾಮ ಏನೂ ನಮಗೆ ಬೀರದು ಎಂದು ತಿಳಿಸಿದ್ದಾರೆ.