ಮುಂಗಡ ಟಿಕೆಟ್‌ ಇದ್ದರೂ ರೈಲ್ವೆ ಪ್ರಯಾಣಕ್ಕೆ ಸಿಗದ ಅವಕಾಶ :ದಂಡ

By Web DeskFirst Published Aug 17, 2019, 10:45 AM IST
Highlights

ಮೀಸಲಿಟ್ಟ ಬೋಗಿಗಳಲ್ಲಿ ಪ್ರಯಾಣಿಕರ ಪ್ರವೇಶಕ್ಕೆ ಅವಕಾಶ ನೀಡುವ ಮೂಲಕ ಮುಂಗಡ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರಿಗೆ ಪ್ರಯಾಣದಿಂದ ವಂಚಿತರಾಗುವಂತೆ ಮಾಡಿದ ರೈಲ್ವೆ ಇಲಾಖೆಗೆ ದಂಡ ವಿಧಿಸಲಾಗಿದೆ. 

ರಮೇಶ್‌ ಬನ್ನಿಕುಪ್ಪೆ

 ಬೆಂಗಳೂರು [ಆ.17]:  ಮೀಸಲಿಟ್ಟ ಬೋಗಿಗಳಲ್ಲಿ ಸಾಮಾನ್ಯ ಪ್ರಯಾಣಿಕರ ಪ್ರವೇಶಕ್ಕೆ ಅವಕಾಶ ನೀಡುವ ಮೂಲಕ ಮುಂಗಡ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರು ಪ್ರಯಾಣದಿಂದ ವಂಚಿತರಾಗಲು ಕಾರಣವಾದ ರೈಲ್ವೆ ಇಲಾಖೆಗೆ ಗ್ರಾಹಕರ ಹಕ್ಕುಗಳ ನ್ಯಾಯಾಲಯವು 12 ಸಾವಿರ ದಂಡ ವಿಧಿಸಿದೆ.

ಮುಂಗಡ ಟಿಕೆಟ್‌ ಪಡೆದು ಪ್ರಯಾಣದಿಂದ ವಂಚಿತರಾದ ಪ್ರಯಾಣಿಕರೊಬ್ಬರು ಹಣ ವಾಪಸು ಮಾಡುವಂತೆ ಕೋರಿದರೂ ಹಣ ನೀಡದ ರೈಲ್ವೆ ಇಲಾಖೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ದಂಡ ಹಾಕಿದೆ.

ಸಾರ್ವಜನಿಕರ ಸೇವೆಗಾಗಿ ಇರುವ ರೈಲ್ವೆ ಇಲಾಖೆ ಹೆಚ್ಚು ಹಣ ಪಾವತಿಸಿ ಟಿಕೆಟ್‌ ಖರೀದಿಸಿದ ಗ್ರಾಹಕರಿಗೆ ಅಗತ್ಯ ಸೌಲಭ್ಯ ಒದಗಿಸುವುದು ಇಲಾಖೆಯ ಆದ್ಯ ಕರ್ತವಾಗಿದೆ. ಆದರೆ, ಕಾಯ್ದಿರಿಸಿದವರಿಗೆ ಮೀಸಲಿಟ್ಟಬೋಗಿಗಳಲ್ಲಿ ಸಾಮಾನ್ಯಪ್ರಯಾಣಿಕರು ಪ್ರಯಾಣಿಸುತ್ತಿದ್ದರೂ ಇದನ್ನು ತಡೆದು ಮುಂಗಡ ಟಿಕೆಟ್‌ ಖರೀದಿಸಿದವರಿಗೆ ಸೂಕ್ತ ವ್ಯವಸ್ಥೆ ಮಾಡದಿರುವುದು ರೈಲ್ವೆ ಅಧಿಕಾರಿಗಳು ಕತ್ರ್ಯವ್ಯ ಲೋಪ ಎಸಗಿದಂತಾಗಿದೆ. ಅಲ್ಲದೆ, ಗ್ರಾಹಕರ ಹಕ್ಕುಗಳ ಸ್ಪಷ್ಟಉಲ್ಲಂಘನೆ ಮತ್ತು ಸೇವಾ ನ್ಯೂನ್ಯತೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರೈಲ್ವೆ ಸಿಬ್ಬಂದಿಯ ನಿರ್ಲಕ್ಷ್ಯತನದಿಂದ ಟಿಕೆಟ್‌ ಕಾಯ್ದಿರಿಸಿರುವವರಿಗೆ ಪ್ರಯಾಣ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಸೃಷ್ಟಿಮಾಡುವುದು ಸರಿಯಾದ ಕ್ರಮವಲ್ಲ. ಪರಿಣಾಮ ಟಿಕೆಟ್‌ ಕಾಯ್ದಿರಿಸಿದ್ದು ಪ್ರಯಾಣಿಸಲು ಸಾಧ್ಯವಾಗದ ಗ್ರಾಹಕನಿಗೆ ಟಿಕೆಟ್‌ನ ಸಂಪೂರ್ಣ ಮೊತ್ತ ಮತ್ತು ರೈಲು ನಿಲ್ದಾಣದಿಂದ ಮನೆಗೆ ಹಿಂದಿರುಗಲು ಆಟೋ ರಿಕ್ಷಾ ಬಾಡಿಗೆ ಸಮೇತ ಹಿಂದಿರುಗಿಸಲು ಸೂಚಿಸಿದೆ.

ಟಿಟ್ ಫಾರ್ ಟ್ಯಾಟ್: ಥಾರ್ ಲಿಂಕ್ ಎಕ್ಸಪ್ರೆಸ್ ರದ್ದುಗೊಳಿಸಿದ ಭಾರತ!

ರೈಲು ನಿಲ್ದಾಣದಿಂದ ಮನೆಗೆ ಹಿಂದಿರುಗಲು ಆಟೋ ರಿಕ್ಷಾ ಬಾಡಿಗೆಯಾಗಿ 1,047  ರು. ಪ್ರಕರಣಕ್ಕೆ ಕುರಿತ ನ್ಯಾಯಾಂಗ ಹೋರಾಟದ ವೆಚ್ಚವಾಗಿ 1,500 ರು. ಟಿಕೆಟ್‌ ಕಾಯ್ದಿರಿಸಿದ್ದರೂ ಪ್ರಯಾಣ ಮಾಡಲು ಸಾಧ್ಯವಾಗದೆ ಮಾನಸಿಕ ಹಿಂಸೆ ಅನುಭವಿಸಿದ್ದಕ್ಕಾಗಿ 10 ಸಾವಿರ ರು. ಸೇರಿ ಒಟ್ಟು 12,547  ರು. ಗಳನ್ನು ಆದೇಶದ ಪ್ರತಿ ಸಿಕ್ಕ 30 ದಿನದಲ್ಲಿ ಹಿಂದಿರುಗಿಸಲು ನ್ಯಾಯಾಲಯ ರೈಲ್ವೆ ಇಲಾಖೆಗೆ ನಿರ್ದೇಶಿಸಿದೆ.

 ದೂರು ನೀಡಿದರೂ ಸ್ಪಂದಿಸದ ಇಲಾಖೆ

ಬೆಂಗಳೂರಿನ ಹೊರಮಾವು ನಿವಾಸಿ ಮಂಜುನಾಥ್‌ ಎಂಬುವವರು 2018ರ ಜೂನ್‌ 30ರಂದು ಕೃಷ್ಣರಾಜಪುರದಿಂದ ತಮಿಳುನಾಡಿನ ಜೋಲಾರ್‌ಪೆಟ್ಟೈ ಎಂಬಲ್ಲಿಗೆ ಕುಟುಂಬಸ್ಥರೊಂದಿಗೆ ಪ್ರಯಾಣಿಸಲು 27ರಂದು ಅಂತರ್ಜಾಲದಲ್ಲಿ ಟಿಕೆಟ್‌ ಕಾಯ್ದಿರಿಸಿದ್ದರು. ಅದರಂತೆ ಜೂನ್‌ 30ರಂದು ಕುಟುಂಬ ಸಮೇತ ರೈಲು ನಿಲ್ದಾಣಕ್ಕೆ ಬಂದಿದ್ದರು. ಆದರೆ, ರೈಲು ಬರುತ್ತಿದ್ದಂತೆ ಸಾಮಾನ್ಯ ಪ್ರಯಾಣಿಕರು ಎಲ್ಲ ಬೋಗಿಯ ದ್ವಾರಗಳಲ್ಲಿ ಮುಗಿಬಿದ್ದಿದ್ದರು. ಜೊತೆಗೆ ಕಾಯ್ದಿರಿಸಿದವರಿಗೆ ಮೀಸಲಿಟ್ಟಬೋಗಿಗಳಿಗೆ ಪ್ರವೇಶಿಸಿದ್ದರು. ಪರಿಣಾಮ ಮಂಜುನಾಥ್‌ ಅವರಿಗೆ ಒಳ ಪ್ರವೇಶಕ್ಕೆ ಅವಕಾಶವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಅವರು ತನ್ನ ವಯಸ್ಸಾದ ತಾಯಿಯೊಂದಿಗೆ ಒಳ ಪ್ರವೇಶಕ್ಕೆ ಪ್ರಯತ್ನ ಪಟ್ಟರಾದರೂ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ರೈಲು ಹೊರಟಿತ್ತು.

ತಕ್ಷಣ ಟಿಕೆಟ್‌ಅನ್ನು ಅಂತರ್ಜಾಲದ ಮೂಲಕ ರದ್ದುಪಡಿಸಿದ್ದರು. ಆದರೂ, ಹಣ ಹಿಂದಿರುಗಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಗ್ರಾಹಕರ ಅಂತರ್ಜಾಲ ನಿರ್ವಹಣಾ ಸಂಸ್ಥೆ ಮೂಲಕ ರೈಲ್ವೆ ಇಲಾಖೆಗೆ ದೂರು ನೀಡಿದ್ದರು. ಆದರೂ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ಇದರಿಂದ ಬೇಸತ್ತ ಮಂಜುನಾಥ್‌ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಗ್ರಾಹಕರ ಹಕ್ಕುಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

 ವಿಚಾರಣೆಗೆ ಹಾಜರಾಗದ ರೈಲ್ವೆ ಇಲಾಖೆ

ಪ್ರಕರಣ ಕುರಿತು ರೈಲ್ವೆ ಇಲಾಖೆಯ ಬೆಂಗಳೂರು ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೆ, ನೋಟಿಸ್‌ಗೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಪರಿಣಾಮ ಅರ್ಜಿದಾರರ ವಾದವೇ ಅಂತಿಮ ಎಂದು ಪರಿಗಣಿಸಿ ಆದೇಶ ನೀಡುತ್ತಿರುವುದಾಗಿ ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

click me!