ಶಿವಮೊಗ್ಗ ಕೊರೋನಾ ಸೋಂಕಿತ 8 ಮಂದಿ ಬಿಡುಗಡೆಗೆ ದಿನಗಣನೆ

By Kannadaprabha NewsFirst Published May 24, 2020, 10:29 AM IST
Highlights

ಮೇ 9 ರಂದು ಅಹ್ಮದಾಬಾದಿನಿಂದ ಖಾಸಗಿ ವಾಹನದಲ್ಲಿ 9 ಮಂದಿ ಆಗಮಿಸಿದ್ದರು. ಇವರನ್ನು ವಿದ್ಯಾನಗರದ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದು ಕ್ವಾರಂಟೈನ್‌ಗೆ ಒಳಪಡಿಸಿತ್ತು. ಇವರಲ್ಲಿ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿದ್ದು, ಅವರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

ಶಿವಮೊಗ್ಗ(ಮೇ.24): ಜಿಲ್ಲೆಯಲ್ಲಿನ ಮೊದಲ ಕೊರೋನಾ ಪ್ರಕರಣದ 14 ದಿನಗಳ ಅವಧಿ ಇಂದಿಗೆ ಮುಕ್ತಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ದಿನಗಣನೆ ಆರಂಭಗೊಂಡಿದೆ.

ಮೇ 9 ರಂದು ಅಹ್ಮದಾಬಾದಿನಿಂದ ಖಾಸಗಿ ವಾಹನದಲ್ಲಿ 9 ಮಂದಿ ಆಗಮಿಸಿದ್ದರು. ಇವರನ್ನು ವಿದ್ಯಾನಗರದ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದು ಕ್ವಾರಂಟೈನ್‌ಗೆ ಒಳಪಡಿಸಿತ್ತು. ಇವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇವರಲ್ಲಿ 8 ಮಂದಿಗೆ ಕೊರೋನಾ ಸೋಂಕು ಇರುವುದು ಗೊತ್ತಾಗಿತ್ತು. ತಕ್ಷಣವೇ ಇವರನ್ನು ಕೋವಿಡ್‌ ಆಸ್ಪತ್ರೆ ಆಗಿರುವ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕದ ದಿನಗಳಲ್ಲಿ ಇವರ ಆರೋಗ್ಯ ಶೀಘ್ರವೇ ಸುಧಾರಿಸಿದ್ದು ಜಿಲ್ಲಾಡಳಿತಕ್ಕೆ ನೆಮ್ಮದಿ ತಂದಿತ್ತು. ಚಿಕಿತ್ಸೆಗೂ ಸಹಕರಿಸಿದ್ದರು. ಮೇ 23 ರ ಶನಿವಾರ ಇವರ 14 ದಿನಗಳ ಆಸ್ಪತ್ರೆ ವಾಸ ಮುಗಿದಿದೆ.

ಭಾನುವಾರ ಮತ್ತು ಸೋಮವಾರ ಎರಡು ದಿನವೂ ಇವರ ಗಂಟಲು ದ್ರವ ಮಾದರಿಯನ್ನು ಪುನಃ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುವುದು. ಆಗಲೂ ಇವರ ಮಾದರಿಯಲ್ಲಿ ನೆಗೆಟೀವ್‌ ಫಲಿತಾಂಶ ಬಂದಲ್ಲಿ ಇವರನ್ನು ಕೊರೋನಾ ಗುಣಮುಕ್ತ ಎಂದು ಘೋಷಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್‌ ತಿಳಿಸಿದ್ದಾರೆ.

ಕಂಟೈನ್ಮೆಂಟ್‌ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್:

ಜಿಲ್ಲೆಯಲ್ಲಿ ಒಟ್ಟು ಐದು ಕಂಟೈನ್ಮೆಂಟ್‌ ಪ್ರದೇಶ ಎಂದು ಘೋಷಿಸಲಾಗಿದೆ. ಎರಡು ದಿನಗಳ ಹಿಂದೆ ತುಂಗಾ ನಗರ ಮತ್ತು ಹಳೇ ಸೊರಬದ ಕೆಲ ಪ್ರದೇಶಗಳನ್ನು ಕಂಟೈನ್ಮೆಂಟ್‌ ಪ್ರದೇಶ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ವೈದ್ಯಕೀಯ ಅನಿವಾರ್ಯತೆಯ ಹೊರತಾಗಿ ಯಾರನ್ನೂ ಹೊರಗೆ ಬಿಡುತ್ತಿಲ್ಲ. ಹಾಗೆಯೇ ಹೊರಗಿನಿಂದಲೂ ಬಿಡುತ್ತಿಲ್ಲ. ಜನ ಕೂಡ ಈ ಎರಡೂ ಪ್ರದೇಶಗಳಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಕೊರೋನಾ ಎಫೆಕ್ಟ್‌: 'ತುತ್ತು ಅನ್ನಕ್ಕೂ ಪರದಾಡುತ್ತಿರುವ ಲೈಂಗಿಕ ಕಾರ್ಯಕರ್ತೆಯರಿಗೆ ನೆರವು ನೀಡಿ'

ಕಂಟೈನ್ಮೆಂಟ್‌ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ನಿತ್ಯ ಗಮನಿಸಲು ಸೂಚಿಸಲಾಗಿದೆ. ಯಾರಿಗಾದರೂ ಸೋಂಕಿನ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಗಂಟಲು ದ್ರವ ಮಾದರಿ ಪರೀಕ್ಷೆಗೆ ಮುಂದಾಗಬೇಕೆಂದು ಸೂಚನೆ ನೀಡಲಾಗಿದೆ.

ಹೋಟೆಲ್‌ ಕ್ವಾರಂಟೈನ್‌ ಬಾಡಿಗೆ ಏರುಪೇರು-ಅಸಮಾಧಾನ

ಹೊರ ರಾಜ್ಯದಿಂದ ಬಂದವರನ್ನು ವಿವಿಧ ಹೋಟೆಲ್‌, ಹಾಸ್ಟೆಲ್‌ ಸೇರಿದಂತೆ ಅವರವರ ಹಣಕಾಸು ಸಾಮರ್ಥ್ಯದ ಬೇಡಿಕೆಗೆ ತಕ್ಕಂತೆ ವ್ಯವಸ್ಥೆ ಮಾಡಲಾಗುತ್ತಿದೆ.

ಮೂರು ದಿನಗಳ ಹಿಂದೆ ದೆಹಲಿಯಿಂದ ಬಂದವರನ್ನು ಗೋಪಾಳದ ಶ್ರೀ ಸಾಯಿ ಇಂಟರ್‌ ನ್ಯಾಶನಲ್‌ ಹೋಟೆಲ್‌ನಲ್ಲಿ ಇರಿಸಲಾಗಿತ್ತು. ಹೀಗೆ ಇರಿಸುವುದಕ್ಕೆ ಮುನ್ನ ಕ್ವಾರಂಟೈನ್‌ಗೆ ಒಳಗಾದವರಿಗೆ ಊಟ, ವಸತಿ ಸೇರಿ ದಿನವೊಂದಕ್ಕೆ 900 ರು. ಎಂದು ನಿಗದಿಪಡಿಸಿ ಮಾಹಿತಿ ನೀಡಲಾಗಿತ್ತು. ಇದನ್ನು ಒಪ್ಪಿದವರಿಗೆ ಮಾತ್ರ ಈ ಹೋಟೆಲ್‌ನಲ್ಲಿ ಅವಕಾಶ ನೀಡಲಾಗಿತ್ತು.

ಆದರೆ ಮಾರನೆ ದಿನ ಈ ಹೋಟೆಲ್‌ ಕ್ವಾರಂಟೈನ್‌ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ಕ್ವಾರಂಟೈನ್‌ ಆದವರು ನಿತ್ಯ 3 ಸಾವಿರ ರು. ನೀಡಬೇಕು. ಇಷ್ಟಇದ್ದರೆ ಇರಿ, ಇಲ್ಲದಿದ್ದರೆ ನಿಮ್ಮ ಇಷ್ಟದಂತೆ ಹೊರಟು ಹೋಗಿ ಎಂದು ಉಡಾಫೆಯ ಉತ್ತರ ನೀಡಿದ್ದು ಕ್ವಾರಂಟೈನ್‌ನಲ್ಲಿ ಇರುವವರಿಗೆ ಮತ್ತು ಅವರ ಕುಟುಂಬ ವರ್ಗಕ್ಕೆ ಅಸಮಾಧಾನ ತರಿಸಿತ್ತು. ಈ ಸಂಬಂಧ ವಾಗ್ವಾದ ಕೂಡ ನಡೆದಿತ್ತು. ಬಳಿಕ ಈ ಮಾಹಿತಿ ಜಿಲ್ಲಾಧಿಕಾರಿಗಳಿಗೂ ತಲುಪಿತ್ತು.

ಆ ನಂತರ ಪಾಲಿಕೆ ಆಯುಕ್ತರೇ ನೇರ ಪ್ರವೇಶ ಮಾಡಿ ಉಸ್ತುವಾರಿಯ ಬದಲಿ ವ್ಯವಸ್ಥೆ ಮಾಡಿದ್ದು, ಈ ಹಿಂದಿನಂತೆ ದಿನವೊಂದಕ್ಕೆ 900 ರು. ಬಾಡಿಗೆಯನ್ನೇ ನೀಡುವಂತೆ ಸೂಚಿಸಿದ್ದಾರೆ.


ಹೊಸ ಪ್ರಕರಣ ಇಲ್ಲ

ಇಂದು ಯಾವುದೇ ಹೊಸ ಪ್ರಕರಣಗಳು ಕಂಡು ಬಂದಿಲ್ಲ. ನಿತ್ಯವೂ ಸುಮಾರು 300 ಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ತುಂಗಾ ನಗರ ಮತ್ತು ಹಳೇ ಸೊರಬದ ಪ್ರಕರಣಗಳಲ್ಲಿ ಪ್ರಥಮ ಸಂಪರ್ಕಗಳನ್ನು ಪತ್ತೆ ಹಚ್ಚಲು ತಂಡ ರಚಿಸಲಾಗಿದೆ. ಜೊತೆ ಜೊತೆಗೆ ದ್ವಿತೀಯ ಸಂಪರ್ಕದ ಕುರಿತು ಕೂಡ ಮಾಹಿತಿ ಪಡೆಯಲಾಗುತ್ತಿದೆ.

click me!