* ಗುಣಮುಖರಾದ ಕುರಿತು ಅನುಮಾನ
* ಕೊರೋನಾ ಅಡ್ಡ ಪರಿಣಾಮವೇ ಎಂಬ ಆತಂಕ
* ಗುಣ ಆದವರು ಸ್ಥಳೀಯ ಕ್ಲಿನಿಕ್‌ಗಳ ಮೊರೆ
ಜಯಪ್ರಕಾಶ್ ಬಿರಾದಾರ್
ಬೆಂಗಳೂರು(ಫೆ.11): ಕೊರೋನಾ(Coronavirus) ಸೋಂಕು ಬಂದು ಚಿಕಿತ್ಸೆ/ಆರೈಕೆ ಅವಧಿ ಪೂರ್ಣಗೊಂಡರೂ ಹಲವರಿಗೆ ಕೆಮ್ಮು(Cough), ಗಂಟಲು ನೋವಿನ ಕಾಟ ತಪ್ಪಿಲ್ಲ. ಇದು ಸೋಂಕು ಸಂಪೂರ್ಣ ಗುಣಮುಖವಾಯಿತೋ ಇಲ್ಲವೋ ಎಂಬ ಅನುಮಾನದ ಜತೆಗೆ ಕೊರೋನಾನಂತರ ಆರೋಗ್ಯ ಸಮಸ್ಯೆ ಆರಂಭವಾಯಿತೇ ಎಂಬ ಆತಂಕ ಸೃಷ್ಟಿಸಿದೆ.
undefined
ಈ ಬಾರಿ ಸೋಂಕು ದೃಢಪಟ್ಟ ಶೇ.98 ರಷ್ಟು ಮಂದಿ ಮನೆಯಲ್ಲಿಯೇ ಆರೈಕೆಯಲ್ಲಿದ್ದಾರೆ. ಸೋಂಕು ದೃಢಪಟ್ಟು ಏಳು ದಿನಗಳ ಹೋಂ ಐಸೋಲೇಷನ್(Home Isolation) ಮುಗಿಸಿದ ನಂತರವೂ ಸಾಕಷ್ಟು ಮಂದಿಯಲ್ಲಿ ಒಂದೆರಡು ವಾರಗಳ ಮಟ್ಟಿಗೆ ಕೆಮ್ಮು, ಗಂಟಲು ನೋವು(Throat Pain) ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ನಿರಂತರವಾಗಿ ಅಲ್ಲದಿದ್ದರೂ ದಿನದಲ್ಲಿ ಹಲವು ಬಾರಿ ಈ ಸಮಸ್ಯೆ ಎದುರಾಗುತ್ತಿದೆ. ಇದರಿಂದ ದೈಹಿಕ ಮತ್ತು ಮಾನಸಿಕವಾಗಿಯೂ ಸಂಪೂರ್ಣ ಗುಣಮುಖವಾದೆ ಎಂಬ ಭಾವ ಮೂಡುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮು ಹೆಚ್ಚಾಗಿ ಕಿರಿಕಿರಿ ಉಂಟು ಮಾಡುತ್ತಿದೆ. ಇತ್ತ ಒಂದು ವಾರ ಆರೈಕೆ ಪಡೆದರೂ ಸೋಂಕು ಸಂಪೂರ್ಣ ಗುಣಮುಖವಾಗಲಿಲ್ಲ ಎಂಬ ಅನುಮಾನ ಕಾಡಲಾರಂಭಿಸಿದೆ. ಹೀಗಾಗಿ, ಸ್ಥಳೀಯ ಕ್ಲಿನಿಕ್‌ಗಳ ಮೊರೆ ಹೋಗುತ್ತಿದ್ದಾರೆ. ಜತೆಗೆ ಮತ್ತೊಮ್ಮೆ ಕೊರೋನಾ ಪರೀಕ್ಷೆಗೂ(Covid Test) ಹಲವರು ಮುಂದಾಗುತ್ತಿದ್ದಾರೆ.
Covid Crisis: 71365 ಕೇಸ್, 1217 ಸಾವು, ಸಕ್ರಿಯ ಕೇಸಿನ ಸಂಖ್ಯೆ 8.9 ಲಕ್ಷಕ್ಕಿಳಿಕೆ
ಹಲವು ದಿನಗಳ ಮಟ್ಟಿಗೆ ಕೆಮ್ಮು ಇದ್ದ ಹಿನ್ನೆಲೆ ಒಂದಿಷ್ಟು ಮಂದಿಗೆ ಎದೆ ಭಾಗದಲ್ಲಿ ನೋವು, ತಲೆ ಭಾರ, ಆಯಾಸ ಕಾಣಿಸಿಕೊಳ್ಳುತ್ತಿದೆ. ಇದು ಕೊರೋನಾ ಸೋಂಕಿನಿಂದ ಉಂಟಾದ ಅಡ್ಡ ಪರಿಣಾಮವೇ ಎಂಬ ಆತಂಕವನ್ನು ಮೂಡಿಸಿದೆ. ಇದಕ್ಕಾಗಿ ಸ್ಥಳೀಯ ಕ್ಲಿನಿಕ್‌ಗಳಿಗೆ ತೆರಳುತ್ತಿರುವ ರೋಗಿಗಳು ‘ಕೊರೋನಾದಿಂದ ಹೃದಯ(Heart) ಸೇರಿದಂತೆ ಇತರೆ ಅಂಗಾಂಗಗಳಿಗೆ ಹಾನಿಯಾಗಿದೆಯೇ ಪರೀಕ್ಷೆ ಮಾಡಿ‘ ಎಂದು ವೈದ್ಯರಲ್ಲಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಒಮಿಕ್ರೋನ್ ರೂಪಾಂತರಿ ದಾಳಿ ಕಾರಣ:
ಕೊರೋನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ವೈರಾಣು ಶ್ವಾಸಕೋಶಕ್ಕೆ(Lungs) ಹಾನಿ ಮಾಡುತ್ತಿದ್ದವು. ಹೀಗಾಗಿ, ಉಸಿರಾಟಕ್ಕೆ ಸಮಸ್ಯೆ ಉಂಟಾಗುತ್ತಿತ್ತು. ಆದರೆ, ಮೂರನೇ ಅಲೆಯಲ್ಲಿ ಒಮಿಕ್ರೋನ್(Omicron) ರೂಪಾಂತರಿಯು ಮೇಲ್ಭಾಗದ ಉಸಿರಾಟ ವ್ಯವಸ್ಥೆಗೆ (ಅಪ್ಪರ್ ರೆಸ್ಪರೇಟರಿ ಸಿಸ್ಟಂ) ಮಾತ್ರ ದಾಳಿ ಮಾಡುತ್ತಿದೆ. ಗಂಟಲು, ಮೂಗು, ಶ್ವಾಸರಂಧ್ರ, ಗಂಟಲು ಪೆಟ್ಟಿಗೆ ಭಾಗಗಳು ಹಾನಿಗೊಳಗಾಗುತ್ತಿವೆ. ಈ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳದಿದ್ದರೆ ವೈರಸ್ ಸತ್ತ ನಂತರವೂ ಅದು ಮಾಡಿದ್ದ ಹಾನಿಯಿಂದ ಕೆಮ್ಮು, ಗಂಟಲು ಭಾಗದಲ್ಲಿ ಕಿರಿಕಿರಿ ಹಲವು ದಿನ ಮುಂದುವರೆಯುತ್ತದೆ ಎನ್ನುತ್ತಾರೆ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ.ನಾಗರಾಜ್.
ಸ್ವಯಂ ಮದ್ದು, ನಿರ್ಲಕ್ಷ್ಯವೇ ಕಾರಣ
ಕೊರೋನಾ ಸೋಂಕು ಲಕ್ಷಣ ಇದ್ದವರು ಒಮ್ಮೆ ವೈದ್ಯರ ತಪಾಸಣೆಗೊಳಗಾಗಬೇಕು. ಆಗ ಗಂಟಲು ಭಾಗಕ್ಕೆ ಹೆಚ್ಚಿನ ಹಾನಿಯಾಗಿದೆಯೇ ಎಂಬುದನ್ನು ಪತ್ತೆ ಮಾಡಿ ಔಷಧ ನೀಡುತ್ತಾರೆ. ಆದರೆ, ಮೂರನೇ ಅಲೆಯಲ್ಲಿ ತೀವ್ರತೆ ಕಡಿಮೆ ಇದೆ ಎಂದು ತಿಳಿದ ಕೂಡಲೇ ಹಲವರು ಸೋಂಕಿನ ಲಕ್ಷಣಗಳಿದ್ದರೂ ಪರೀಕ್ಷೆಗೊಳಗಾಗದೇ ಮೆಡಿಕಲ್ ಶಾಪ್‌ಗಳಿಗೆ ತೆರಳಿ ಸ್ವಯಂ ಪ್ರೇರಿತವಾಗಿ ಔಷಧ(Medicine) ಖರೀದಿಸಿ ಸೇವಿಸುತ್ತಿದ್ದಾರೆ. ಇದರಿಂದ ವೈರಸ್ ಗಂಟಲಿಗೆ ಮಾಡಿರುವ ಹಾನಿ ಪತ್ತೆಯಾಗುವುದಿಲ್ಲ. ಇನ್ನು ಸಾಮಾನ್ಯ ಪ್ಯಾರಸಿಟಮಾಲ್‌ಗಳು ಸಂಪೂರ್ಣ ವಾಸಿ ಮಾಡುವುದಿಲ್ಲ. ಈ ರೀತಿಯ ನಿರ್ಲಕ್ಷ್ಯ, ಸ್ವಯಂ ಮದ್ದು ಕಾರಣ ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯ.
Covid Crisis: ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಮತ್ತಷ್ಟು ಇಳಿಕೆ
ಮೂರನೇ ಅಲೆಯಲ್ಲಿ ಸೋಂಕಿನ ತೀವ್ರತೆ ಸಾಕಷ್ಟುಕಡಿಮೆ ಇದೆ. ಆದರೂ, ಎರಡು ಮೂರು ವಾರವಾದರೂ ಕೆಮ್ಮು, ಗಂಟಲು ನೀವು ಕಾಣಿಸಿಕೊಳ್ಳುತ್ತಿದೆ. ಇದು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವಷ್ಟುಅಲ್ಲಾ, ನಿರ್ಲಕ್ಷ್ಯ ಮಾಡುವಷ್ಟು ಅಲ್ಲ. ಅನೇಕ ರೋಗಿಗಳು ಭಯ ಮತ್ತು ಗೊಂದಲದಿಂದ ಆಸ್ಪತ್ರೆ ಬರುತ್ತಿದ್ದಾರೆ ಅಂತ ಆರ್.ಟಿ.ನಗರದ ಖಾಸಗಿ ಕ್ಲಿನಿಕ್ ವೈದ್ಯ ಡಾ.ಸಾದಿಕ್ ತಿಳಿಸಿದ್ದಾರೆ.
ಏಳು ದಿನಗಳ ನಂತರವೂ ಕೆಮ್ಮು, ಗಂಟಲು ನೋವು ಹಲವರಲ್ಲಿ ಕಾಣಿಸಿಕೊಳ್ಳುತ್ತಿದೆ. ಸೂಕ್ತ ಚಿಕಿತ್ಸೆ/ಆರೈಕೆಯಿಂದ ಮಾತ್ರ ಗಂಟಲು ಭಾಗದಲ್ಲಿ ವೈರಾಣು ಮಾಡಿದ ಹಾನಿಯಿಂದ ಚೇತರಿಕೆ ಹೊಂದಬಹುದು. ನಿರ್ಲಕ್ಷ್ಯ ಮಾಡದೇ ಸಮೀಪದ ವೈದ್ಯರ ಸಂಪರ್ಕಿಸಬೇಕು ಅಂತ ಕೊರೋನಾ ರಾಜ್ಯ ಚಿಕಿತ್ಸಾ ಸಮಿತಿ ಮುಖ್ಯಸ್ಥ ಡಾ.ಕೆ.ರವಿ ಹೇಳಿದ್ದಾರೆ.
ವೈದ್ಯರ ಸಲಹೆಗಳಿವು
*ಏಳು ದಿನಗಳ ಬಳಿಕವು ಕೆಮ್ಮು, ಗಂಟಲು ನೋವಿದ್ದರೆ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು.
*ಸ್ವಯಂ ಔಷಧ ಪಡೆಯುವುದು, ನಿರಂತವಾಗಿ ಪ್ಯಾರಸಿಟಮಾಲ್ ಬಳಸುವುದು ಸೂಕ್ತವಲ್ಲ.
*ಮತ್ತೊಮ್ಮೆ ಸೋಂಕು ಪರೀಕ್ಷೆಗೊಳಗಾಗುವ, ಕೊರೋನಾ ಅಡ್ಡ ಪರಿಣಾಮ ಎಂದು ಅನಗತ್ಯ ಗಾಬರಿಯಾಗುವ ಆತಂಕವಿಲ್ಲ.
*ಸಂಪೂರ್ಣ ವಾಸಿಯಾಗುವವರೆಗೂ ಆಹಾರ ಪಥ್ಯೆ, ಬಿಸಿನೀರು ಸೇವನೆ ಕಡ್ಡಾಯ.