Mangaluru police: ಉಳ್ಳಾಲ ಠಾಣೆಯಲ್ಲಿ ಭ್ರಷ್ಟಾಚಾರ: ಮಂಗಳೂರು ಕಮಿಷನರ್ ಗೆ ಲೋಕಾಯುಕ್ತ ನೋಟೀಸ್!

By Ravi Janekal  |  First Published Jan 28, 2023, 8:13 AM IST

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರೀ ಭ್ರಷ್ಟಾಚಾರ ಆರೋಪದ ಬಗ್ಗೆ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್‌ ಶಶಿಕುಮಾರ್ ಗೆ ಲೋಕಾಯುಕ್ತ ನೋಟಿಸ್ ಜಾರಿಯಾಗಿದೆ. ಫೆ.14ರ ಒಳಗಡೆ ತನಿಖಾ ವರದಿ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ನೋಟೀಸ್ ಜಾರಿ ಮಾಡಲಾಗಿದೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಜ.28) : ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರೀ ಭ್ರಷ್ಟಾಚಾರ ಆರೋಪದ ಬಗ್ಗೆ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್‌ ಶಶಿಕುಮಾರ್ ಗೆ ಲೋಕಾಯುಕ್ತ ನೋಟಿಸ್ ಜಾರಿಯಾಗಿದೆ. ಫೆ.14ರ ಒಳಗಡೆ ತನಿಖಾ ವರದಿ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ನೋಟೀಸ್ ಜಾರಿ ಮಾಡಲಾಗಿದೆ.

Tap to resize

Latest Videos

ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್(Sandeep G.S) ಮತ್ತು ಸಬ್ ಇನ್ಸ್ ಪೆಕ್ಟರ್ ಪ್ರದೀಪ್(Inspector pradeep) ವಿರುದ್ದ ದಾಖಲಾಗಿದ್ದ ದೂರು ಇದಾಗಿದ್ದು, ಸಾಮಾಜಿಕ ಕಾರ‍್ಯಕರ್ತರೊಬ್ಬರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಸಾಮಾಜಿಕ ಕಾರ್ಯಕರ್ತ(Social worker) ಉಳ್ಳಾಲದ ಮೊಹಮ್ಮದ್ ಕಬೀರ್(Mohammad Kabir) ಎಂಬವರಿಂದ ದೂರು ದಾಖಲಾಗಿತ್ತು. 

Mangaluru: ಭ್ರಷ್ಟ ಅರಣ್ಯಾಧಿಕಾರಿಗೆ 1.50 ಕೋಟಿ ದಂಡ ಸಹಿತ 5 ವರ್ಷ ಜೈಲು!

ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್, ಎಸ್.ಐ ಪ್ರದೀಪ್ ವಿರುದ್ದ ಕಬೀರ್ ಭಾರೀ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಠಾಣೆಯಲ್ಲಿ ಹಣ ವಸೂಲು ಮಾಡಲು ಹಮೀದ್ ಎಂಬ ಬ್ರೋಕರ್ ಇಟ್ಟುಕೊಂಡಿದ್ದ ಎಂಬ ಆರೋಪದ ಜೊತೆಗೆ ಗಾಂಜಾ ಮಾಫಿಯ, ಮರಳು ಮಾಫಿಯ, ಹೊಟೇಲ್ ಮಾಲೀಕರಿಂದ ಹಣಕ್ಕೆ ಬೇಡಿಕೆ ಇಡುವ ಬಗ್ಗೆ ದೂರು ನೀಡಿದ್ದರು. ಇಬ್ಬರು ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಂತರ ಸಂಪಾದನೆ ಬಗ್ಗೆ ದೂರು ನೀಡಲಾಗಿತ್ತು‌. 

ಚಿನ್ನದ ಅಂಗಡಿ ದರೋಡೆ ಕೇಸ್ ನಲ್ಲಿ ಜಪ್ತಿ ಮಾಡಿದ ಚಿನ್ನ ಮತ್ತು ಬೆಳ್ಳಿಯನ್ನು ಇನ್ಸ್ ಪೆಕ್ಟರ್ ಸಂದೀಪ್ ಎಗರಿಸಿದ ಆರೋಪವನ್ನು ದೂರಿನಲ್ಲಿ ಕಬೀರ್ ಉಲ್ಲೇಖಿಸಿದ್ದರು. ಅಲ್ಲದೇ ಮಂಗಳೂರು ಕಮೀಷನರ್(Mangalore Commissioner) ಶಶಿಕುಮಾರ್(Shashikumar) ವಿರುದ್ದವೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು‌. 

ಅಧಿಕಾರ ದುರುಪಯೋಗ ಮತ್ತು ಲಂಚದ ಆಪಾದನೆ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ಕಲಂ.9 ರಡಿಯಲ್ಲಿ ತನಿಖೆ ನಡೆಸುವುದು ಸೂಕ್ತ ಎಂದು ಕರ್ನಾಟಕ ಲೋಕಾಯುಕ್ತ ನೋಟೀಸ್ ನೀಡಿದೆ. 2023ರ ಫೆ.14 ರ ಒಳಗೆ  ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಪೊಲೀಸ್ ಕಮೀಷನರ್ ಶಶಿಕುಮಾರ್ ಗೆ ನೋಟೀಸ್ ಜಾರಿ ಮಾಡಿದೆ. 

ಅಷ್ಟಕ್ಕೂ ಕಬೀರ್ ಕೊಟ್ಟ ದೂರಿನಲ್ಲೇನಿದೆ?

ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳಾದ ಇನ್ಸ್ ಪೆಕ್ಟರ್ ಸಂದೀಪ್, ಎಸ್.ಐ ಪ್ರದೀಪ್  ಎಂಬವರು ಪ್ರಕರಣಗಳಲ್ಲಿ ಠಾಣೆಗೆ ಬರುವವರೊಂದಿಗೆ ಹಣ ವಸೂಲು ಮಾಡಲು ಹಮೀದ್ ಎಂಬ ಬ್ರೋಕರ್ ಇಟ್ಟುಕೊಂಡಿದ್ದು, ಗಾಂಜಾ ಮಾಫಿಯ, ಮರಳು ಮಾಫಿಯ, ಹೊಟೇಲ್ ಮಾಲೀಕರಿಗೆ ಪ್ರತಿಯೊಂದರಲ್ಲಿ ಹಣದ ಬೇಡಿಕೆಯನ್ನು ಇಟ್ಟು ಜನರ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಇಬ್ಬರು ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಂತರ ರೂ. ಸಂಪಾದಿಸಿದ್ದಾರೆ. ಈ ಕುರಿತು ಇ-ಮೇಲ್ ಮೂಲಕ ಹಲವು ಇಲಾಖೆಯ ಮುಖ್ಯಸ್ಥರು, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಎಸಿಬಿ, ಎಡಿಜಿಪಿ, ದ.ಕ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಎಲ್ಲರಿಗೂ ಭ್ರಷ್ಟಾಚಾರದ ವಿರುದ್ಧ ದೂರು ನೀಡಿದರೂ ಯಾವುದೇ ಸ್ಪಂದನೆಯಿಲ್ಲ. ಪೊಲೀಸರ ಭ್ರಷ್ಟಾಚಾರದ  ಬಗ್ಗೆ ದೂರು ನೀಡಿರುವುದಕ್ಕೆ ತನಗೆ ಬೆದರಿಕೆಯನ್ನು ಹಾಕಲಾಗಿದೆ. ಅಲ್ಲದೇ ದೂರು ನೀಡಿದ ಬಗ್ಗೆ ತನ್ನನ್ನೇ ವಿಚಾರಣೆ ನಡೆಸಲಾಗುತ್ತಿದೆ ಎಂದು ದೂರು ನೀಡಿದ್ದರು.

ಚಿನ್ನವನ್ನೇ ಲೂಟಿ ಮಾಡಿದ ಆರೋಪ!

ಕೇರಳದ ಹೊಸಂಗಡಿಯಲ್ಲಿ ರಾಜಧಾನಿ ಹೆಸರಿನ ಚಿನ್ನದ ಅಂಗಡಿ ದರೋಡೆ ಮಾಡಿದ ಕಳ್ಳರಿಂದ ಜಪ್ತಿ ಮಾಡಿದ ಚಿನ್ನ ಮತ್ತು ಬೆಳ್ಳಿಯನ್ನು ಇನ್ಸ್ ಪೆಕ್ಟರ್ ಸಂದೀಪ್  ನ್ಯಾಯಾಲಯಕ್ಕೆ ನೀಡದೇ ಅವರ ಮನೆಗೆ ಸಾಗಿಸಿರುವ ಬಗ್ಗೆ ದೂರಲಾಗಿದೆ. ಚಿನ್ನದಂಗಡಿ ದರೋಡೆ ನಡೆಸಿದವರನ್ನು 5 ಕಿ.ಮೀ ದೂರ ಸಂಚರಿಸುವಾಗಲೇ  ಅವರನ್ನು ಕೇರಳ ಗಡಿಭಾಗದಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಕೆಎ-೦೨-ಎಎ-೮೨೩೯ ಇನೋವಾ ಕಾರನ್ನು ಬಾಡಿಗೆಗೆ ಪಡೆದುಕೊಳ್ಳುವಾಗ  ಬಾಬಾಬುಡಾನ್ ಗಿರಿ ತೆರಳಲೆಂದು  ಪಡೆದುಕೊಂಡಿದ್ದರು. ಈ ಕಾರಿನಲ್ಲಿ ಜಿಪಿಎಸ್ ಅಳವಡಿಸಿತ್ತು. ಕಾರು ಮಾಲೀಕರು ಸಂಶಯದ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ತನಿಖೆ ಕೈಗೆತ್ತಿಕೊಂಡಿದ್ದ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್, ಎಸ್.ಐ ಪ್ರದೀಪ್ ಮತ್ತು ಪೊಲೀಸರು ಕೇರಳಕ್ಕೆ ತೆರಳಿ ಬಂಧಿಸಿದ್ದಾರೆ. ಈ ವೇಳೆ 14 ಕೆ.ಜಿ ಬೆಳ್ಳಿ, ಬೆಲೆಬಾಳುವ ವಾಚ್ ಹಾಗೂ ಲಕ್ಷಕ್ಕಿಂತಲೂ ಅಧಿಕ ಹಣವಿತ್ತು. ಇದನ್ನು ಮಂಜೇಶ್ವರ ಪೊಲೀಸರಿಗೆ ಒಪ್ಪಿಸದೇ ಇಬ್ಬರೂ ಹಂಚಿಕೊಂಡು ಮಂಗಳೂರು  ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಚಿನ್ನದ ಅಂಗಡಿಯ ಮಾಲೀಕರು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರು ಚಾಲಕ ಹಾಗೂ ಅಂಗಡಿ ಮಾಲೀಕರನ್ನು ವಿಚಾರಣೆ ನಡೆಸಿದರೆ ಸಂಪೂರ್ಣ ಮಾಹಿತಿ ಹೊರಬರುತ್ತದೆ ಎಂದು ದೂರು ನೀಡಿದ್ದರು.  ತೊಕ್ಕೊಟ್ಟುವಿನಲ್ಲಿಯೂ ರಾಜಧಾನಿ ಚಿನ್ನದ ಅಂಗಡಿಯಿದ್ದು, ಅದಕ್ಕಾಗಿ ಮಂಗಳೂರು ನ್ಯಾಯಾಲಯದಲ್ಲಿಯೂ 2021ರ ಜು.26 ರಂದು ಎಫ್ ಐ ಆರ್ 171/2021 ದಾಖಲಾದರೆ, ಕೇರಳದ ಕಾಸರಗೋಡು ನ್ಯಾಯಾಲದಲ್ಲಿ ಆರ್.ಪಿ. ನಂ.457/2021/ಎಫ್ ಸಿಎಂ  ನ್ಯಾಯಾಲಯ ಸೇರಿ ಎರಡು ಪ್ರಕರಣಗಳು ದಾಖಲಾಗಿದೆ. ಪೊಲೀಸ್ ಕಮೀಷನರ್ ಶಶಿಕುಮಾರ್ ನಗರಕ್ಕೆ ಬಂದ ನಂತರ ಭ್ರಷ್ಟಾಚಾರ ಮಿತಿಮೀರಿದೆ. ಅವರ ಬೆಂಬಲವೂ ಇರುವುದರಿಂದ ಮಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ವ್ಯಾಪಾರದಂತೆ ನಡೆಯುತ್ತಿದೆ. ಇದರಿಂದ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ತಲೆ ತಗ್ಗಿಸುವಂತಾಗಿದೆ. ಮೂವರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದರೆ ಅಕ್ರಮ ಸಂಪತ್ತನ್ನು ಪತ್ತೆಹಚ್ಚಬಹುದು ಎಂದು ದೂರಿನಲ್ಲಿ ಉಲ್ಲೇಖಿಸಿಲಾಗಿದೆ.

Disha Amrit: ಗಣರಾಜ್ಯೋತ್ಸವದಲ್ಲಿ ನೌಕಾ ಪರೇಡ್‌ ಮುನ್ನಡೆಸಿದ ಕುಡ್ಲಾದ ಕುವರಿ ದಿಶಾ ಅಮೃತ್‌

 ದೂರುದಾರರ ಜೀವಕ್ಕೆ ಬೆದರಿಕೆಯಿರುವುದರಿಂದ ಗೌಪ್ಯತೆಯನ್ನು ಕಾಪಾಡುವಂತೆ ನಿವೇದಿಸಿಕೊಂಡಿದ್ದರು.  ಅಧಿಕಾರ ದುರುಪಯೋಗ ಮತ್ತು ಲಂಚದ ಆಪಾದನೆ ಮಾಡಿರುವುದರಿಂದ ಕರ್ನಾಟಕ ಲೋಕಾಯುಕ್ತ ಕಲಂ.9 ರಡಿ ಯಲ್ಲಿ ತನಿಖೆ ನಡೆಸುವುದು ಸೂಕ್ತ ಎಂದು ಕರ್ನಾಟಕ ಲೋಕಾಯುಕ್ತ ಬೆಂಗಳೂರು ನೋಟೀಸಿನಲ್ಲಿ ತಿಳಿಸಿದೆ.

click me!