ಫಲವತ್ತಾದ ಅಣಜಿ, ಮೆಳ್ಳೆಕಟ್ಟೆ, ಲಿಂಗಾಪುರ ಗ್ರಾಮಗಳಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ ವಿರೋಧಿಸಿ, ಉದ್ದೇಶಿಸಿದ ಕಾರಿಡಾರ್ ಯೋಜನೆ ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮೂರು ಗ್ರಾಮಗಳ ರೈತರು, ಮಹಿಳೆಯರು ನಗರದಲ್ಲಿ ಗುರುವಾರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದಾವಣಗೆರೆ (ಆ.20): ಫಲವತ್ತಾದ ಅಣಜಿ, ಮೆಳ್ಳೆಕಟ್ಟೆ, ಲಿಂಗಾಪುರ ಗ್ರಾಮಗಳಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ ವಿರೋಧಿಸಿ, ಉದ್ದೇಶಿಸಿದ ಕಾರಿಡಾರ್ ಯೋಜನೆ ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮೂರು ಗ್ರಾಮಗಳ ರೈತರು, ಮಹಿಳೆಯರು ನಗರದಲ್ಲಿ ಗುರುವಾರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದಲ್ಲಿ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ನಿವಾಸ ಶಿವ ಪಾರ್ವತಿಗೆ ಧಾವಿಸಿದ್ದ ರೈತರು, ರೈತ ಕುಟುಂಬಗಳು, ದಾವಣಗೆರೆ ತಾಲೂಕು ಮೆಳ್ಳೆಕಟ್ಟೆ, ಅಣಜಿ ಹಾಗೂ ಲಿಂಗಾಪುರ ಗ್ರಾಮಗಳ 256 ರೈತರಿಗೆ ಕೆಐಎಡಿಬಿ ನೋಟಿಸ್ ನೀಡಿದ್ದು, 1,156 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹೇಳಿದ್ದು, ಉದ್ದೇಶಿತ ಕಾರಿಡಾರ್ ಕೈಬಿಡುವಂತೆ ಸರ್ಕಾರಕ್ಕೆ ಒತ್ತಡ ಹೇರುವಂತೆ ಮನವಿ ಮಾಡಿದರು.
ಖಾಸಗಿ ಫೋಟೋ ಇದೆ ಎಂದು ಬ್ಲ್ಯಾಕ್‌ಮೇಲ್: ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಯುವತಿಯರ ಸೆರೆ
ವಿವಿಧ ಹಂತದ ಹೋರಾಟ: ಇದೇ ವೇಳೆ ಮಾತನಾಡಿದ ರೈತರು, ಯಾವುದೇ ಕಾರಣಕ್ಕೂ ಪೂರ್ವಜರಿಂದ ಬಂದ ಭೂಮಿಯ ಕೈಗಾರಿಕಾ ಕಾರಿಡಾರ್‌ಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ನೋಟಿಸ್ ಬಂದಾಗಿನಿಂದಲೂ ನಾವು ವಿವಿಧ ಹಂತದ ಹೋರಾಟಗಳನ್ನು ನಡೆಸಿಕೊಂಡೇ ಬರುತ್ತಿದ್ದೇವೆ. ಅಣಜಿ ಕೆರೆ ತುಂಬಿದ್ದು, ಅಂತರ್ಜಲವೂ ವೃದ್ಧಿಯಾಗಿದೆ. ಅಲ್ಲದೇ, ಮೂರೂ ಗ್ರಾಮಗಳ ಹೊಲಗಳು ಫಲವತ್ತಾಗಿದ್ದು, ಊಟದ ಜೋಳ, ಅಡಿಕೆ ಇತರೆ ಬೆಳೆ ಬೆಳೆಯುತ್ತಿದ್ದೇವೆ ಎಂದರು.
ಮೂರೂ ಗ್ರಾಮಗಳಲ್ಲಿ 20 ಗುಂಟೆಯಿಂದ 6 ಎಕರೆವರೆಗೆ ಜಮೀನು ಹೊಂದಿರುವ ರೈತರು ಇದ್ದೇವೆ. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಭೂ ಸ್ವಾಧೀನಕ್ಕೆ ಸಂಬಂಧಿಸಿ ನೋಟಿಸ್ ಜಾರಿ ಮಾಡಿದ್ದಾರೆ. ನಾವು ಬೀದಿಗಿಳಿದು ಹೋರಾಡುವ ಜೊತೆಗೆ ಕಾನೂನು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಉದ್ದೇಶಿತ ಕಾರಿಡಾರ್ ಯೋಜನೆಗೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.
ಭೂ ಸ್ವಾಧೀನಕ್ಕೆ ವಿರೋಧ: ಮನವಿ ಆಲಿಸಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ರೈತರು ತೀವ್ರವಾಗಿ ವಿರೋಧಿಸಿದರೂ ಆಡಳಿತಾರೂಢ ಬಿಜೆಪಿಯವರು ಕೈಗಾರಿಕಾ ಕಾರಿಡಾರ್ ಹೆಸರಿನಲ್ಲಿ ಭೂ ಸ್ವಾಧೀನಕ್ಕೆ ಮುಂದಾಗಿದ್ದನ್ನು ಖಂಡಿಸುತ್ತೇನೆ. ವೈಯಕ್ತಿಕವಾಗಿ ಹಾಗೂ ಪಕ್ಷದಿಂದಲೂ ಸಾಗುವಳಿ ಭೂಮಿಯನ್ನು ಕೆಐಎಡಿಬಿ ಭೂ ಸ್ವಾಧೀನವನ್ನು ವಿರೋಧಿಸುತ್ತೇವೆ. ನೀವ್ಯಾರೂ ಭಯಪಡಬೇಕಾಗಿಲ್ಲ. ನಿಮ್ಮ ಪರವಾಗಿ ನಾನು ನಿಂತಿದ್ದು, ಸರ್ಕಾರದ ಮಟ್ಟದಲ್ಲಿ ಕಾರಿಡಾರ್‌ಗೆ ಈ ಭೂಮಿ ಸ್ವಾಧೀನಪಡಿಸದಂತೆ ಒತ್ತಡ ಹೇರುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಕೆ.ಎಸ್.ಬಸವಂತಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ, ಡಿ.ಟಿ.ಹನುಮಂತಪ್ಪ, ಸಿ.ಟಿ.ಕುಮಾರ, ಎಂ.ಎಸ್. ನಾಗರಾಜ ಮೆಳ್ಳೆಕಟ್ಟೆ, ಬಿ.ಎಸ್.ಪ್ರದೀಪ, ಎಂ.ಎಸ್.ಮಲ್ಲಿಕಾರ್ಜುನ, ವೀರಬಸಪ್ಪ, ಬಿ.ಎಂ.ವೆಂಕಟೇಶ ಸೇರಿ ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರ ಗ್ರಾಮಗಳ ರೈತರು, ರೈತ ಕುಟುಂಬದ ಮಹಿಳೆಯರು ಇದ್ದರು. ಇದೇ ವೇಳೆ ರೈತರು ಜಿಲ್ಲಾಡಳಿತ ಭವನಕ್ಕೆ ತೆರಳಿ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿ, ಕೈಗಾರಿಕಾ ಕಾರಿಡಾರ್ ಪ್ರಸ್ತಾವನೆ ಕೈಬಿಡುವಂತೆ, ತಮ್ಮ ಕೃಷಿ ಭೂಮಿಯನ್ನು ಸಾಗುವಳಿಗೆ ಬಿಡುವಂತೆ ಮನವಿ ಅರ್ಪಿಸಿದರು.
ಎಫ್‌ಆರ್‌ಪಿ ಹೆಚ್ಚಳಕ್ಕೆ ರೈತರಿಂದ ಹೆದ್ದಾರಿ ತಡೆ: ಸರ್ಕಾರದ ವಿರುದ್ಧ ಘೋಷಣೆ
21ಕ್ಕೆ ಜಿಲ್ಲೆಗೆ ಸಿಎಂ ಬಂದಾಗ ಮಾತುಕತೆ: ಕೈಗಾರಿಕಾ ಕಾರಿಡಾರ್ ಭೂ ಸ್ವಾಧೀನ ಬಗ್ಗೆ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜೊತೆಗೂ ಮಾತನಾಡುತ್ತೇನೆ. ಅನಿವಾರ್ಯವಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ, ದಾವಣಗೆರೆ ತಾಲೂಕಿನ ಅಣಜಿ, ಮೆಳ್ಳೆಕಟ್ಟೆ, ಲಿಂಗಾಪುರ ಗ್ರಾಮಗಳ ಕೃಷಿ ಭೂಮಿಯನ್ನು ಕೈಗಾರಿಕಾ ಕಾರಿಡಾರ್ ಯೋಜನೆ ವ್ಯಾಪ್ತಿಯಿಂದ ಕೈಬಿಡಲು ಒತ್ತಾಯಿಸುತ್ತೇನೆ. ದಾವಣಗೆರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಆಗಮಿಸಲಿದ್ದಾರೆ. ಸಿಎಂ ಬಂದಾಗ ನಿಮ್ಮನ್ನೂ ಭೇಟಿ ಮಾಡಿಸಿ, ಮಾತುಕತೆ ನಡೆಸುತ್ತೇನೆ. ನಿಮ್ಮ ಜೊತೆಗೆ ನಾವಿದ್ದೇವೆ. ಯಾವುದೇ ಭಯ ಬೇಡ ಎಂದು ಶಾಮನೂರು ಶಿವಶಂಕರಪ್ಪ ಅಭಯ ನೀಡಿದರು.