ದೇಶ ಸ್ವಾತಂತ್ರ್ಯಗೊಂಡು 75 ವರ್ಷ ಕಳೆದಿದ್ರೂ, ಸಮಾಜದ ಬಹುದೊಡ್ಡ ಪಿಡುಗು ಆಗಿರುವ ಬಹಿಷ್ಕಾರ ಪದ್ಧತಿ ಇನ್ನು ಕೂಡಾ ಜೀವಂತವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕ್ಷುಲ್ಲಕ ಕಾರಣಕ್ಕೆ ಗೌಡ ಸಮುದಾಯದಿಂದ ಗೌಡ ಕುಟುಂಬವೊಂದನ್ನು ಬಹಿಷ್ಕಾರ ಮಾಡಿ ಅಮಾನವೀಯತೆ ಮೆರೆದ ಆರೋಪ ಎದುರಾಗಿದೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಆ.20): ದೇಶ ಸ್ವಾತಂತ್ರ್ಯಗೊಂಡು 75 ವರ್ಷ ಕಳೆದಿದ್ರೂ, ಸಮಾಜದ ಬಹುದೊಡ್ಡ ಪಿಡುಗು ಆಗಿರುವ ಬಹಿಷ್ಕಾರ ಪದ್ಧತಿ ಇನ್ನು ಕೂಡಾ ಜೀವಂತವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕ್ಷುಲ್ಲಕ ಕಾರಣಕ್ಕೆ ಗೌಡ ಸಮುದಾಯದಿಂದ ಗೌಡ ಕುಟುಂಬವೊಂದನ್ನು ಬಹಿಷ್ಕಾರ ಮಾಡಿ ಅಮಾನವೀಯತೆ ಮೆರೆದ ಆರೋಪ ಎದುರಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. ಹೌದು! ಸಮಾಜದ ಬಹುದೊಡ್ಡ ಪಿಡುಗು ಆಗಿರುವ ಬಹಿಷ್ಕಾರ ಪದ್ಧತಿ ಇನ್ನು ಕೂಡಾ ಜೀವಂತವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಬಹಿಷ್ಕಾರಕ್ಕೆ ಒಳಗಾದ ಕುಟುಂಬವೀಗ ನಮಗೆ ಯಾರ ಸಹವಾಸವೂ ಬೇಡ.
ನಮ್ಮನ್ನು ನಮ್ಮ ಪಾಡಿಗೆ ಬದಕಲು ಬಿಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಸಂಜಯ್ ಬಂಟಾ ಗೌಡ ಎನ್ನುವ ಹಾಲಕ್ಕಿ ಸಮುದಾಯಕ್ಕೆ ಸೇರಿದ ಯುವಕನ ಮದುವೆಯ ಶುಭ ಕಾರ್ಯ 2012ರಲ್ಲಿ ನಡೆದಿತ್ತು. ಈ ಸಂದರ್ಭ ಊರಗೌಡನಾಗಿದ್ದ ಆನಂದುಗೌಡನಿಗೆ ಮದುವೆ ಆಮಂತ್ರವನ್ನು ಈ ಕುಟುಂಬ ನೀಡಿರಲಿಲ್ಲ. ಆನಂದು ಗೌಡ ಮತ್ತು ಈ ಕುಟುಂಬಕ್ಕೆ ದಾಯಾದಿ ಜಗಳವಿದ್ದ ಕಾರಣ ಆನಂದು ಗೌಡರ ಮನೆಯ ಶುಭ ಕಾರ್ಯಗಳಿಗೆ ಬಂಟಾ ಗೌಡ ಕುಟುಂಬವನ್ನು ಆಹ್ವಾನಿಸಿರಲಿಲ್ಲ. ಇದಕ್ಕೆ ಬಂಟ ಗೌಡ ಕುಟುಂಬ ಕೂಡಾ ಊರ ಗೌಡನಾಗಿರುವ ಆನಂದು ಗೌಡ ಕುಟುಂಬಕ್ಕೆ ಆಮಂತ್ರಣದ ವೀಳ್ಯ ನೀಡಿರಲಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳಿಗೆ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ: ಪ್ರವಾಸಿಗರಿಗೆ ಸಮಸ್ಯೆ
ಇದರಿಂದ ದ್ವೇಷ ಸಾಧಿಸುವ ನಿಟ್ಟಿನಲ್ಲಿ ಆನಂದುಗೌಡ ಎಂಬಾತ ಹಾಲಕ್ಕಿ ಸಮುದಾಯದ ಜನರನ್ನು ಒಟ್ಟು ಸೇರಿಸಿ ಒಂದು ಕೂಟ ಮಾಡಿ, ನಾನು ಊರ ಗೌಡನಾಗಿದ್ದು, ನನಗೆ ಮದುವೆಯ ಆಮಂತ್ರಣ ನೀಡಿಲ್ಲ. ಈ ಕಾರಣದಿಂದ ಬಂಟಾ ಗೌಡ ಅವರ ಕುಟುಂಬವನ್ನು ಬಹಿಷ್ಕಾರ ಮಾಡುವಂತೆ ಆದೇಶ ಮಾಡುತ್ತೇನೆ ಎಂದು ಕೂಟದಲ್ಲಿ ಠರಾವು ಪಾಸ್ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಠರಾವಿನಂತೆ ಹಾಲಕ್ಕಿ ಸಮುದಾಯದ ಯಾವುದೇ ವ್ಯಕ್ತಿಯೂ ಈ ಕುಟುಂಬದೊಂದಿಗೆ ಮಾತನಾಡುವಂತಿಲ್ಲ, ಕಿರಾಣಿ ಅಂಗಡಿಗಳಲ್ಲಿ ವಸ್ತುಗಳನ್ನು ನೀಡುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ದಂಡ ವಿಧಿಸಲಾಗುತ್ತೆ.
ಅಲ್ಲದೇ, ಅವರಿಗೂ ಸಮುದಾಯದಿಂದ ಬಹಿಷ್ಕಾರ ಮಾಡಲಾಗುತ್ತೆ ಎಂದು ಎಚ್ಚರಿಸಿರುವುದಾಗಿ ಆರೋಪಿಸಲಾಗಿದೆ. ಇದನ್ನು ಪಾಲಿಸಿಕೊಂಡು ಬರುತ್ತಿರುವ ಹಾಲಕ್ಕಿ ಸಮುದಾಯದ ಇಲ್ಲಿಯವರೆಗೆ ಬಹಿಷ್ಕಾರಕ್ಕೆ ಒಳಪಟ್ಟ ಈ ಕುಟುಂಬದ ಜತೆ ಯಾವುದೇ ಸಂಪರ್ಕ, ವ್ಯವಹಾರ ನಡೆಸುತ್ತಿಲ್ಲ ಎಂದೆನ್ನಲಾಗಿದೆ. ಅಂದಹಾಗೆ, ಆನಂದುಗೌಡ ಕುಟುಂಬ ಮತ್ತು ಬಂಟಾಗೌಡ ಕುಟುಂಬಕ್ಕೆ ಈ ಹಿಂದೆ ಆಸ್ತಿ ವಿಚಾರಕ್ಕೆ ಗಲಾಟೆಯಾಗಿತ್ತು. ಇದರಿಂದ ಎರಡು ಕುಟುಂಬದ ನಡುವೆ ಮಾತಿಗಿಂತ ದ್ವೇಷವೇ ಹೆಚ್ಚಿತ್ತು. ಊರಗೌಡ ಮತ್ತು ಹಾರವಡ ಗ್ರಾಮದ ಹಾಲಕ್ಕಿ ಸಮುದಾಯದ ಮುಖಂಡ ಆನಂದುಗೌಡನಿಗೆ ಇದೆಲ್ಲ ಸಹಿಸಲಾಗುತ್ತಿರಲಿಲ್ಲ ಎನ್ನಲಾಗಿದೆ.
ಈ ಕಾರಣದಿಂದ ಹೇಗಾದರೂ ಮಾಡಿ ಬಂಟಾಗೌಡ ಕುಟುಂಬವನ್ನು ಮೂಲೆಗುಂಪು ಮಾಡಬೇಕು ಎನ್ನುವ ಉದ್ದೇಶದಿಂದ ಸಮಯಕ್ಕೆ ಕಾಯುತ್ತಿದ್ದ ಆನಂದು ಗೌಡನಿಗೆ, ಬಂಟಾಗೌಡ ಕುಟುಂಬ ಮದುವೆ ಆಮಂತ್ರಣ ನೀಡದಿರುವುದು ಅವಕಾಶವಾಗಿ ದೊರಕಿತ್ತು. ಇದನ್ನು ನೆಪವಾಗಿಟ್ಟುಕೊಂಡು, ನಾನು ಊರಗೌಡನಾಗಿದ್ದು, ನಮ್ಮ ಮನೆಯಿಂದಲೇ ಹಾಲಕ್ಕಿ ದೇವರ ಪೂಜೆ ಆಗಬೇಕು. ಆದರೆ, ಬಂಟಾ ಗೌಡ ಕುಟುಂಬ ನಮ್ಮ ಸಂಪ್ರದಾಯಕ್ಕೆ ದ್ರೋಹಾ ಮಾಡಿದ್ದಾರೆ ಎಂದು ಸಭೆ ಸೇರಿಸಿ ಸಮುದಾಯದಿಂದ ಬಂಟಾಗೌಡ ಕುಟುಂಬವನ್ನ ಬಹಿಷ್ಕಾರ ಮಾಡಿದ್ದಾನೆ ಎಂದೆನ್ನಲಾಗಿದೆ.
ಊರಿನಲ್ಲಂತೂ ಯಾರು ಈ ಕುಟುಂಬಕ್ಕೆ ನೀರು ಕೊಡಬಾರದು, ಮಾತನಾಡಿಸಬಾರದು, ಅವರೊಂದಿಗೆ ಯಾವ ರೀತಿಯಲ್ಲಿ ಸಂಪರ್ಕ ಇರಿಸಬಾರದು, ಕಿರಾಣಿ ಅಂಗಡಿಗಳಲ್ಲಿ ವಸ್ತುಗಳನ್ನು ನೀಡಬಾರದು ಎಂಬ ನಿಯಮಗಳನ್ನು ಮಾಡಿ ಬಹಿಷ್ಕಾರ ಮಾಡಿದ್ದಾನೆಂದು ಆರೋಪಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದ್ರೆ, ಒಂದು ಸಾವಿರ ರೂ. ದಂಡ ಮತ್ತು ಆ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗುತ್ತೆ ಎಂದು ಎಚ್ಚರಿಕೆ ನೀಡುತ್ತಾನೆ ಎಂದೆನ್ನಲಾಗಿದೆ. ಈ ಬಹಿಷ್ಕಾರದಿಂದ ನೊಂದ ಬಂಟಾ ಗೌಡ ಘಟನೆ ನಡೆದ ನಾಲ್ಕು ವರ್ಷಗಳಲ್ಲಿ ಸಾವನ್ನಪ್ಪಿದ್ದಾನೆ.
Uttara Kannada: ವೃಕ್ಷಮಾತೆಗೆ ಕೊಟ್ಟ ಮಾತು ಉಳಿಸಿದ ಶಾಸಕಿ ರೂಪಾಲಿ ನಾಯ್ಕ್
ಇದೀಗ ಬಂಟಾ ಗೌಡ ಕುಟುಂಬದ ಸದಸ್ಯರಿಗೂ ಬಹಿಷ್ಕಾರದ ಅನಿಷ್ಠ ಪದ್ಧತಿಯ ಬಿಸಿ ತಟ್ಟಿದ್ದು, ಇದರಿಂದ ವಿಜಯಗೌಡ ಮತ್ತು ಅವರ ತಂಗಿಯ ಮದುವೆಗೂ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಈ ಕಾರಣದಿಂದ ನಮಗೆ ನ್ಯಾಯ ಒದಗಿಸಿ ಕೊಡಿ ಎಂದು ಈ ಕುಟುಂಬ ಅಳಲು ತೋಡಿಕೊಳ್ಳುತ್ತಿದೆ. ಒಟ್ಟಿನಲ್ಲಿ ದೇಶ ಸ್ವತಂತ್ರ್ಯಗೊಂಡು ಇಷ್ಟು ವರ್ಷವಾದ್ರೂ ಬಹಿಷ್ಕಾರದಂತಹ ಅನಿಷ್ಠ ಪದ್ಧತಿ ಇನ್ನೂ ಮುಂದುವರಿದಿರುವುದು ದುರಾದೃಷ್ಠವೇ ಸರಿ. ಇನ್ನಾದರೂ ಜನರು ಇಂತಹ ನೀಚ ಪದ್ಧತಿಯಿಂದ ಹಿಂದೆ ಸರಿಯಬೇಕಲ್ಲದೇ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.