ಕೃಷಿ ಚಟುವಟಿಕೆಗಳಿಗೂ ಅಡ್ಡಗಾಲಿಟ್ಟ ಕೋವಿಡ್ -19 ಸೋಂಕು| ಗದಗ ಜಿಲ್ಲೆಯ ಮಲ್ಲಸಮುದ್ರ, ಹುಲಕೋಟಿ, ಹಿರೇಹಾಳ, ರಾಜೂರು, ಕಣವಿ, ಬೇವಿನಕಟ್ಟಿ, ಕುರ್ತಕೋಟಿ ಸೇರಿದಂತೆ 10 ಕ್ಕೂ ಅಧಿಕ ಗ್ರಾಮಗಳಿಗೆ ಸೋಂಕು ವ್ಯಾಪಿಸಿಕೊಂಡಿದ್ದು, ತೀವ್ರ ಆತಂಕ ಮೂಡಿದೆ|
ಗದಗ(ಜು.22): ಮಹಾಮಾರಿ ಕೊರೋನಾ ಸೋಂಕಿನಾರ್ಭಟ ಜಿಲ್ಲೆಯ ಮೂಲೆ ಮೂಲೆಗೂ ತಲುಪಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಗ್ರಾಮೀಣ ಭಾಗಕ್ಕೆ ಸೋಂಕು ವ್ಯಾಪಿಸಬಾರದು ಎಂದು ಕೈಗೊಂಡ ಪ್ರಯತ್ನಗಳೆಲ್ಲಾ ಮೇಲ್ನೋಟಕ್ಕೆ ವಿಫಲವಾಗಿ ಗ್ರಾಮೀಣ ಭಾಗಕ್ಕೆ ವೈದ್ಯಕೀಯ ವ್ಯವಸ್ಥೆ, ರಕ್ಷಣಾ ವ್ಯವಸ್ಥೆಗೆ ಅಡಚಣೆಯಾಗುತ್ತಿದೆ.
ಅದಲ್ಲದೇ ಕೆಲ ಸಂದರ್ಭದಲ್ಲಿ ಗ್ರಾಮೀಣ ಜನರು ಸೋಂಕಿನ ಬಗ್ಗೆ ಸಂಪೂರ್ಣವಾಗಿ ತಿಳಿಯದೇ, ಅತಿಯಾದ ಭೀತಿಗೊಳಗಾಗುವ ಸನ್ನಿವೇಶಗಳು ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಸೋಂಕು ಗ್ರಾಮೀಣ ಭಾಗಕ್ಕೆ ತಲುಪದಿರಲು ಹರಸಾಹಸ ನಡೆದಿದ್ದು, ಆದರೂ ಸೋಂಕು ಜಿಲ್ಲೆಯ ಅನೇಕ ಗ್ರಾಮಗಳಿಗೆ ವ್ಯಾಪಿಸಿರುವುದು ಆತಂಕಕ್ಕೆ ಕಾರಣವಾಗಿದೆ.
undefined
ಮೊದಲ ಬಾರಿ ಜಿಲ್ಲೆಯ ಲಕ್ಕುಂಡಿ ಗ್ರಾಮಕ್ಕೆ ಕಾಲಿಟ್ಟ ಮಹಾಮಾರಿಗೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿತ್ತು. ಪರಿಣಾಮ ಕೆಲ ದಿನಗಳ ಕಾಲ ಗ್ರಾಮವೇ ಸಂಪೂರ್ಣ ಸ್ತಬ್ಧವಾಗಿತ್ತು. ಈ ವೇಳೆ ತಮ್ಮ ಕೆಲಸ ಕಾರ್ಯಗಳನ್ನು ನಡೆಸಲಾಗದೇ ಜನರು ಅಪಾರ ಸಂಕಷ್ಟಅನುಭವಿಸಿದ್ದರು. ನಂತರದ ದಿನಗಳಲ್ಲಿ ಧಾರವಾಡ ಜಿಲ್ಲೆಯ ಓರ್ವ ಸೋಂಕಿತನ ಸಂಪರ್ಕದಲ್ಲಿದ್ದ ಗದಗ ತಾಲೂಕಿನ ಹರ್ತಿ ಗ್ರಾಮದ ಮೂವರಿಗೆ ಸೋಂಕು ದೃಡವಾಗಿತ್ತು. ಓರ್ವ ವೈದ್ಯನಿಗೂ ಸೋಂಕು ತಗುಲಿ, ಈತ ಚಿಕಿತ್ಸೆ ನೀಡಿದ್ದ ಎನ್ನಲಾದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಸಮೀಪದ ಕೋಟುಮಚಗಿ ಗ್ರಾಮದಲ್ಲೂ ಸಹ ಮೊಟ್ಟಮೊದಲ ಬಾರಿಗೆ ಓರ್ವ ವೃದ್ಧನಿಗೆ ಸೋಂಕು ದೃಢವಾಗಿತ್ತು.
ಶಿರಹಟ್ಟಿ: 19 ಗಂಟೆ ಬಳಿಕ ಬಂದ ಆ್ಯಂಬುಲನ್ಸ್, ನರಳಾಡಿದ ಕೊರೋನಾ ಸೋಂಕಿತರು..!
ಇದಾದ ಬಳಿಕ ದಿನ ಕಳೆದಂತೆ, ಲಾಕ್‌ಡೌನ್ ಸಡಿಲವಾದಂತೆಲ್ಲಾ ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ಜನರು ತೆರಳಲಾರಂಭಿಸಿದ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗುತ್ತಲೇ ಸಾಗಿದೆ. ಜಿಲ್ಲೆಯ ಮಲ್ಲಸಮುದ್ರ, ಹುಲಕೋಟಿ, ಹಿರೇಹಾಳ, ರಾಜೂರು, ಕಣವಿ, ಬೇವಿನಕಟ್ಟಿ, ಕುರ್ತಕೋಟಿ ಸೇರಿದಂತೆ 10 ಕ್ಕೂ ಅಧಿಕ ಗ್ರಾಮಗಳಿಗೆ ಸೋಂಕು ವ್ಯಾಪಿಸಿಕೊಂಡಿದ್ದು, ತೀವ್ರ ಆತಂಕ ಮೂಡಿದೆ.
ಕೃಷಿಗೆ ಅಡ್ಡಗಾಲು?:
ಮಹಾಮಾರಿ ಕೊರೋನಾ ಸೋಂಕು ಕೃಷಿಗೂ ಸಹ ಅಡ್ಡಗಾಲು ಇರಿಸಿದೆ. ಒಂದು ವೇಳೆ ಓರ್ವನಿಗೆ ಸೋಂಕು ತಗುಲಿದರೆ, ಈಡಿ ಗ್ರಾಮವೇ ಆತಂಕಕ್ಕೀಡಾಗುತ್ತದೆ. ಇದಲ್ಲದೇ ಸೋಂಕಿತರ ಮನೆಯ ವ್ಯಾಪ್ತಿಯಲ್ಲಿ 100 ಮೀಟರ್ ಕಂಟೈನ್ಮೆಂಟ್ ಪ್ರದೇಶ ಘೋಷಣೆಯಾಗುತ್ತದೆ. ಈ ಹಿನ್ನಲೆಯಲ್ಲಿ ಈ ಪ್ರದೇಶದಲ್ಲಿರುವ ಜನರು ಪ್ರತಿಬಂಧಕ ಆದೇಶ ತೆರವು ಆಗುವವರೆಗೂ ಕೆಲಸ ಕಾರ್ಯಗಳಿಗೆ ತೆರಳುವ ಹಾಗೆ ಇರಲ್ಲ. ಇದು ತೊಂದರೆಗೀಡು ಮಾಡುತ್ತದೆ. ಇನ್ನು ಗ್ರಾಮೀಣ ಭಾಗದಲ್ಲಿ ಬಹುತೇಕರು ಕೃಷಿಯನ್ನೇ ನಂಬಿದ ಹಿನ್ನೆಲೆಯಲ್ಲಿ ಸೋಂಕಿನಿಂದ ಭೀತಿಗೊಳಗಾಗಿ ಕೃಷಿ ಕೆಲಸಗಳಿಗೆ ತೊಂದರೆಯಾಗುತ್ತದೆ.