ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೂ ಲಾಕ್‌ಡೌನ್ ವಾಪಸ್| ಲಾಕ್‌ಡೌನ್ ಜಾರಿಗೂ ಮುನ್ನವೇ ರದ್ದು, ಷರತ್ತು ಮುಂದುವರಿಯಲಿವೆ| ಜನರು ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ನಿಯಂತ್ರಕ್ಕಾಗಿ ಸಹಕರಿಸಬೇಕಾಗಿದೆ|
ಕೊಪ್ಪಳ(ಜು.22): ಜಿಲ್ಲೆಯ ಗಂಗಾವತಿ ನಗರ ಹಾಗೂ 9 ಹಳ್ಳಿಗಳಲ್ಲಿ ಮಂಗಳವಾರ ರಾತ್ರಿಯಿಂದ ಜಾರಿಯಾಗಬೇಕಾಗಿದ್ದ ಲಾಕ್‌ಡೌನ್ ಜಾರಿಗೂ ಮುನ್ನವೇ ರದ್ದು ಮಾಡಲಾಗಿದೆ.
ಕೋವಿಡ್- 19 ಕುರಿತು ಪ್ರಗತಿ ಪರಿಶೀಲನೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರು ಹಾಟ್‌ಸ್ಪಾಟ್‌ಗಳಲ್ಲಿ ಲಾಕ್‌ಡೌನ್ ಜಾರಿಗೆ ಆದೇಶ ಮಾಡಿದ್ದರು. ಆದರೆ, ಈಗ ಸಿ.ಎಂ. ಯಡಿಯೂರಪ್ಪ ಅವರು ರಾಜ್ಯಾದ್ಯಂತ ಎಲ್ಲಿಯೂ ಲಾಕ್‌ಡೌನ್ ಇಲ್ಲ ಮತ್ತು ಮುಂದೆಯೂ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೂ ಜಾರಿ ಮಾಡಲಾಗಿದ್ದ ನಿಗದಿತ ಪ್ರದೇಶಗಳ ಲಾಕ್‌ಡೌನ್ ರದ್ದು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್ ಅವರು ತಿಳಿಸಿದ್ದಾರೆ. ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಆದೇಶವನ್ನು ಹಿಂದೆ ಪಡೆಯಲಾಗಿದ್ದು, ಇನ್ನುಳಿದಂತೆ ಷರತ್ತುಗಳು ಇದ್ದೇ ಇರುತ್ತವೆ ಎಂದು ತಿಳಿಸಿದ್ದಾರೆ.
undefined
ಲಾಕ್‌ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಗಂಗಾವತಿ ಮತ್ತು 9 ಹಳ್ಳಿಗಳಲ್ಲಿ ಅನೇಕ ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ, ಈಗ ಲಾಕ್‌ಡೌನ್ ರದಾಗಿದ್ದರೂ ಉಳಿದಂತೆ ಷರತ್ತುಗಳು ಇದ್ದೇ ಇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಗುಂಪು ಸೇರದಂತೆ ಮಾಡಿರುವ ಆದೇಶವೂ ಜಾರಿ ಇರುತ್ತದೆ. ಇದಲ್ಲದೆ ಕೋವಿಡ್ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ನೀಡಿದ್ದು, ಅದರಂತೆ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ. ಲಾಕ್‌ಡೌನ್ ಇಲ್ಲ ಎಂದಾಕ್ಷಣ ಮನಬಂದಂತೆ ಓಡಾಡುವ ಹಾಗಿಲ್ಲ. ಕೊರೋನಾ ಹಾಟ್‌ಸ್ಪಾಟ್ ಸ್ಥಳಗಳಲ್ಲಿ ಷರತ್ತುಗಳು ಮುಂದುವರೆಯುತ್ತವೆ ಎಂದು ತಿಳಿಸಿದ್ದಾರೆ.
ಗಂಗಾವತಿ: ಆರಾಧನೆಯಲ್ಲಿ ಭಾಗವಹಿಸಿದ್ದ ಭಕ್ತನಿಗೆ ವಕ್ಕರಿಸಿದ ಕೊರೋನಾ
ಜಾರಿಯಾಗಲೇ ಇಲ್ಲ
ಲಾಕ್‌ಡೌನ್ ಘೋಷಣೆ ಮಾಡಿ, ಮಂಗಳವಾರ ರಾತ್ರಿ 8 ಗಂಟೆಯಿಂದ ಪ್ರಾರಂಭವಾಗಬೇಕಾಗಿತ್ತು. ಆದರೆ, ಸಿ.ಎಂ. ಯಡಿಯೂರಪ್ಪ ಅವರು ಮಂಗಳವಾರ ಮಧ್ಯಾಹ್ನವೇ ರಾಜ್ಯಾದ್ಯಂತ ಲಾಕ್‌ಡೌನ್ ಇಲ್ಲ ಎಂದಿದ್ದರಿಂದ ಕೊಪ್ಪಳ ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಾಗುವ ಮುನ್ನವೇ ರದ್ದಾಗಿದೆ.
ಲಾಕ್‌ಡೌನ್ ಜಾರಿಯಾಗುವುದಿಲ್ಲವಾದರೂ ನಿಯಂತ್ರಣಕ್ಕಾಗಿ ನೀಡಿರುವ ಷರತ್ತುಗಳು ಇದ್ದೇ ಇರುತ್ತವೆ. ಜನರು ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ನಿಯಂತ್ರಕ್ಕಾಗಿ ಸಹಕರಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್ ಅವರು ತಿಳಿಸಿದ್ದಾರೆ.