8,000 ಕುಟುಂಬದ 40,000 ಮಂದಿಗೆ ಕೋವಿಡ್ ತಪಾಸಣೆ: ಆಯುಕ್ತ ಬಿ.ಎಚ್.ಅನಿಲ್‌ಕುಮಾರ್| ಮೊದಲ ದಿನ 11 ಮಂದಿಯ ಗಂಟಲ ದ್ರವದ ಮಾದರಿ ಪರೀಕ್ಷೆಗೆ ರವಾನೆ| ಐವರು ತಬ್ಲೀಘಿಗಳಿಂದ ಪಾದರಾಯನಪುರದಲ್ಲಿ ಆರಂಭವಾದ ಕೊರೋನಾ ಮಹಾಮಾರಿ ಸೋಂಕು, ಇದೀಗ 54 ಮಂದಿಗೆ ಹಬ್ಬಿದೆ|
ಬೆಂಗಳೂರು(ಮೇ.15): ನಗರದ ಕೊರೋನಾ ಹಾಟ್‌ಸ್ಪಾಟ್ ಆಗಿರುವ ಪಾದರಾಯನಪುರದ ಕಂಟೈನ್ಮೆಂಟ್ ಪ್ರದೇಶದ ಪ್ರತಿ ಕುಟುಂಬದ ಸೋಂಕು ಪರೀಕ್ಷೆ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಗಿದೆ.
ಮೊದಲ ದಿನ 11 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಐವರು ತಬ್ಲೀಘಿಗಳಿಂದ ಪಾದರಾಯನಪುರದಲ್ಲಿ ಆರಂಭವಾದ ಕೊರೋನಾ ಮಹಾಮಾರಿ ಸೋಂಕು, ಇದೀಗ 54 ಮಂದಿಗೆ ಹಬ್ಬಿದೆ.
ಸೀಲ್‌ಡೌನ್ ಮಾಡಿದರೂ ಜನ ಅಸಹಕಾರದಿಂದ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಇಡೀ ಪ್ರದೇಶದ ಜನರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸುವುದಕ್ಕೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಮುಂದಾಗಿದೆ. ಗುರುವಾರ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಹಾಗೂ ಶಾಸಕ ಜಮೀರ್ ಅಹ್ಮಮದ್‌ಖಾನ್ ಆರೋಗ್ಯ ತಪಾಸಣೆ ಹಾಗೂ ಗಂಟಲ ದ್ರವದ ಮಾದರಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಕೊರೋನಾ ಟೆಸ್ಟ್ ಮಾಡ್ಬೇಡಿ: ಅಡ್ಡಿಪಡಿಸಿದ ಬಿಜೆಪಿ ನಾಯಕಿ!
ಆರೋಗ್ಯ ಪರೀಕ್ಷೆಗೆ ಚಾಲನೆ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ಪಾದರಾಯನಪುರದ 8 ಸಾವಿರ ಕುಟುಂಬದ 40 ಸಾವಿರ ಮಂದಿಯನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು. ಮೊಬೈಲ್ ಕ್ಲಿನಿಕ್ ಅನ್ನು ಜಗಜೀವನ್‌ರಾವ್ ಪೊಲೀಸ್ ಠಾಣೆಯ ಬಳಿ ನಿಲ್ಲಿಸಲಾಗಿದ್ದು, ಕಂಟೈನ್ಮೆಂಟ್ ಪ್ರದೇಶವಾದ ಅರಾಫತ್ ನಗರದಿಂದ ಬರುವವರನ್ನು ತಪಾಸಣೆ ಮಾಡಲಾಗುತ್ತಿದೆ. ಶುಕ್ರವಾರ ಎರಡು ಕಿಯೋಸ್ಕ್ ಸ್ಥಾಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪರೀಕ್ಷೆ ಮಾಡಲಾಗುವುದು. ಗೌರಿಪಾಳ್ಯದ ರೆಫರಲ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ಪರೀಕ್ಷೆ ಮಾಡುವ ಸಂಬಂಧ ಸಿದ್ಧತೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಆದ್ಯತೆ ಮೇಲೆ ಪರೀಕ್ಷೆ:
ಮೊದಲು ಅತಿ ಸೂಕ್ಷ್ಮ ಆರೋಗ್ಯ ಸ್ಥಿತಿಯಲ್ಲಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, ಆರೋಗ್ಯ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರನ್ನು ಆದ್ಯತೆಯ ಮೇಲೆ ಪರೀಕ್ಷೆ ನಡೆಸಲಾಗುತ್ತಿದೆ. ಈ ರೀತಿ ಹಂತ ಹಂತವಾಗಿ ಎಲ್ಲರ ಆರೋಗ್ಯ ಪರೀಕ್ಷೆ ನಡೆಸಲಾಗುವುದು ಎಂದು ವಿವರಿಸಿದರು.
ಗ್ರೀನ್ ಝೋನ್ ವಾರ್ಡ್‌ಗಳಲ್ಲಿ ಕ್ವಾರಂಟೈನ್‌ಗೆ ಭಾರೀ ವಿರೋಧ
ನಗರದ ಹಸಿರು ವಲಯದ ವಾರ್ಡ್‌ಗಳಲ್ಲಿರುವ ಸಮುದಾಯ ಭವನ, ಹಾಸ್ಟಲ್ ಮತ್ತು ಪೇಯಿಂಗ್ ಗೆಸ್ಟ್ (ಪಿ.ಜಿ)ಗಳನ್ನು ಕ್ವಾರಂಟೈನ್ ಸೆಂಟರ್ ಆಗಿ ಪರಿವರ್ತನೆ ಮಾಡುತ್ತಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ದೆಹಲಿ, ಅಜ್ಮೀರ್ ಸೇರಿದಂತೆ ದೇಶದ ವಿವಿಧ ಭಾಗದಿಂದ ಬೆಂಗಳೂರಿಗೆ ಆಗಮಿಸುತ್ತಿರುವವರನ್ನು 14 ದಿನ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮತ್ತು ಬಿಬಿಎಂಪಿ ನಗರದಲ್ಲಿರುವ ಸಮುದಾಯ ಭವನ, ಸರ್ಕಾರಿ ಮತ್ತು ಖಾಸಗಿ ಹಾಸ್ಟಲ್, ಪಿ.ಜಿ.ಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಆದರೆ, ಈವರೆಗೆ ಕೊರೋನಾ ಸೋಂಕು ಪ್ರಕರಣ ಕಾಣಿಸಿಕೊಳ್ಳದ ಪ್ರದೇಶದ ಜನ, ತಮ್ಮ ವಾರ್ಡ್ ಅಥವಾ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ ಮಾಡಬೇಡಿ. ನಾವು ಸುರಕ್ಷಿತವಾಗಿದ್ದೇವೆ. ಶಂಕಿತರನ್ನು ಕರೆದುಕೊಂಡು ಬಂದು ನಾವು ವಾಸಿಸುತ್ತಿರುವ ಪ್ರದೇಶದಲ್ಲಿ ಕ್ವಾರಂಟೈನ್ ಮಾಡಿದರೆ ಇಲ್ಲಿನ ಜನರಿಗೆ ತೊಂದರೆ ಉಂಟಾಗಲಿದೆ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಮಕೃಷ್ಣ ಬಡಾವಣೆಯಲ್ಲಿ ಪ್ರತಿಭಟನೆ:
ಗುರುವಾರ ನಾಗರಭಾವಿಯ ರಾಮಕೃಷ್ಣ ಬಡಾವಣೆಯಲ್ಲಿರುವ ಸಾಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯವನ್ನು ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತನೆ ಮಾಡುವುದಾಗಿ ವಿಷಯ ತಿಳಿದು, ಬಡಾವಣೆಯ ಜನ ವಿದ್ಯಾರ್ಥಿ ನಿಲಯದ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.