ದೊಡ್ಡ ಕನಸಿನ Stay @Shivamogga ಅಭಿಯಾನ ಆರಂಭ

By Kannadaprabha NewsFirst Published May 14, 2020, 6:43 PM IST
Highlights

ಕೊರೋನಾ ವೈರಸ್‌ ಬಹುದೊಡ್ಡ ಸಂಕಷ್ಟ ತಂದೊಡ್ಡಿದೆ. ಬದುಕು ಕಟ್ಟಿಕೊಳ್ಳಲು ಬೇರೆ ಬೇರೆ ತಾಣಗಳಿಗೆ ಹೋಗಿದ್ದ ಉದ್ಯಮ ಪ್ರತಿಭೆಗಳು ಈಗ ಬಹುದೊಡ್ಡ ಸಂಖ್ಯೆಯಲ್ಲಿ ವಾಪಾಸ್ಸಾಗಿದ್ದಾರೆ. ಸುಮಾರು 60 ಸಾವಿರ ಯುವ ಪ್ರತಿಭೆಗಳು ತಮ್ಮ ಹಳ್ಳಿಗಳಿಗೆ ಮರಳಿವೆ. ಇವರನ್ನು ಇಲ್ಲಿಯೇ ಉಳಿಸಿಕೊಳ್ಳುವ ಬಹುದೊಡ್ಡ ಯೋಜನೆಯೊಂದನ್ನು ''ಸ್ಟೇ ಅಟ್‌ ಶಿವಮೊಗ್ಗ'' ರೂಪಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

ಶಿವಮೊಗ್ಗ(ಮೇ.14): ಕೊರೋನಾ ವೈರಸ್‌ ಸೃಷ್ಟಿಸಿರುವ ಆತಂಕದ ಹಿನ್ನೆಲೆ ವಿವಿಧ ರಾಜ್ಯ ಹಾಗೂ ವಿದೇಶಗಳಿಂದ ಜಿಲ್ಲೆಗೆ ಮರಳಿರುವವರು ಇಲ್ಲಿಯೇ ಉಳಿಯಲು ಪ್ರೇರಣೆ ನೀಡುವ ಹೊಸ ಉದ್ಯೋಗ ಯೋಜನೆ ‘ಸ್ಟೇ ಅಟ್‌ ಶಿವಮೊಗ್ಗ’ ಎಂಬ ಅಭಿಯಾನ ಆರಂಭಿಸಲಾಗಿದೆ.

ನಮ್ಮ ಕನಸಿನ ಶಿವಮೊಗ್ಗ, ಮಥುರಾ ರೆಸೆಡೆನ್ಸಿ, ಭಾರತ್‌ ಟಿವಿ, ಸ್ವೇಧ, ಛೇಂಬರ್‌ ಆಫ್‌ ಕಾಮರ್ಸ್‌, ಮಾಚೇನಹಳ್ಳಿ ಕೈಗಾರಿಕಾ ಸಂಘ, ಜಿಲ್ಲಾ ತರಬೇತಿ ಕೇಂದ್ರ, ನಿರ್ಭಯ ತಂಡ ಮುಂತಾದ ಸಂಘ ಸಂಸ್ಥೆಗಳು, ಉದ್ಯಮಿಗಳು, ಉತ್ಸಾಹಿ ಯುವಕರು ಸೇರಿಕೊಂಡು ಇದೊಂದು ಆದರ್ಶ ಮತ್ತು ಯುವ ಪ್ರತಿಭೆಗಳಿಗೆ ಉದ್ಯೋಗ ನೀಡುವ ಅಥವಾ ಉದ್ಯಮ ಪ್ರಾರಂಭಿಸುವ ಉನ್ನತ ಮಟ್ಟದ ಕನಸೊಂದನ್ನು ಕಂಡಿದೆ. ಈ ಕನಸು ಸಾಕಾರಗೊಳಿಸುವ ಎಲ್ಲ ಪ್ರಯತ್ನಗಳು
ಸದ್ದಿಲ್ಲದೆ ಸಾಗಿವೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ‘ನನ್ನ ಕನಸಿನ ಶಿವಮೊಗ್ಗ’ ಸಂಸ್ಥೆ ಅಧ್ಯಕ್ಷ ಎನ್‌. ಗೋಪಿನಾಥ್‌ ಅವರು ಕೊರೋನಾ ವೈರಸ್‌ ಸಂಕಷ್ಟ ತಂದೊಡ್ಡಿದೆ. ಬದುಕು ಕಟ್ಟಿಕೊಳ್ಳಲು ಬೇರೆ ಬೇರೆ ತಾಣಗಳಿಗೆ ಹೋಗಿದ್ದ ಉದ್ಯಮ ಪ್ರತಿಭೆಗಳು ಈಗ ಬಹುದೊಡ್ಡ ಸಂಖ್ಯೆಯಲ್ಲಿ ವಾಪಾಸ್ಸಾಗಿದ್ದಾರೆ. ಸುಮಾರು 60 ಸಾವಿರ ಯುವ ಪ್ರತಿಭೆಗಳು ತಮ್ಮ ಹಳ್ಳಿಗಳಿಗೆ ಮರಳಿವೆ. ಇವರನ್ನು ಇಲ್ಲಿಯೇ ಉಳಿಸಿಕೊಳ್ಳುವ ಬಹುದೊಡ್ಡ ಯೋಜನೆಯೊಂದನ್ನು ನಾವು
ಸ್ಥಾಪಿಸಲು ರೂಪಿಸಿದ್ದೇವೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರು, ಈಗಾಗಲೇ ಹಲವು ವರ್ಷಗಳ ಕಾಲ ದೇಶ ವಿದೇಶಗಳಲ್ಲಿ ಕೆಲಸ ಮಾಡಿದ ಅನುಭವವಿರುವವರು ಮತ್ತು ಬಂಡವಾಳ ಹೂಡುವವರು ಇವರೆಲ್ಲರನ್ನೂ ಒಟ್ಟಿಗೆ ಕಲೆ ಹಾಕಿ ಶಿವಮೊಗ್ಗದಲ್ಲಿ ಯಾವ ಯಾವ ಉದ್ಯಮ ಸ್ಥಾಪಿಸಬಹುದು, ಹೊಸದಾಗಿ ಉದ್ಯಮ ಸ್ಥಾಪಿಸುವವರಿಗೆ ಜಾಗ ಮತ್ತು ಮೂಲ ವ್ಯವಸ್ಥೆಯನ್ನು ಹೇಗೆ ಕಲ್ಪಿಸಿಕೊಡಬಹುದು ಎಂಬೆಲ್ಲ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಈಗಾಗಲೇ ಸಾಮಾಜಿಕ
ಜಾಲತಾಣಗಳಾದ ಫೇಸ್‌ಬುಕ್‌, ಯೂಟ್ಯೂಬ್‌, ಟ್ವಿಟ್ಟರ್‌ ಸೇರಿದಂತೆ ಕೆಲವು ವೆಬ್‌ಸೈಟ್‌ಗಳನ್ನು ಕೂಡ ರಚಿಸಲಾಗಿದೆ. ಇವುಗಳ ಮೂಲಕ ಪ್ರಚುರಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಡಾ.ಹರಿಪ್ರಸಾದ್‌, ಭಾರತ್‌ ಟಿವಿಯ ಹಾಲಸ್ವಾಮಿ, ಕೈಗಾರಿಕಾ ಸಂಘದ ಜೆ.ಆರ್‌.ವಾಸುದೇವ್‌, ಸ್ವೇಧಾ ಸಂಸ್ಥೆ ಅಧ್ಯಕ್ಷೆ ಲಕ್ಷ್ಮೀದೇವಿ ಗೋಪಿನಾಥ್‌, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಎಂ. ಎ. ರಮೇಶ್‌ ಹೆಗ್ಡೆ ಮುಂತಾದವರು ಯೋಜನೆಯ ಉದ್ಧೇಶ, ಸಫಲತೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.

ಮುಂಬೈಯಿಂದ ಸೊರಬಕ್ಕೆ 10 ದಿನಗಳ ಸೈಕಲ್‌ ಪ್ರಯಾಣ; ಮನ ಮಿಡಿಯುವ ಕತೆ

ಉದ್ಯೋಗ ಮಾಡುವವರು ಮತ್ತು ನೀಡುವ ಯುವಕರುಗಳನ್ನು ಒಂದೆಡೆ ಜೋಡಿಸುವ ಕಾರ್ಯ ಆರಂಭವಾಗಿದೆ. ಅಗತ್ಯ ನಾಯಕತ್ವ, ತರಬೇತಿ, ಆರ್ಥಿಕ ಸಹಕಾರ, ಕೌಶಲ್ಯತೆ ಇವುಗಳೆಲ್ಲವನ್ನು ಜೋಡಿಸಿಕೊಂಡು ಹಳ್ಳಿಗಳಲ್ಲೇ ನಮ್ಮ ಮಕ್ಕಳನ್ನು ಉಳಿಸಿಕೊಳ್ಳುವ ಮತ್ತು ಮುಂದಿನ ದಿನಗಳಲ್ಲಿ ಇಲ್ಲಿ ಕೌಶಲ್ಯ ಪಡೆದ ನಮ್ಮ ಮಕ್ಕಳನ್ನು ನಗರಕ್ಕೆ ವಲಸೆ ಹೋಗದಂತೆ ತಮ್ಮ ಹಳ್ಳಿಗಳಲ್ಲಿಯೇ ನೆಲಸುವಂತೆ ಮಾಡುವ ಪ್ರಯತ್ನವೇ ಈ ಹೊಸ ಯೋಜನೆಯ ಉದ್ಧೇಶವಾಗಿದೆ
ಎಂದು ತಿಳಿಸಿದರು.

ಈಗಾಗಲೇ ‘ಸ್ಟೇ ಅಟ್‌ ಶಿವಮೊಗ್ಗ’ ಅಭಿಯಾನದ ಸ್ವರೂಪ ಕಂಡುಕೊಂಡಿರುವ ಮತ್ತು ಅದಕ್ಕಾಗಿ ಸಾಮಾಜಿಕ ಜಾಲತಾಣ ಅಭಿವೃದ್ಧಿಪಡಿಸುತ್ತಿರುವ ಮತ್ತು ಯುವಕರನ್ನ ತನ್ನತ್ತ ಸೆಳೆದುಕೊಳ್ಳಲು ಹೊರಟಿರುವ ನಿರ್ಭಯ ತಂಡದ ಚೇತನ್‌ ತಾರಾನಾಥ್‌, ಪವನ್‌ ಕುಮಾರ್‌, ಸಂದೇಶ್‌, ಸಂಜಯ್‌ ಮುಂತಾದವರು ಈ ಕುರಿತು ಪ್ರಾತ್ಯಕ್ಷತೆಯ ಮೂಲಕ ವಿವರ ನೀಡಿದರು.

ಕೇವಲ 14 ಗಂಟೆಗಳಲ್ಲಿ 168 ಜನರು ನಮ್ಮ ಯೋಜನೆಗೆ ಹೆಸರು ನೊಂದಾಯಿಸಿಕೊಂಡಿದ್ದು, ಎಲ್ಲ ರೀತಿಯ ಸಹಕಾರ ಕೊಡುವುದಾಗಿ ತಿಳಿಸಿದ್ದಾರೆ. ದೇಶದಲ್ಲಿಯೇ ಇದೊಂದು ಹೊಸ ಪ್ರಯತ್ನ. ಇಲ್ಲಿರಲಾರೆ, ವಾಪಾಸ್‌ ಹೋಗಲಾರೆ ಎಂಬ ಗೊಂದಲದಲ್ಲಿರುವ ಪ್ರತಿಭಾನ್ವಿತ ಉದ್ಯೋಗ ಮತ್ತು ಉದ್ಯೋಗ ಆಸಕ್ತರಿಗೆ ವೇದಿಕೆ ಸಿದ್ದವಾಗಿದೆ. ಇದರ ಸದುಪಯೋಗವನ್ನು ನಮ್ಮ ಯುವಕರು ಪಡೆದುಕೊಳ್ಳಬೇಕು ಎಂದು ಕೋರಿದರು. ಅ.ನಾ.ವಿಜಯೇಂದ್ರರಾವ್‌,
ವಿಶ್ವೇಶ್ವರಯ್ಯ, ಶಂಕರಪ್ಪ ಇತರರು ಇದ್ದರು.
 

click me!