ವಿದೇಶದಿಂದ ಬಂದಿದ್ದ ವ್ಯೆಕ್ತಿಗೆ ಕೊರೋನಾ ವೈರಸ್ ದೃಢ| ಈ ಬಗ್ಗೆ ಮಾಹಿತಿ ನೀಡಿದ ಡಿಸಿ ದೀಪಾ ಚೋಳನ್|ಆಸ್ಟ್ರೇಲಿಯಾ, ದುಬೈ, ಮಸ್ಕತ್ ಹಾಗೂ ಗೋವಾ ಮೂಲಕ ಧಾರವಾಡಕ್ಕೆ ಆಗಮಿಸಿದ್ದ ವ್ಯೆಕ್ತಿ|
ಧಾರವಾಡ[ಮಾ.22]: ವಿದೇಶದಿಂದ ಬಂದಿದ್ದ ವ್ಯೆಕ್ತಿಯೊಬ್ಬರಿಗೆ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಹೇಳಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ಆಸ್ಟ್ರೇಲಿಯಾ, ದುಬೈ, ಮಸ್ಕತ್ ಹಾಗೂ ಗೋವಾ ಮೂಲಕ ಧಾರವಾಡ ನಗರಕ್ಕೆ ಆಗಮಿಸಿದ್ದ ವ್ಯಕ್ತಿಯಲ್ಲಿ ಕೋವಿಡ್ 19 ಪಾಸಿಟಿವ್ ಇರುವುದು ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ. ಹೀಗಾಗಿ ಸೋಂಕಿತ ವ್ಯೆಕ್ತಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಆರಂಭವಾಗಿದೆ ಎಂದು ಹೇಳಿದ್ದಾರೆ.
ಪ್ರಕರಣ ಪತ್ತೆಯಾದ ಸ್ಥಳದಲ್ಲಿ ನಿಯಮಾನುಸಾರ ಸರ್ವೇ ಮಾಡಲಾಗುತ್ತಿದೆ. ವಿದೇಶ ಪ್ರವಾಸದಿಂದ 12-03-2020 ರಂದು ಧಾರವಾಡ ನಗರಕ್ಕೆ ಆಗಮಿಸಿದ್ದ,ಶಂಕಿತ ಕೋವಿಡ್ 19 ರ ರೋಗಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ 18-03-2020 ರಂದು ಅವರು ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದರು.ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ರೋಗ ಲಕ್ಷಣಗಳಿಗೆ ಅನುಗುಣವಾಗಿ ಅದೇ ದಿನ ಅವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ತಪಾಸಣೆಗಾಗಿ ಶಿವಮೊಗ್ಗದ VDRL ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು, ಇದೀಗ ಪ್ರಯೋಗಾಲಯ ವರದಿ ಕೋವಿಡ್ 19 ಪಾಸಿಟಿವ್ ಎಂದಿ ಬಂದಿದೆ ಎಂದು ಹೇಳಿದ್ದಾರೆ.
ಕೊರೋನಾ ಎಫೆಕ್ಟ್: SSLC ಪರೀಕ್ಷೆ ಮುಂದೂಡಿಕೆ
ಸೋಂಕು ದೃಢಪಟ್ಟಿರುವ ವ್ಯಕ್ತಿಯು ಧಾರವಾಡ ನಗರದ ಹೊಸಯಲ್ಲಾಪುರ ದ ನಿವಾಸಿಯಾಗಿದ್ದಾರೆ. ಹೊಸಯಲ್ಲಾಪುರ ಪ್ರದೇಶವನ್ನು ಕಂಟೈನಮೆಂಟ್ ಎಂದು ಘೋಷಿಸಲಾಗಿದ್ದು, ಅಲ್ಲಿಂದ ಸುತ್ತಮುತ್ತಲಿನ 3 ಕಿಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆಗಮನ ಮತ್ತು ನಿರ್ಗಮನಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಕರಣ ಕಂಡು ಬಂದ ಸ್ಥಳದ ಸುತ್ತಮುತ್ತ ನಿಯಮಾನುಸಾರ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಈ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಮಾಹಿತಿ ( Contact Tracing) ಸಂಗ್ರಹಿಸಲಾಗುತ್ತಿದೆ.
ವಿಶ್ವದಾದ್ಯಂತ 100 ಕೋಟಿ ಜನರಿಗೆ ಗೃಹಬಂಧನ!
ಸಾಮಾಜಿಕ ಅಂತರ, ಶುಚಿತ್ವ ಪಾಲನೆಗೆ ಒತ್ತು ನೀಡಿ ಜಿಲ್ಲೆಯಾದ್ಯಂತ ಈಗಾಗಲೇ ಕೊರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನತೆ ಭಯಕ್ಕೆ ಒಳಗಾಗಬಾರದು, ಸಾಮಾಜಿಕ ಅಂತರ ಹಾಗೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಸಾರ್ವಜನಿಕರು ಸಾಧ್ಯವಾದಷ್ಟು ತಮ್ಮ ಮನೆಗಳಲ್ಲಿಯೇ ಇರುವುದರ ಮೂಲಕ ವೈರಾಣು ತಡೆಯಲು ತಮ್ಮ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.