ಬಳ್ಳಾರಿ ಜಿಲ್ಲೆಯಲ್ಲಿ ಭಾನುವಾರ ಒಟ್ಟು 4 ಪ್ರಕರಣಗಳು ದೃಢ| ಜಿಂದಾಲ್ ಮೂಲದ ಒಟ್ಟು 7 ಜನರಿಗೆ ಹರಡಿದ ಸೋಂಕು| ಜಿಂದಾಲ್‌ನಲ್ಲಿ ಐದೇ ದಿನದಲ್ಲಿ ಏಳು ಪ್ರಕರಣಗಳು ಪತ್ತೆ| ಕ್ವಾರಂಟೈನ್‌ನಲ್ಲಿವವರ ಗಂಟಲುದ್ರವ ತೆಗೆದು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಬಳಿಕ ಇನ್ನೆಷ್ಟು ಜನರಿಗೆ ಸೋಂಕು ಹಬ್ಬಿದೆ ಎಂಬುದು ಖಚಿತವಾಗಲಿದೆ|
ಬಳ್ಳಾರಿ(ಜೂ.08): ಜಿಲ್ಲೆಯ ತೋರಣಗಲ್ಲಿನ ಜಿಂದಾಲ್‌ನಲ್ಲಿ (ಜೆಎಸ್‌ಡಬ್ಲ್ಯೂ) ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಭಾನುವಾರ ಮತ್ತಿಬ್ಬರು ನೌಕರರಿಗೆ ಸೋಂಕು ದೃಢಪಟ್ಟಿದ್ದು ಜಿಂದಾಲ್ ಉದ್ಯೋಗಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇದುವರೆಗೆ ಜಿಂದಾಲ್ ಮೂಲದಿಂದ 7 ಜನರಿಗೆ (ನಾಲ್ವರು ಉದ್ಯೋಗಿಗಳು, ಮೂವರು ಕುಟುಂಬಸ್ಥರು) ಸೋಂಕು ಹಬ್ಬಿರುವುದು ಕಂಡು ಬಂದಿದೆ. ಜಿಂದಾಲ್‌ನ ಇಬ್ಬರು ಸೇರಿ ಭಾನುವಾರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಜನರಲ್ಲಿ ಕೋವಿಡ್-19 ರೋಗ ಕಂಡು ಬಂದಿದೆ.
ಬಳ್ಳಾರಿ ಮತ್ತೆ ಕಾಂಗ್ರೆಸ್ ಭದ್ರಕೋಟೆಯಾಗಲಿದೆ: ಸಿರಾಜ್‌ಶೇಕ್
ಜಿಂದಾಲ್‌ನ ನೌಕರ ಬಳ್ಳಾರಿಯ ಶಂಕರ್ ಕಾಲೋನಿ ನಿವಾಸಿ (48) ಹಾಗೂ ಜೆಎಸ್‌ಡಬ್ಲ್ಯು ವಸತಿ ಸಮುಚ್ಚಯದಲ್ಲಿ ವಾಸವಾಗಿರುವ ನೌಕರನಿಗೆ (34) ಸೋಂಕು ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಈ ಇಬ್ಬರು ಕಳೆದ ಗುರುವಾರ ದೃಢಪಟ್ಟಜಿಂದಾಲ್‌ನ ಸೋಂಕಿತ ನೌಕರ(ಕರ್ನೂಲ್ ಟ್ರಾವೆಲ್ ಹಿಸ್ಟರಿ ಹೊಂದಿದ ವ್ಯಕ್ತಿ)ನ ಪ್ರಥಮ ಸಂಪರ್ಕಿತರು ಎಂದು ತಿಳಿದು ಬಂದಿದೆ. ಈಗಾಗಲೇ ಕರ್ನೂಲ್ ಮೂಲದ ಸೋಂಕಿತ ವ್ಯಕ್ತಿಯ ಪತ್ನಿ, ಇಬ್ಬರು ಮಕ್ಕಳಿಗೆ ಶನಿವಾರ ಕೊರೋನಾ ಪಾಸಿಟಿವ್ ಬಂದಿತ್ತು. ಅದಕ್ಕೂ ಮುನ್ನ ಬುಧವಾರ ಸೇಲಂಗೆ ತೆರಳಿದ್ದ ಉದ್ಯೋಗಿಯಲ್ಲೂ ಸೋಂಕು ಕಂಡಿತ್ತು. ಇಂದು ಮತ್ತಿಬ್ಬರಲ್ಲಿ ಸೋಂಕು ಕಂಡು ಬಂದಿದ್ದು ಗಾಬರಿಗೆ ಕಾರಣವಾಗಿದೆ.
ಈ ಕಾರ್ಖಾನೆಯಲ್ಲಿ 3000 ಕ್ಕೂ ಹೆಚ್ಚಿನ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ಆತಂಕ ಶುರುವಾಗಿದೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗುತ್ತಿದೆ.
ಸೋಂಕು ಹಬ್ಬಿರುವ ಹಿನ್ನೆಲೆಯಲ್ಲಿ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರು ಸೇರಿದಂತೆ 56 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಜಿಂದಾಲ್ ನೌಕರ ವಾಸವಾಗಿದ್ದ ಬಳ್ಳಾರಿಯ ಶಂಕರ ಕಾಲೋನಿಯಲ್ಲಿ ಕಂಟೈನ್ಮೆಂಟ್ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಂದಾಲ್‌ನಲ್ಲಿ ಐದೇ ದಿನದಲ್ಲಿ ಏಳು ಪ್ರಕರಣಗಳು ಪತ್ತೆಯಾಗಿವೆ. ಇನ್ನು ಕ್ವಾರಂಟೈನ್‌ನಲ್ಲಿವವರ ಗಂಟಲುದ್ರವ ತೆಗೆದು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಬಳಿಕ ಇನ್ನೆಷ್ಟು ಜನರಿಗೆ ಸೋಂಕು ಹಬ್ಬಿದೆ ಎಂಬುದು ಖಚಿತವಾಗಲಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಿಬ್ಬರಲ್ಲಿ ಸೋಂಕು
ಇನ್ನು ಅಲ್ಲೀಪುರ ಬಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಕ್ವಾರಂಟೈನ್‌ನಲ್ಲಿದ್ದ ಮುಂಬೈನಿಂದ ಆಗಮಿಸಿದ್ದ 45 ವರ್ಷದ ಮಹಿಳೆ ಹಾಗೂ ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್‌ನಲ್ಲಿದ್ದ ಕರ್ನೂಲ್‌ನಿಂದ ಆಗಮಿಸಿದ್ದ 54 ವರ್ಷ ವ್ಯಕ್ತಿಗೆ ಕೊರೋನಾ ವೈರಸ್ ಇರುವುದು ಖಚಿತವಾಗಿದೆ. ಈ ಇಬ್ಬರು ವಾರದ ಹಿಂದೆಯೇ ಕ್ವಾರಂಟೈನ್ ಆಗಿದ್ದರು. ಗಂಟಲುದ್ರವ ಪರೀಕ್ಷೆಯ ವರದಿ ಬಳಿಕ ಇವರಲ್ಲಿ ವೈರಸ್ ಇರುವುದು ದೃಢವಾಗಿದೆ. ಸೋಂಕಿತ ನಾಲ್ವರನ್ನು ಇಲ್ಲಿನ ಜಿಲ್ಲಾ ಕೊರೋನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.