ಹುಬ್ಬಳ್ಳಿ: ಕಿಮ್ಸ್‌ ಇಮೇಜ್‌ ಬದಲಿಸಿದ ಕೊರೋನಾ..!

By Kannadaprabha News  |  First Published Dec 27, 2023, 9:47 AM IST

ಕೊರೋನಾ ಬಂದ ವೇಳೆಯಲ್ಲಿ ಖಾಸಗಿ ಆಸ್ಪತ್ರೆಗಳೆಲ್ಲ ಬಾಗಿಲು ಮುಚ್ಚಿದ್ದವು. ಆಗ ನಿಮ್ಮೊಂದಿಗೆ ನಾವಿದ್ದೇವೆ ಚಿಂತೆ ಮಾಡಬೇಡಿ ಎಂದು ಅಭಯ ಹಸ್ತ ಚಾಚಿದ್ದು ಕಿಮ್ಸ್‌. ಬೇರೆ ಬೇರೆ ಕಾಯಿಲೆ ಅಷ್ಟೇ ಅಲ್ಲ. ಕೊರೋನಾಕ್ಕೂ ಸೂಕ್ತ ಚಿಕಿತ್ಸೆ ನೀಡಿ ಸಂಜೀವಿನಿ ಎನಿಸಿತು.


ಶಿವಾನಂದ ಗೊಂಬಿ

ಹುಬ್ಬಳ್ಳಿ(ಡಿ.27):  ಕೊರೋನಾ ಹೆಸರು ಕೇಳಿದರೆ ಈಗಲೂ ಜನ ಬೆಚ್ಚಿ ಬೀಳುತ್ತಾರೆ. ಯಾವ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಲು ಮುಂದೆ ಬಾರದಂತಹ ಕಾಲವದು. ಆಗ ನಿಮ್ಮ ಚಿಕಿತ್ಸೆಗೆ ನಾವಿದ್ದೇವೆ ಚಿಂತೆ ಮಾಡಬೇಡಿ ಎಂದು ಧೈರ್ಯ ತುಂಬಿದ್ದು ಕಿಮ್ಸ್‌. ಅಕ್ಷರಶಃ ಉತ್ತರ ಕರ್ನಾಟಕದ ಪಾಲಿಗೆ ಸಂಜೀವಿನಿಯಂತೆ ಕೆಲಸ ಮಾಡಿದ ಹಿರಿಮೆ ಕಿಮ್ಸ್‌ನದ್ದು. ರಾಜ್ಯದಲ್ಲೇ ದಾಖಲೆ ಮಾಡಿ ಸೈ ಎನಿಸಿಕೊಂಡಿತು.

Tap to resize

Latest Videos

2020ರಿಂದ ಶುರುವಾದ ಕೊರೋನಾ ಎಲ್ಲರಲ್ಲೂ ನಡುಕುವನ್ನುಂಟು ಮಾಡಿತ್ತು. ಆಗ ಅಕ್ಷರಶಃ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ಖಾಸಗಿ ಆಸ್ಪತ್ರೆಗಳ್ಯಾವವು ಕೊರೋನಾ ಪೇಶೆಂಟ್‌ಗಳಿಗಷ್ಟೇ ಅಲ್ಲ. ಬೇರೆ ಕಾಯಿಲೆಗಳಿಗೂ ಚಿಕಿತ್ಸೆ ನೀಡಲು ಮುಂದೆ ಬರುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗಳೆಲ್ಲ ಬಾಗಿಲು ಮುಚ್ಚಿದ್ದವು. ಆಗ ನಿಮ್ಮೊಂದಿಗೆ ನಾವಿದ್ದೇವೆ ಚಿಂತೆ ಮಾಡಬೇಡಿ ಎಂದು ಅಭಯ ಹಸ್ತ ಚಾಚಿದ್ದು ಕಿಮ್ಸ್‌. ಬೇರೆ ಬೇರೆ ಕಾಯಿಲೆ ಅಷ್ಟೇ ಅಲ್ಲ. ಕೊರೋನಾಕ್ಕೂ ಸೂಕ್ತ ಚಿಕಿತ್ಸೆ ನೀಡಿ ಸಂಜೀವಿನಿ ಎನಿಸಿತು.

ಪ್ರತ್ಯೇಕ ಧರ್ಮದ ಹೆಸರಲ್ಲಿ ಸಮಾಜ ಒಡೆಯಬಾರದು: ಜಗದೀಶ ಶೆಟ್ಟರ್

ಮೊದಲಿಗೆ ಕೊರೋನಾ ಪೇಶೆಂಟ್‌ಗಳಿಗಾಗಿ 100 ಬೆಡ್‌ಗಳನ್ನಷ್ಟೇ ಮೀಸಲಿಟ್ಟಿದ್ದ ಕಿಮ್ಸ್‌ ಹಂತ ಹಂತವಾಗಿ ಇಡೀ ಆಸ್ಪತ್ರೆಯನ್ನೇ ಕೊರೋನಾಕ್ಕೆ ಮೀಸಲಿಟ್ಟಿತು. ಇಲ್ಲಿನ ವೈದ್ಯರು, ದಾದಿಯರು ಸೇರಿದಂತೆ ಬಹುತೇಕ ಸಿಬ್ಬಂದಿ ಎರಡೆರಡು ತಿಂಗಳಗಟ್ಟಲೇ ಮನೆಯ ಮುಖವನ್ನೇ ನೋಡಲಿಲ್ಲ. ಕಿಮ್ಸ್‌ನಲ್ಲೇ ವಾಸ್ತವ್ಯ ಹೂಡಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ರೋಗಿಗಳಿಗೆ ಜೀವದಾನ ಮಾಡಿದರು.

ಇಮೇಜ್‌ ಬದಲಿಸಿತು:

ಆಗ ಕಿಮ್ಸ್‌ ನೀಡಿದ ಸೇವೆಯಿಂದಾಗಿ ಕಿಮ್ಸ್‌ನ್ನು ನೋಡುವ ದೃಷ್ಟಿಕೋನವೇ ಬದಲಾಯಿತು. ಕಿಮ್ಸ್‌ ಎಂದರೆ ಮೊದಲು ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯ ಎಂಬ ಭಾವನೆ ಇತ್ತು. ಅದೇ ರೀತಿ ಆಗುತ್ತಿತ್ತು. ಆದರೆ, ಕೊರೋನಾ ವೇಳೆಯಲ್ಲಿ ಇಲ್ಲಿ ಸಿಕ್ಕ ಚಿಕಿತ್ಸೆ, ಸೇವೆ ಕಿಮ್ಸ್‌ನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಯಿತು.

ಮೊದಮೊದಲು ಇಲ್ಲಿನ ವೈದ್ಯರು, ದಾದಿಯರು ಕೂಡ ತಮಗೆಲ್ಲಿ ಕೊರೋನಾ ವಕ್ಕರಿಸುತ್ತದೆಯೋ ಎಂದು ಚಿಕಿತ್ಸೆ ನೀಡಲು ಹಿಂಜರಿಯುತ್ತಿದ್ದರು. ಆಗೆಲ್ಲ ಹಿರಿಯ ವೈದ್ಯರು, ಕಿಮ್ಸ್‌ ನಿರ್ದೇಶಕರು, ಅಧೀಕ್ಷಕರು ಎಲ್ಲರೂ ಸೇರಿ ಸಿಬ್ಬಂದಿಗೆ ಧೈರ್ಯ ತುಂಬಿ ಅಣಿಗೊಳಿಸುತ್ತಿದ್ದರು. ದಿನದಿಂದ ದಿನಕ್ಕೆ ಸಿಬ್ಬಂದಿಗಳಲ್ಲೂ ಧೈರ್ಯ ಬರಲಾರಂಭಿಸಿತು. ರೋಗಿಗಳಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುವಂತಾದರು. ಆಕ್ಸಿಜನ್‌ ಕೊರತೆ, ವೆಂಟಿಲೇಟರ್ ಕೊರತೆ ಹೀಗೆ ಬರುತ್ತಿದ್ದ ಒಂದೊಂದು ಸವಾಲನ್ನು ಎದುರಿಸುತ್ತಾ, ದೋಷಗಳನ್ನು ಸರಿಪಡಿಸಿಕೊಳ್ಳುತ್ತಾ ರೋಗಿಗಳನ್ನು ಆರೋಗ್ಯವಂತರನ್ನಾಗಿ ಮಾಡಿಕಳುಹಿಸುತ್ತಿದ್ದರು. ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ ಅವರಿಗಿಂತ ವೈದ್ಯರು, ಸಿಬ್ಬಂದಿಗಳೇ ಹೆಚ್ಚು ಸಂಭ್ರಮಿಸುತ್ತಿದ್ದರು. ರೋಗಿಗಳು ಮನೆಗೆ ಹೊರಟರೆ ಯುದ್ಧ ಗೆದ್ದಂತಹ ಅನುಭವ ನಮಗಾಗುತ್ತಿತ್ತು ಎಂದು ಅಂದು ಚಿಕಿತ್ಸೆ ನೀಡಿದ ವೈದ್ಯರು ಅಂದಿನ ನೆನಪನ್ನು ಮೆಲುಕು ಹಾಕುತ್ತಾರೆ.

ಮೊದಲ ಮತ್ತು ಎರಡನೆಯ ಅಲೆಯಲ್ಲಿ ಕಿಮ್ಸ್‌ನಲ್ಲಿ ಸರಿಸುಮಾರು 14 ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಿದ ಹಿರಿಮೆ ಕಿಮ್ಸ್‌ಗೆ ಸಲ್ಲುತ್ತದೆ. ಇದರಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಎಂದು ಅಂಕಿ ಅಂಶಗಳಿಂದ ತಿಳಿಯುತ್ತದೆ.

ಬಡತನ ದೂರ ಮಾಡುವುದೇ ಪ್ರಧಾನಿ ಮೋದಿ ಸಂಕಲ್ಪ: ಪ್ರಲ್ಹಾದ್‌ ಜೋಶಿ

ಬ್ಲ್ಯಾಕ್‌ ಫಂಗಸ್‌:

ಇನ್ನು ಎರಡನೆಯ ಅಲೆಯಲ್ಲಿ ಕೊರೋನಾ ಮುಗಿಯುತ್ತಿದ್ದಂತೆ ಅದರ ಸೈಡ್‌ ಎಫೆಕ್ಟ್‌ನಂತೆ ಬ್ಲ್ಯಾಕ್‌ ಫಂಗಸ್‌ ಕಾಡಿತು. ಆಗಲೂ ಕಿಮ್ಸ್‌ ನೀಡಿದ ಚಿಕಿತ್ಸೆ ಅತ್ಯದ್ಭುತ. ಇದರ ಸೇವೆ ಬರೀ ಹುಬ್ಬಳ್ಳಿ-ಧಾರವಾಡ ಜನರಿಗಷ್ಟೇ ಸೀಮಿತವಾಗಲಿಲ್ಲ. ಉತ್ತರ ಕರ್ನಾಟಕದ 8-10 ಜಿಲ್ಲೆಗಳ ಜನರಿಗೆ ಕಾಮಧೇನುವಿನಂತೆ ಕಾರ್ಯನಿರ್ವಹಿಸಿತು. ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗಾಗಿ ರಾಯಚೂರು, ಕಲಬುರಗಿಯಿಂದಲೂ ಜನರು ಇಲ್ಲಿಗೆ ಬಂದಿದ್ದುಂಟು. ಆರ್‌ಟಿಪಿಸಿಆರ್‌ ಟೆಸ್ಟ್‌, ವ್ಯಾಕ್ಸಿನ್‌ ಹೀಗೆ ಪ್ರತಿಯೊಂದರಲ್ಲಿ ಕಿಮ್ಸ್‌ ನೀಡಿದ ಸೇವೆ ಅಪರೂಪವೆನಿಸಿತು. ಒಟ್ಟಾರೆ ಕಿಮ್ಸ್‌ನ ನೋಡುವ ದೃಷ್ಟಿಕೋನವನ್ನೇ ಕೊರೋನಾ ಬದಲಿಸಿದ್ದು ಸುಳ್ಳಲ್ಲ.!

ಪ್ಲಾಸ್ಮಾ ಥೆರಪಿ: ಕಿಮ್ಸ್‌ನ ದಾಖಲೆ

ಕೊರೋನಾದಿಂದ ಗುಣಮುಖರಾದ ರೋಗಿಯಿಂದ ಫ್ಲಾಸ್ಮಾ ಪಡೆದು ಮತ್ತೊಬ್ಬ ಪೀಡಿತನಿಗೆ ನೀಡಿ ಆರೋಗ್ಯವಂತನ್ನಾಗಿ ಮಾಡಿದ್ದು ಇದೇ ಕಿಮ್ಸ್‌. ಈ ರೀತಿಯ ಫ್ಲಾಸ್ಮಾ ಥೆರಪಿ ರಾಜ್ಯದಲ್ಲಿ ನಡೆದಿದ್ದು ಕಿಮ್ಸ್‌ನಲ್ಲೇ ಮೊದಲು.
ದೆಹಲಿಯಲ್ಲಿ ಫ್ಲಾಸ್ಮಾ ಥೆರಪಿ ನಡೆದಿತ್ತು. ಆದರೆ, ರಾಜ್ಯದ ಉಳಿದ ಯಾವ ಆಸ್ಪತ್ರೆಯಲ್ಲೂ ನಡೆದಿರಲಿಲ್ಲ. ಆ ಪ್ರಯೋಗವನ್ನು ಕಿಮ್ಸ್‌ ವೈದ್ಯರ ತಂಡ ಮಾಡಿ ಯಶಸ್ವಿಯಾಗಿತ್ತು. ಇದು ಕಿಮ್ಸ್‌ನ ದಾಖಲೆ ಕೂಡ ಹೌದು. ಮುಂದೆ ಬರೋಬ್ಬರಿ 125ಕ್ಕೂ ಹೆಚ್ಚು ಪೀಡಿತರಿಗೆ ಫ್ಲಾಸ್ಮಾ ಥೆರಪಿ ಮೂಲಕವೇ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿತು ಎಂದು ಅಂದಿನ ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸುತ್ತಾರೆ.

click me!