ಕೊರೋನಾ ಮಹಾಮಾರಿ ಇದೀಗ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಜಿಲ್ಲೆಯೊಂದರಲ್ಲಿ ಮುದಾಯಕ್ಕೆ ವಕ್ಕರಿಸಿದೆ.
ವರದಿ : ಆರ್.ತಾರಾನಾಥ್
ಚಿಕ್ಕಮಗಳೂರು (ಆ.17): ಕೊರೋನಾ ದೇಶಕ್ಕೆ ಕಾಲಿಟ್ಟಬಳಿಕ ಮೂರು ತಿಂಗಳ ಕಾಲ ಗ್ರೀನ್‌ಝೋನ್‌ನಲ್ಲಿದ್ದ ಕಾಫಿಯ ನಾಡು ಈಗ ಕೊರೋನಾ ಸೋಂಕಿನ ಹಾಟ್‌ಸ್ಪಾಟ್ ಆಗುತ್ತಿದೆ.
ಆಗಸ್ಟ್‌ನಲ್ಲಿ ಸೋಂಕಿತರ ಹಾಗೂ ಸಾವಿನ ಸಂಖ್ಯೆ ನೋಡಿದರೆ ಈಗಾಗಲೇ ಸಮುದಾಯಕ್ಕೆ ಕೋವಿಡ್ ತನ್ನ ಕೆನ್ನಾಲಿಗೆ ಚಾಚಿದೆ ಎಂಬುದು ಖಚಿತವಾಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ ದೇಶಕ್ಕೆ ಎಂಟ್ರಿ ಕೊಟ್ಟ ಕೊರೋನಾ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಿಗೆ ವ್ಯಾಪಿಸಿತು. ಸತತವಾಗಿ ಮೂರು ತಿಂಗಳ ಕಾಲ ಚಿಕ್ಕಮಗಳೂರು ಗ್ರೀನ್‌ಝೋನ್‌ನಲ್ಲಿತ್ತು. ಮೊದಲ ಬಾರಿಗೆ ಜಿಲ್ಲೆಯಲ್ಲಿ ಮೇ 15ರಂದು ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾದವು. ಆದರೆ, ಆ ಎರಡು ಪ್ರಕರಣಗಳು ಫಾಲ್ಸ್ ಎಂಬುದು ನಂತರದ ಪರೀಕ್ಷೆಯಲ್ಲಿ ತಿಳಿಯಿತಾದರೂ ನಂತರ ಕಾಫಿನಾಡಿಗೆ ಬ್ಯಾಡ್ ಡೇ ಆರಂಭವಾದವು.
ಗಣಪತಿ ಹೋಗಲಿಲ್ಲಾಂದ್ರ ಇದೇ ಕೊನೆಯ ಗಣೇಶೋತ್ಸವ: ಆತ್ಮಹತ್ಯೆಗೆ ನಿರ್ಧರಿಸಿದ ಕಲಾವಿದನ ಕುಟುಂಬ...
ಸದ್ಯ ಜಿಲ್ಲೆಯಲ್ಲಿ ಕೋವಿಡ್ ಮಿಂಚಿನ ಓಟ ಆರಂಭಿಸಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಮತ್ತು ಮೃತಪಡುವವರ ಸಂಖ್ಯೆ ಏರಿಕೆಯಾಗುತ್ತಿದೆ. ಆ.1ರವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 21 ಇತ್ತು. ಈ ಸಂಖ್ಯೆ ಕಳೆದ 15 ದಿನಗಳಲ್ಲಿ 43ಕ್ಕೆ ಏರಿದೆ. ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಆಗಸ್ಟ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಹರಡಿಕೊಂಡಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ.
15 ದಿನಗಳಲ್ಲಿ 22 ಸಾವು:
ಕೊರೋನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ನೋಡಿದರೆ ಮುಂದಿನ ದಿನಗಳಲ್ಲಿ ಜಿಲ್ಲೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕಾರಣ, ಈಗಾಗಲೇ ಕೊರೋನಾ ಸಮುದಾಯಕ್ಕೆ ಹರಡಿಕೊಂಡಿದೆ. ಅಂದರೆ ಕೈಮೀರಿ ಹೋಗಿದೆ. ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಈಗಾಗಲೇ ಬಂದಿದೆ.
ಜಿಲ್ಲೆಯ 8 ತಾಲೂಕುಗಳ ಪೈಕಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವುದು ಚಿಕ್ಕಮಗಳೂರು, ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ. ಕಾರಣ, ಈ ಮೂರು ತಾಲೂಕುಗಳು ಜನದಟ್ಟಣೆಯ ಪ್ರದೇಶಗಳು. ಇಲ್ಲಿ ತುಂಬಾ ಬೇಗ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದೆ. ಅಂದರೆ, ಈಗಾಗಲೇ ಸಮುದಾಯಕ್ಕೆ ಪ್ರವೇಶ ಮಾಡಿದೆ.
ಮುಂದಿದೆ ಡೇಂಜರ್ ಡೇ:
ತೀವ್ರ ಗತಿಯಲ್ಲಿ ಸೊಂಕು ಹರಡುತ್ತಿರುವ ವೇಗವನ್ನು ನೋಡಿದರೆ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲಿವೆ. ಸಾವಿನ ಸಂಖ್ಯೆಯೂ ಕೂಡಾ ಏರಿಕೆಯಾಗಲಿದೆ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಹಾಸನ: ಮೈಮೇಲೆ ದೇವರು ಬಂದಿದೆ ಎಂದು ಕೋವಿಡ್ ರೋಗಿಯ ಮೇಲೆ ಸೆಕ್ಯುರಿಟಿ ಗಾರ್ಡ್ ಹಲ್ಲೆ... R
ಇಂತಹ ಪರಿಸ್ಥಿತಿಯನ್ನು ಎದುರಿಸಲು ನಾವುಗಳು ಈಗಿನಿಂದಲೇ ಜಾಗೃತರಾಗಿರಬೇಕು. ಅಂದರೆ, ಮಾಸ್ಕ್‌ಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಗಳಿಗೆ ಆಗಾಗ ಸ್ಯಾನಿಟೈಸರ್ ಹಚ್ಚಿಕೊಳ್ಳಬೇಕು. ಸೋಪಿನಿಂದ ಕೈಗಳನ್ನು ಶುಚಿಗೊಳಿಸಬೇಕು ಎಂದು ಹೇಳಿದ್ದಾರೆ.
ಹಿಂದಿಗಿಂತ ಮುಂದಿನ ದಿನಗಳಲ್ಲಿ ತುಂಬಾ ಎಚ್ಚರಿಕೆ ತೆಗೆದುಕೊಳ್ಳಬೇಕು. ಇಲ್ಲದೆ ಹೋದರೆ ಸಾವಿನ ಸಂಖ್ಯೆ ಏರಿಕೆಯಾಗಲಿದೆ ಎಂದಿರುವ ಅವರು, ಬಿಪಿ, ಶುಗರ್, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆಗಳು, ಕ್ಷಯ ರೋಗದಿಂದ ಬಳಲುತ್ತಿರುವವರಿಗೆ ಸೋಂಕು ತಗಲಿದರೆ, ಬದುಕುಳಿಯುವ ಸಾಧ್ಯತೆ ಕಡಿಮೆ. ಆದ್ದರಿಂದ ಸೋಂಕು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.
ದಿನಾಂಕ ಮೃತಪಟ್ಟವರ ಸಂಖ್ಯೆ ಪಾಜಿಟಿವ್
ಜು. 1 01 79
ಜು. 15 07 168
ಜು. 25 17 616
ಆ. 1 21 1046
ಆ. 7 27 1367
ಆ. 15 43 2112
ಮೃತರ ಸಂಖ್ಯೆ 47ಕ್ಕೆ ಏರಿಕೆ
- ಭಾನುವಾರ 4 ಮಂದಿ ಸಾವು, 69 ಪಾಸಿಟಿವ್ ಪ್ರಕರಣ ಪತ್ತೆ
ಚಿಕ್ಕಮಗಳೂರು: ಕೊರೋನಾ ಸೋಂಕಿನಿಂದ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿದ್ದು, ಭಾನುವಾರ 4 ಮಂದಿ ಸಾವನ್ನಪ್ಪಿದ್ದಾರೆ. 69 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸಾವಿನ ಸರಣಿ ಮುಂದುವರೆದಿದೆ. ಸೋಂಕಿತರ ಸಂಖ್ಯೆಯೂ ಅದೇ ವೇಗದಲ್ಲಿ ಏರುತ್ತಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 33, ಕಡೂರು- 18, ತರೀಕೆರೆ- 17 ಹಾಗೂ ಎನ್.ಆರ್.ಪುರ ತಾಲೂಕಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 2181 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 1323 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 799 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ 12 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೃತಪಟ್ಟನಾಲ್ಕು ಮಂದಿಯಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಇದ್ದಾರೆ.