ಕೊಪ್ಪಳ: ಷರತ್ತು ಸಡಿಲಿಕೆ, ನಿಯಮ ಮೀರಿ ಓಡಾಟ, ಸೋಂಕಿತರಿಂದಲೇ ಕೊರೋನಾ ಉಲ್ಬಣ!

By Kannadaprabha News  |  First Published Sep 3, 2020, 11:18 AM IST

ಕೊಪ್ಪಳ ಜಿಲ್ಲಾದ್ಯಂತ ಹೆಚ್ಚಳಕ್ಕೆ ತಪ್ಪಿದ ನಿಯಂತ್ರಣವೇ ಕಾರಣ| ಮನೆಯಲ್ಲಿ ಇರಿ ಎಂದಿದ್ದು ಬರಿ ನಾಮ್‌ಕಾವಸ್ತೆ| ಬಸ್‌, ಹೋಟೆಲ್‌ನಲ್ಲಿಯೂ ಸುತ್ತುತ್ತಾರೆ| ಪಾಸಿಟಿವ್‌ ಬಂದವರು ಎಲ್ಲೆಂದ​ರಲ್ಲಿ ಓಡಾ​ಡು​ವುದಕ್ಕೆ ಕಡಿವಾಣ ಹಾಕಲೇಬೇಕು ಎನ್ನುವುದು ಸಾರ್ವಜನಿಕರ ಆಗ್ರಹ| 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಸೆ.03): ಲಾಕ್‌ಡೌನ್‌ ಸಡಿಲಿಕೆಯ ಜೊತೆಗೆ ಕೊರೋನಾ ರೋಗಿಗಳಿಗೆ ವಿಧಿಸಿದ್ದ ಷರತ್ತು ಸಡಿಲಿಕೆ ಮಾಡಿರುವುದರಿಂದ ಪಾಸಿಟಿವ್‌ ಇರುವವರು ಬೇಕಾದಲ್ಲೆಲ್ಲ ಸುತ್ತುತ್ತಿದ್ದು, ಇವರೇ ಕೋವಿಡ್‌ ವಾಹಕರಾಗಿದ್ದಾರೆ! ಆಸ್ಪತ್ರೆಯಲ್ಲಿ ದಾಖಲಾಗದವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತೇವೆ ಎಂದು ಹೇಳಿಕೊಂಡು ನನಗೇನೂ ಲಕ್ಷಣವೇ ಇಲ್ಲ ಎಂದು ಎಲ್ಲೆಂದರಲ್ಲಿ ಸುತ್ತುತ್ತಿದ್ದಾರೆ. ಸರ್ಕಾರದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಓಡಾಡುತ್ತಿರುವುದರಿಂದಲೇ ಜಿಲ್ಲೆಯಲ್ಲಿ ಕೋವಿಡ್‌ ಸಂಖ್ಯೆ ಹೆಚ್ಚಳವಾಗು​ತ್ತಿ​ದೆ.

Tap to resize

Latest Videos

ಈ ಕುರಿತು ಕನ್ನಡಪ್ರಭ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಅನೇಕರು ಕೋವಿಡ್‌ ಪಾಸಿಟಿವ್‌ ಇರುವುದು ಗೊತ್ತಿದ್ದರೂ ಆಸ್ಪತ್ರೆಗೆ, ಹೋಟೆಲ್‌ಗೆ ಬಂದಿರುವುದು ಗೊತ್ತಾಗಿದೆ. ಲಕ್ಷಣವಿಲ್ಲದವರು ಮನೆಯಲ್ಲಿ ಇರುತ್ತಿಲ್ಲ. ಪಾಸಿಟಿವ್‌ ವರದಿ ಬಂದರೆ 17 ದಿನಗಳ ಕಾಲ ಮನೆಯಲ್ಲಿರಬೇಕು ಎಂಬುದು ಕಡ್ಡಾಯವಾಗಿದ್ದರೂ ಅದ್ಯಾವುದಕ್ಕೂ ಕ್ಯಾರೆ ಎನ್ನದೆ ಸುತ್ತುತ್ತಿದ್ದಾರೆ.

ಗಂಗಾವತಿ: ಕೋವಿಡ್‌ಗೆ ಖ್ಯಾತ ಸಂಗೀತ ಶಿಕ್ಷಕ ಗೋವಿಂದರಾಜ್‌ ಬಲಿ

ನಗರದ ಖಾಸಗಿ ಆಸ್ಪತ್ರೆಯಲ್ಲಿ ಇದರ ರಿಯಾಲಿಟಿ ಚೆಕ್‌ ಮಾಡುವ ವೇಳೆಯಲ್ಲಿ ಕೋವಿಡ್‌ ಪಾಸಿಟಿವ್‌ ಬಂದಿರುವ ವ್ಯಕ್ತಿಯೇ ಜನರೊಂದಿಗೆ ಹರಟೆ ಹೊಡೆಯುತ್ತಿದ್ದ. ಕೇಳಿದರೆ, ಹೌದ್‌ ಸಾರ್‌, ಪಾಸಿಟಿವ್‌ ಬಂದಿದೆ. ಅದೇನ್‌ ಬಿಡಿ ಎಲ್ಲರಿಗೂ ಬರುತ್ತದೆ ಎಂದು ಸಹ ಹೇಳಿದ್ದಾನೆ.

ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಪಾಸಿಟಿವ್‌ ಬಂದವರು ಮನೆಯಲ್ಲಿರದೆ ಆಚೆ ಸುತ್ತಾಡಿದ್ದಾರೆ. ಇದನ್ನು ತಕ್ಷಣ ತಾಲೂಕು ವೈದ್ಯಾಧಿಕಾರಿ ರಾಮಾಂಜನೇಯ ಅವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.
ದುರಂತ ಎಂದರೆ ಕೋವಿಡ್‌ ಕೇರ್‌ ಸೆಂಟರ್‌ ಮತ್ತು ಕೋವಿಡ್‌ ಆಸ್ಪತ್ರೆಯಲ್ಲಿಯೂ ಮೂರು ದಿನಗಳು ಅಥವಾ ಐದು ದಿನಗಳಾಗುತ್ತಿದ್ದಂತೆ ಅವರನ್ನು ಮರಳಿ ಟೆಸ್ಟ್‌ ಸಹ ಮಾಡಿಸಿದೆ ಮನೆಗೆ ಕಳುಹಿಸಲಾಗುತ್ತದೆ. ಅಂದರೆ ಅವರಿಗೆ ಕೋವಿಡ್‌ ನೆಗಟಿವ್‌ ಬಂದಿದೆಯಾ? ಬರದಿದ್ದರೆ ಅವರೇ ಹೊರ ಹೋಗಿ ಸೋಂಕು ಹರಡುವುದಿಲ್ಲವೇ ಎನ್ನುವ ಪ್ರಶ್ನೆಗೆ ಜಿಲ್ಲಾಡಳಿತದ ಬಳಿಯೂ ಉತ್ತರ ಇಲ್ಲ. ಮೂರ್ನಾಲ್ಕು ದಿನಗಳ ಕಾಲ ಆದರೆ ಮುಗಿದೆ ಹೋಯಿತು ಎನ್ನುತ್ತಾರೆ ವೈದ್ಯರು.

ಹಾಗಾದರೆ ಯಾವುದು ಸರಿ ಎನ್ನುವುದಕ್ಕೆ ಜಿಲ್ಲಾಡಳಿತವೇ ಉತ್ತರ ನೀಡಬೇಕಾಗಿದೆ. ಹಳ್ಳಿಯಲ್ಲಿಯಂತೂ ಪಾಸಿಟಿವ್‌ ಬಂದವರು ಮನೆಯಲ್ಲಿಯೇ ಇರುತ್ತಿಲ್ಲ. ಕೆಲವರು ಪಾಸಿಟಿವ್‌ ಬಂದಿದೆ ಎನ್ನುವುದು ಗೊತ್ತಿದ್ದರೂ ಬಸ್ಸಿನ​ಲ್ಲಿ ಸುತ್ತಾಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಅವರಿಗೆ ಸೀಲ್‌ ಹಾಕುವಂತಾಗಬೇಕು. ಅಲ್ಲದೆ 17 ದಿನಗಳ ಕಾಲ ಮನೆಯಲ್ಲಿಯೇ ಇರಬೇಕು. ಪಾಸಿಟಿವ್‌ ಬಂದವರು ಎಲ್ಲೆಂದ​ರಲ್ಲಿ ಓಡಾ​ಡು​ವುದಕ್ಕೆ ಕಡಿವಾಣ ಹಾಕಲೇಬೇಕು ಎನ್ನುವುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಆಗ್ರಹ.

ಕೊಪ್ಪಳ ನಗರದ ಪೇದೆಯೊಬ್ಬರಿಗೆ ಕೊರೋನಾ ಬಂದಿದೆ. ಅವರ ಮನೆಯ ಯಾರಿಗೂ ಚೆಕ್‌ ಮಾಡಿಲ್ಲ. ಅವರು ಓಣಿಯಲ್ಲೆಲ್ಲಾ ಸುತ್ತಾಡುತ್ತಿದ್ದಾರೆ. ಈ ಬಗ್ಗೆಯೂ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು. ಪಾಸಿಟಿವ್‌ ಬಂದಿರುವ ಕುಟುಂಬದವರು ಮನೆಯಿಂದ ಆಚೆ ಬರಬಹುದೆ ಎನ್ನುವ ಕುರಿತು ಅಂತಕಂತೆಯ ಬದಲಾಗಿ ಸ್ಪಷ್ಟತೆಯನ್ನು ನೀಡಬೇಕಾಗಿದೆ.

ಪಾಸಿಟಿವ್‌ ಬಂದವರೂ ಊರೆಲ್ಲಾ ಸುತ್ತಾಡುತ್ತಿದ್ದಾರೆ. ಇದರಿಂದ ಹರಡುವ ಪ್ರಮಾಣ ಅಧಿಕವಾಗುತ್ತದೆ. ಇದನ್ನು ಗಮನಕ್ಕೆ ತಂದರೂ ಯಾರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಡೊಂಬರಳ್ಳಿ ನಿವಾ​ಸಿ ಹನುಮರಡ್ಡಿ ಕರಡ್ಡಿ ಅವರು ತಿಳಿಸಿದ್ದಾರೆ. 
ಗ್ರಾಮದಲ್ಲಿ ಟಾಸ್ಕ್‌ಪೋರ್ಸ್‌ ಸಮಿತಿ ಇರುತ್ತದೆ. ಅವರೇ ಜನರಲ್ಲಿ ಜಾಗೃತಿ ಮೂಡಿಸಬೇಕು. ಪಾಸಿಟಿವ್‌ ಬಂದವರು ಲಕ್ಷಣ ಇರಲಿ, ಇಲ್ಲದಿರಲಿ, 17 ದಿನಗಳ ಕಾಲ ಮನೆಯಲ್ಲಿಯೇ ಇರಬೇಕು. ಮನೆಯಲ್ಲಿಯೂ ಪ್ರತ್ಯೇಕವಾಗಿಯೇ ಇರಬೇಕು ಎಂದು ತಾಲೂಕು ವೈದ್ಯಾಧಿಕಾರಿ ರಾಮಾಂಜನೇಯ ಅವರು ತಿಳಿಸಿದ್ದಾರೆ.
 

click me!