* ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ನಡೆದ ಘಟನೆ
* ನಾನ್ ಕೋವಿಡ್ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಲು ಮುಂದಾದ ನರ್ಸ್‌ಗಳು
* ನರ್ಸ್‌ಗಳ ಕಾರ್ಯಕ್ಕೆ ಗರ್ಭಿಣಿ ಕುಟುಂಬಸ್ಥರಿಂದ ಧನ್ಯವಾದ
ಬಾಗಲಕೋಟೆ(ಮೇ.28): ನಾನ್ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತ ಗರ್ಭಿಣಿಗೆ ನರ್ಸ್‌ಗಳು ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಜಿಲ್ಲೆಯ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ನಿನ್ನೆ(ಗುರುವಾರ) ನಡೆದಿದೆ.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಗೀತಾ ಮಾಸರೆಡ್ಡಿ ಅವರೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿಯಾಗಿದ್ದಾರೆ. ಮುಧೋಳ ತಾಲೂಕಿನ ಬುದ್ನಿ ಗ್ರಾಮದ ಗೀತಾ ಮಾಸರೆಡ್ಡಿ ಅವರು ಮಧ್ಯರಾತ್ರಿ 2 ಗಂಟೆಗೆ ಹೆರಿಗೆ ನೋವಿನಿಂದ ಬಳಲಿ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದ್ದರು. ಗರ್ಭಿಣಿಗೆ ಸೋಂಕು ಇದ್ದಿದ್ದರಿಂದ ಯಾವ ಆಸ್ಪತ್ರೆಯೂ ಇವರನ್ನ ದಾಖಲಿಸಿಕೊಂಡಿಲ್ಲ. ಹೀಗಾಗಿ ದಾರಿ ಕಾಣದೆ ಗೀತಾ ಸಂಬಂಧಿಗಳು ಅತಂತ್ರರಾಗಿದ್ದರು.
ಕೊರೋನಾದಿಂದ ಮೃತಪಟ್ಟವರ ಉಚಿತ ಅಂತ್ಯಕ್ರಿಯೆ: ಗ್ರಾಪಂ ಸಿಬ್ಬಂದಿಯಿಂದ ಮಾನವೀಯ ಕಾರ್ಯ
ಇನ್ನು 60 ಕಿಮೀ ದೂರದ ಬಾಗಲಕೋಟೆ ಕೋವಿಡ್ ಆಸ್ಪತ್ರೆಗೆ ತೆರಳಬೇಕಾದ್ರೆ ಸಮಯ ಬೇಕಿತ್ತು. ಇತ್ತ ಹೆರಿಗೆ ಮಾಡಿಸದೇ ಹೋದರೆ ಗರ್ಭಿಣಿಗೆ ಸಂಕಷ್ಟ ಎದುರಾಗುತ್ತಿತ್ತು. ಈ ಸಂದರ್ಭದಲ್ಲಿ ಮಾನವೀಯತೆ ದೃಷ್ಟಿಯಿಂದ ನಾನ್ ಕೋವಿಡ್ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಲು ನರ್ಸ್‌ಗಳು ಮುಂದಾಗಿದ್ದರು. ಲಕ್ಷ್ಮಿ ಮೇತ್ರಿ ಹಾಗೂ ಪಲ್ಲವಿ ಗೌಡರ ಎಂಬ ನರ್ಸ್‌ಗಳು ಗರ್ಭಿಣಿಗೆ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ.
ಮುಧೋಳ ತಾಲೂಕಾಸ್ಪತ್ರೆ ವೈದ್ಯೆ ಸುನಿತಾ ಕಾಮರೆಡ್ಡಿ ಸಲಹೆ ಮೇರೆಗೆ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಲಾಗಿದೆ. ಬಳಿಕ ಕೋವಿಡ್ ರೂಮ್‌ನಲ್ಲಿ ಬಾಣಂತಿಯನ್ನ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನರ್ಸ್‌ಗಳ ಕಾರ್ಯಕ್ಕೆ ಗೀತಾ ಕುಟುಂಬಸ್ಥರು ಧನ್ಯವಾದ ಅರ್ಪಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona