ವಿದ್ಯಾರ್ಥಿಗಳಿಲ್ಲದೇ ಸೊರಗಿದ್ದ ಸರ್ಕಾರಿ ಶಾಲೆಗಳಿಗೆ ಇದೀಗ ಫುಲ್ ಡಿಮ್ಯಾಂಡ್. ದಾಖಲಾತಿ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ.
ವಿಘ್ನೇಶ್ ಎಂ. ಭೂತನಕಾಡು
ಕೊಡಗು (ಸೆ.14) : ಕೊರೋನಾ ಮಹಾಮಾರಿಯಿಂದಾಗಿ ಕೊಡಗಿನ ಸರ್ಕಾರಿ ಶಾಲೆಗಳಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಈವರೆಗೆ ಮಕ್ಕಳಿಲ್ಲದೆ ಸೊರಗಿದ್ದ ಸರ್ಕಾರಿ ಶಾಲೆಗಳಲ್ಲಿ ದಿಢೀರ್ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದೆ. ಎರಡ್ಮೂರು ವರ್ಷಗಳಿಂದ ಬಂದ್ ಆಗಿದ್ದ ಜಿಲ್ಲೆಯ ಮೂರು ಸರ್ಕಾರಿ ಶಾಲೆಗಳು ಮತ್ತೆ ಬಾಗಿಲು ತೆರೆಯಲು ನಿರ್ಧರಿಸಿವೆ!
ಹೌದು, ಕೊರೋನಾದಿಂದಾಗಿ ಹಲವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲೂ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳ ನಡೆಯಿಂದ ಬೇಸತ್ತಿರುವ ಹಲವು ಪೋಷಕರಿಗೆ ಇದೀಗ ಸರ್ಕಾರಿ ಶಾಲೆಗಳು ಆಶಾಕಿರಣವಾಗಿ ಪರಿಣಮಿಸಿವೆ. ಹೀಗಾಗಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಉತ್ಸಾಹ ತೋರುತ್ತಿದ್ದಾರೆ. ಇದರ ಪರಿಣಾಮವಾಗಿ ಎರಡು ವರ್ಷಗಳ ಹಿಂದೆ ಬಾಗಿಲು ಮುಚ್ಚಿದ್ದ ಮಡಿಕೇರಿ ತಾಲೂಕಿನ ಮದೆನಾಡು ಸರ್ಕಾರಿ ಪ್ರಾಥಮಿಕ ಶಾಲೆ, ಮೂರು ವರ್ಷದಿಂದ ಬಾಗಿಲು ಹಾಕಿದ್ದ ಸೋಮವಾರಪೇಟೆ ತಾಲೂಕಿನ ಕುಂದಳ್ಳಿ, ಚೆಟ್ನಳ್ಳಿಯ ಸರ್ಕಾರಿ ಶಾಲೆಗಳು ಈ ಶೈಕ್ಷಣಿಕ ವರ್ಷದಿಂದಲೇ ಮತ್ತೆ ಪುನರಾರಂಭಗೊಳ್ಳುವ ಉತ್ಸಾಹದಲ್ಲಿವೆ.
ಕೊನೆಗೂ ಶಾಲೆ ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್: ಮಾರ್ಗಸೂಚಿ ಪ್ರಕಟ ...
ಶಿಕ್ಷಕರು, ಶಿಕ್ಷಣ ಇಲಾಖೆ ಎಷ್ಟೇ ಪ್ರಯತ್ನ ನಡೆಸಿದರೂ ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಏರುತ್ತಿರಲಿಲ್ಲ. ಈ ಕಾರಣಕ್ಕಾಗಿ ಈ ಮೂರು ಶಾಲೆಗಳನ್ನು ಮುಚ್ಚಿ ಶಿಕ್ಷಕರನ್ನು ಸಮೀಪದ ಶಾಲೆಗಳಿಗೆ ವರ್ಗಾಯಿಸಲಾಗಿತ್ತು. ಆದರೆ, ಇದೀಗ ಸುತ್ತಮುತ್ತಲ ಗ್ರಾಮಗಳ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗಳಿಗೆ ದಾಖಲಿಸಲು ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಈ ಶಾಲೆಗಳ ಬಾಗಿಲು ತೆರೆಯಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಯಾವ ತರಗತಿಗಳಿಗೆ ಬಂದರೂ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮದೆನಾಡು ಶಾಲೆಯಲ್ಲಿ 16 ವಿದ್ಯಾರ್ಥಿಗಳು ದಾಖಲಾಗಿದ್ದು, ಇನ್ನೆರಡು ಶಾಲೆಗಳಿಗೆ 12 ವಿದ್ಯಾರ್ಥಿಗಳ ಸೇರ್ಪಡೆಯಾಗಿದೆ. ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನಷ್ಟುಮಕ್ಕಳು ದಾಖಲಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊರೋನಾದಿಂದಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ವಿದ್ಯಾಗಮ ಯೋಜನೆ ಮೂಲಕ ಸರ್ಕಾರಿ ಶಾಲಾ ಮಕ್ಕಳು ಇರುವಲ್ಲಿಗೆ ಶಿಕ್ಷಕರು ತೆರಳಿ ಪಾಠ ಮಾಡುತ್ತಿದ್ದಾರೆ. ಆದರೆ ಕೆಲ ಖಾಸಗಿ ಶಾಲೆಗಳು ಈ ಸಂಕಷ್ಟದ ಸಮಯದಲ್ಲೂ ಪೋಷಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿವೆ. ಅಲ್ಲದೆ ಆನ್‌ಲೈನ್ ತರಗತಿ ನೆಪದಲ್ಲೂ ಶುಲ್ಕ ಪಡೆದುಕೊಳ್ಳುತ್ತಿರುವ ಕುರಿತೂ ಆರೋಪಗಳು ಕೇಳಿಬಂದಿವೆæ. ಇದರಿಂದ ಬೇಸತ್ತಿರುವ ಹಲವು ಪೋಷಕರು ಸುಧಾರಣೆ ಕಂಡಿರುವ ಸರ್ಕಾರಿ ಶಾಲೆಗಳೇ ವಾಸಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಜತೆಗೆ, ಸರ್ಕಾರಿ ಶಾಲೆಗಳಲ್ಲೂ ಶಿಕ್ಷಣದ ಗುಣಮಟ್ಟಸುಧಾರಣೆಯಾಗುತ್ತಿರುವುದು ಅವರಲ್ಲಿ ತುಸು ಭರವಸೆ ಮೂಡಿಸಿದೆ.
ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ. ದಾಖಲಾತಿ ಅವಧಿ ಇನ್ನೂ ಇದೆ. ಮುಂದೆ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುವ ಸಾಧ್ಯತೆಯಿದೆ. ದಾಖಲಾತಿ ಅಧಿಕವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮದೆ, ಕುಂದಳ್ಳಿ ಹಾಗೂ ಚೆಟ್ನಳ್ಳಿಯ ಸರ್ಕಾರಿ ಶಾಲೆಗಳನ್ನು ಈ ಶೈಕ್ಷಣಿಕ ವರ್ಷದಿಂದ ಪುನರ್ ಆರಂಭಿಸಲಾಗುತ್ತಿದೆ.
ಮಚ್ಚಾಡೋ, ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಮಡಿಕೇರಿ
ನಮ್ಮ ಮಗ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದಾನೆ. ಆದರೆ ಇದೀಗ ಕೊರೋನಾದಿಂದಾಗಿ ಆದಾಯ ಕಷ್ಟ. ಹೀಗಿದ್ದರೂ ಆನ್‌ಲೈನ್ ಕ್ಲಾಸ್‌ಗೆ .5 ಸಾವಿರ ಪಾವತಿಸುವಂತೆ ಖಾಸಗಿ ಶಾಲೆಯಲ್ಲಿ ತಿಳಿಸಿದ್ದಾರೆ. ಆದ್ದರಿಂದ ನಾವು ನಮ್ಮ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದೇವೆ.
- ಶಶಿಕಲಾ, ಸುಂಟಿಕೊಪ್ಪ