ಕೊರೋನಾ : ಎಲ್ಲಾ ಸಭೆ, ಸಮಾರಂಭಗಳು ರದ್ದು!

By Kannadaprabha NewsFirst Published Mar 11, 2020, 8:49 AM IST
Highlights

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹಲವು ರೀತಿಯ ಸಮಾರಂಭಗಳು ರದ್ದಾಗಿದ್ದು, ಎಲ್ಲಾ ರೀತಿಯ ಉತ್ಸವ ಸಭೆ ಸಮಾರಂಭಗಳೀಗೂ ಬ್ರೇಕ್ ಬೀಳಲಿದೆ. 

ಬೆಂಗಳೂರು [ಮಾ.11]:  ಕರೋನಾ ಭೀತಿ ವಿಶ್ವವಿಖ್ಯಾತ ಕರಗ ಮಹೋತ್ಸವ ಸೇರಿದಂತೆ ಮುಂಬರುವ ದಿನಗಳಲ್ಲಿ ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ನಡೆಯಬೇಕಿದ್ದ ಮಹತ್ವದ ಉತ್ಸವಗಳಿಗೆ ಬ್ರೇಕ್‌ ಹಾಕುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಂತೂ ಜನಜಂಗುಳಿ ಸೇರುವ ಸಭೆ, ಸಮಾರಂಭ, ಉತ್ಸವಗಳನ್ನು ಒಂದಾದ ಮೇಲೆ ಒಂದರಂತೆ ರದ್ದಾಗತೊಡಗಿವೆ.

ವಿಶೇಷವಾಗಿ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನ, ಏಕಾದಶಿ, ಭಜನಾ ಕಾರ್ಯಕ್ರಮ, ಉಪನ್ಯಾಸ, ಸಂಕಷ್ಟಚತುರ್ಥಿ, ಪ್ರಸಾದ ವಿತರಣೆ, ದಾಸೋಹ ನಿಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕರೋನಾ ಭೀತಿ ಮುಖ್ಯವಾಗಿ ಖ್ಯಾತ ಕರಗ ಉತ್ಸವದ ಮೇಲೆ ಕರಿನೆರಳು ಬೀರಿದೆ. ಏ.8ಕ್ಕೆ ನಡೆಯುವ ವಿಶ್ವ ವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ ನಡೆದಿದೆ. ಕರಗ ವೀಕ್ಷಣೆಗೆ ಲಕ್ಷಾಂತರ ಮಂದಿ ಸೇರುತ್ತಾರೆ. ಕರೋನಾ ಕಾಟವಿರುವ ಈ ಸಂದರ್ಭದಲ್ಲಿ ಇಂತಹ ಉತ್ಸವ ನಡೆಸುವುದು ಎಷ್ಟುಸರಿ ಎಂಬ ಜಿಜ್ಞಾಸೆ ಕರಗ ಮಹೋತ್ಸವ ಆಯೋಜಿಸುವ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಮಂಡಳಿಯನ್ನು ಕಾಡುತ್ತಿದೆ.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಬೆಂಗಳೂರು ಕರಗ ಮಹೋತ್ಸವ ಆಚರಣೆ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಲ್ಲಿ ರಸ್ತೆಬದಿ ತೆರೆದ ಆಹಾರ ಮಾರಾಟಕ್ಕೆ ಬ್ರೇಕ್‌...

ವಿಶೇಷ ಪೂಜೆ ರದ್ದು: ಉಳಿದಂತೆ ನಗರದ ಹಲವು ದೇವಾಲಯಗಳಲ್ಲಿ ಉತ್ಸವಗಳನ್ನು ರದ್ದುಪಡಿಸಲಾಗುತ್ತಿದೆ. ವಿಜಯನಗರದ ಕೋದಂಡಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ಎಲ್ಲ ವಿಶೇಷ ಪೂಜೆ ರದ್ದಾಗಿದೆ. ಜತೆಗೆ, ಏ.2ರಿಂದ ಒಂದು ವಾರ ಕಾಲ ನಡೆಯುವ ರಾಮನವಮಿ ರಥೋತ್ಸವವನ್ನೂ ರದ್ದುಪಡಿಸಿದೆ. ಪ್ರತಿನಿತ್ಯ ದೇವರ ವಿಗ್ರಹಕ್ಕೆ ಸಾಮಾನ್ಯ ಪೂಜೆ ಮಾತ್ರ ನಡೆಸಲಾಗುವುದು. ಪ್ರಸಾದ ವಿತರಣೆ, ಅಮಾವಾಸ್ಯೆ ಹಾಗೂ ಪ್ರತಿ ಸೋಮವಾರದ ಅನ್ನ ದಾಸೋಹ ನಿಲ್ಲಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ತೆಗೆಯಲಾಗಿದೆ ಎಂದು ಆಡಳಿತ ಮಂಡಳಿ ಸದಸ್ಯ ರಾಮು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನು ಬನಶಂಕರಿ ದೇವಸ್ಥಾನ, ಯಡಿಯೂರು ದೇವಸ್ಥಾನ, ಗವಿಗಂಗಾದರೇಶ್ವರ ದೇವಸ್ಥಾನ, ಕಾಡುಮಲ್ಲೇಶ್ವರ ದೇವಸ್ಥಾನ ಸೇರಿದಂತೆ ಮುಜರಾಯಿ ಇಲಾಖೆಗೆ ಒಳಪಡುವ 1ದೇವಸ್ಥಾನಗಳಲ್ಲಿ ಕೊರೋನಾ ವೈರಸ್‌ ಮುಂಜಾಗ್ರತಾ ಕ್ರಮಗಳ ಕುರಿತು ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದು, ಸರ್ಕಾರ ನೀಡುವ ಸೂಚನೆ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ದೇವಸ್ಥಾನದ ಆಡಳಿತಾಧಿಕಾರಿಗಳು ತೀರ್ಮಾನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಜರಾಯಿ ಇಲಾಖೆ ಬೆಂಗಳೂರು ವಿಭಾಗದ ಸಹಾಯ ಆಯುಕ್ತ ಜಲಧಿರಂಗಣ್ಣ, ನಗರದಲ್ಲಿ ಒಟ್ಟು 60 ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಒಳಪಡಲಿವೆ. ಅದರಲ್ಲಿ ಈಗಾಗಲೇ ಅನೇಕ ದೇವಸ್ಥಾನದಲ್ಲಿ ರಥೋತ್ಸವ ಹಾಗೂ ಜಾತ್ರಾಮಹೋತ್ಸವ ಮುಕ್ತವಾಗಿವೆ. ಇನ್ನು ಕೆಲವು ದೇವಸ್ಥಾನಗಳಲ್ಲಿ ರಥೋತ್ಸವ ಏಪ್ರಿಲ್‌ನಿಂದ ಆರಂಭಗೊಳ್ಳಲಿದೆ. ಪರಿಸ್ಥಿತಿ ನೋಡಿ ಕ್ರಮ ಕೈಗೊಳ್ಳುತ್ತೇವೆ. ಉಳಿದಂತೆ ದೇವಸ್ಥಾನದ ಆವರಣ ಶುದ್ಧವಾಗಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಮನವಮಿಯ ಮಜ್ಜಿಗೆ, ಪಾನಕ ಸಿಗೋದು ಡೌಟ್‌

ಶ್ರೀ ರಾಮನವಮಿ ಹಬ್ಬ ಏ.2ರಂದು ನಡೆಯಲಿದ್ದು, ಎಲ್ಲೆಡೆ ರಾಮನ ಉತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ. ಜತೆಗೆ ದೇವಾಲಯ ಸೇರಿದಂತೆ ಎಲ್ಲಡೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಣೆ ಕಾರ್ಯ ನಡೆಯುತ್ತದೆ. ಆದರೆ, ಈ ಬಾರಿಯ ಕೊರೋನಾ ಭೀತಿಯ ಜತೆಗೆ ನಗರದಲ್ಲಿ ಕಾಲರಾ, ಎಚ್‌1ಎನ್‌1 ಸೇರಿದಂತೆ ಸಾಲು ಸಾಲು ರೋಗಗಳು ಉಲ್ಬಣಿಸುತ್ತಿರುವುದರಿಂದ ಸಾರ್ವಜನಿಕರಿಗೆ ರಾಮನವಮಿಯಂದು ರಸ್ತೆ, ದೇವಸ್ಥಾನಗಳ ಬಳಿ ಪಾನಕ-ಮಜ್ಜಿಗೆ ಸಿಗುವುದು ಅನುಮಾನ.

click me!