ವಲಸೆ ಕಾರ್ಮಿಕರಿಂದ ಕೊರೋನಾ ಸ್ಫೋಟ ಇಲ್ಲ

By Kannadaprabha NewsFirst Published May 2, 2021, 10:52 AM IST
Highlights

ಕೊಪ್ಪಳ ಜಿಲ್ಲೆಗೆ 1875 ವಲಸೆ ಕಾರ್ಮಿಕರು ಆಗಮನ| ಕುಷ್ಟಗಿ ತಾಲೂಕಿನಲ್ಲೇ ಅಧಿಕ ಕಾರ್ಮಿಕರು| ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸ್ಫೋಟಗೊಂಡ ಉದಾಹರಣೆ ಇಲ್ಲ| ಕೊಪ್ಪಳ ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ಘೋಷಣೆಯಾದ ಮೇಲೆಯೇ ಪಾಸಿಟಿವ್‌ ಪ್ರಕರಣಗಳು ಅಧಿಕ| 

ಕೊಪ್ಪಳ(ಮೇ.02): ಜನತಾ ಕರ್ಫ್ಯೂ ಘೋಷಣೆಯಾದ ಬೆನ್ನಲ್ಲೇ ಜಿಲ್ಲೆಗೆ 1875 ಕಾರ್ಮಿಕರು ಆಗಮಿಸಿದ್ದು, ಇದರಲ್ಲಿ ಅನ್ಯರಾಜ್ಯದಿಂದಲೂ ಬಂದವರು ಇದ್ದಾರೆ. ಆದರೆ, ಇವರಿಂದ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸ್ಫೋಟಗೊಂಡ ಉದಾಹರಣೆ ಇಲ್ಲ.

ಜಿಲ್ಲೆಯಲ್ಲಿ ಕಳೆದ ವರ್ಷದ ಲೆಕ್ಕಚಾರದ ಪ್ರಕಾರ 11965 ಕಾರ್ಮಿಕರು ಬೇರೆ ಜಿಲ್ಲೆ ಮತ್ತು ರಾಜ್ಯಕ್ಕೆ ಗುಳೆ ಹೋಗಿದ್ದರು. ಈಪೈಕಿ ಈಗಷ್ಟೇ ಬಂದಿರುವ ಮಾಹಿತಿಯ ಪ್ರಕಾರ ಕೇವಲ 1875 ಕಾರ್ಮಿಕರು ಮರಳಿ ಊರಿಗೆ ಬಂದಿದ್ದಾರೆ.
ಕಳೆದ ವರ್ಷ ನಾನಾ ಜಿಲ್ಲೆಗೆ 7835 ಕಾರ್ಮಿಕರು ಗುಳೆ ಹೋಗಿದ್ದರೆ, ವಿವಿಧ ರಾಜ್ಯಗಳಿಗೆ 4130 ಕಾರ್ಮಿಕರು ಗುಳೆ ಹೋಗಿದ್ದರು. ಈಗ ಈ ಪೈಕಿ ಅನ್ಯ ಜಿಲ್ಲೆಗೆ ಹೋದವರು 1453 ಕಾರ್ಮಿಕರು ಮಾತ್ರ ಆಗಮಿಸದ್ದರೆ ಅನ್ಯರಾಜ್ಯಕ್ಕೆ ಹೋದವರ ಪೈಕಿ 423 ಕಾರ್ಮಿಕರು ಮಾತ್ರ ವಾಪಸ್ಸು ಬಂದಿದ್ದಾರೆ.

"

ವಲಸಿಗರಿಂದ ಸೋಂಕು ಹರಡಿಲ್ಲ:

ಜಿಲ್ಲೆಯಲ್ಲಿ ಇದುವರೆಗೂ ಕಾರ್ಮಿಕರು ವಲಸೆ ಬಂದಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಅಧಿಕಗೊಂಡ ಉದಾಹರಣೆ ಇಲ್ಲ. ಇದುವರೆಗೂ ಕಿನ್ನಾಳ ಗ್ರಾಮದಲ್ಲಿ 93 ಹಾಗೂ ಬಿನ್ನಾಳ ಗ್ರಾಮದಲ್ಲಿ 73 ಪ್ರಕರಣಗಳೇ ಗ್ರಾಮೀಣ ಪ್ರದೇಶದಲ್ಲಿ ಅಧಿಕ ಬಂದಿರುವುದು. ಉಳಿದಂತೆ ಯಾವುದೇ ಗ್ರಾಮದಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪಾಸಿಟಿವ್‌ ಪ್ರಕರಣ ಪತ್ತೆಯಾದ ಉದಾಹರಣೆ ಇಲ್ಲ.

ಕೊರೋನಾ ರಣಕೇಕೆ: ತಿಂಗಳಾದ್ರೂ ಹೆರಿಗೆಯಾದ ಪತ್ನಿ, ಮಗುವನ್ನೂ ನೋಡದ ಅಧಿಕಾರಿ..!

ಕಿನ್ನಾಳ ಮತ್ತು ಬಿನ್ನಾಳ ಗ್ರಾಮದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗಿದ್ದರೂ, ಕಾರ್ಮಿಕರು ಆಗಮಿಸಿರುವುದು ಕಾರಣವಲ್ಲ ಎಂದು ಜಿಲ್ಲಾಡಳಿತ ಸ್ಪಷ್ಪಪಡಿಸಿದೆ. ಇಲ್ಲಿ ಒಂದು ಮದುವೆಯಲ್ಲಿ ಭಾಗಿಯಾಗಿರುವುದಕ್ಕೆ ಹಾಗೂ ಮತ್ತೊಂದು ಮಟನ್‌ ಅಂಗಡಿಯನ್ನು ಶುರು ಮಾಡಿದ್ದಕ್ಕೆ ಎನ್ನುವುದು ಪ್ರಾಥಮಿಕ ಮಾಹಿತಿ ಗೊತ್ತಾಗಿದೆ.

ಪಾಸಿಟಿವ್‌ ಪ್ರಕರಣ ಸ್ಪೋಟ:

ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ಘೋಷಣೆಯಾದ ಮೇಲೆಯೇ ಪಾಸಿಟಿವ್‌ ಪ್ರಕರಣಗಳು ಅಧಿಕವಾಗುತ್ತಿರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ಇದುವರೆಗೂ ಅಬ್ಬಾಬ್ಬ ಎಂದರೇ ಗರಿಷ್ಠ ಎರಡುನೂರರವರೆಗೂ ಬರುತ್ತಿದ್ದ ಪ್ರಕರಣಗಳ ಸಂಖ್ಯೆ ಕರ್ಫ್ಯೂ ಘೋಷಣೆಯಾದ ಮೇಲೆ 300ರಿಂದ 500ಕ್ಕೂ ಅಧಿಕವಾಗಿದೆ. ಇದು ವಲಸೆ ಕಾರ್ಮಿಕರು ಆಗಮನದಿಂದಲೇ ಆಗಿರುವಂತಹದ್ದು ಎಂದು ಹೇಳಲಾಗುತ್ತಿದೆಯಾದರೂ ನಿಖರತೆ ಇಲ್ಲ.
ಕರ್ಫ್ಯೂ ಘೋಷಣೆಯಾದ ಮೇಲೆ ನಿಯಂತ್ರಣಕ್ಕೆ ಬರಬೇಕಾದ ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಇದರ ಕಾರಣವನ್ನು ಆರೋಗ್ಯ ಇಲಾಖೆ ಬೆನ್ನಟ್ಟಿದ್ದು, ಸ್ಪಷ್ಟತೆ ಸಿಕ್ಕಿಲ್ಲ.

ವಲಸೆ ಕಾರ್ಮಿಕರ ಮಾಹಿತಿ

ತಾಲೂಕು ಬೇರೆ ಜಿಲ್ಲೆಗಳಿಂದ ಬೇರೆರಾಜ್ಯದಿಂದ ಒಟ್ಟು

ಕೊಪ್ಪಳ 237 67 304
ಕುಷ್ಟಗಿ 278 131 409
ಯಲಬುರ್ಗಾ 84 147 231
ಕುಕನೂರು 164 36 200
ಗಂಗಾವತಿ 183 13 200
ಕಾರಟಗಿ 384 25 409
ಕನಕಗಿರಿ 122 0000 122
ಒಟ್ಟು 1452 423 1875

ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಆಗಮನದಿಂದ ಯಾವುದೇ ಹಳ್ಳಿಯಲ್ಲಿ ಕೊರೋನಾ ಉಲ್ಭಣಗೊಂಡ ಉದಾಹರಣೆ ಇಲ್ಲ. ಈ ದಿಸೆಯಲ್ಲಿ ಜಿಲ್ಲಾಡಳಿತ ಅಂಕಿಸಂಖ್ಯೆ ಸಂಗ್ರಹಿಸುವ ಆರ್ಯವನ್ನು ನಡೆಸಿದ್ದು, ಅಂತಹ ಪ್ರಕರಣ ಕಂಡುಬಂದಿಲ್ಲ ಎಂದು ಕೊಪ್ಪಳ ಎಡಿಸಿ ಎಂ.ಪಿ. ಮಾರುತಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!