ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಿ ಬೆಸ್ಟ್ ಹಾಸ್ಪಿಟಲ್ ಎಂದು ಮೆಚ್ಚುಗೆ| ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನನಗೆ ಅತ್ಯುತ್ತಮ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಆಸ್ಪತ್ರೆಯಿಂದ ಬಿಡುಗಡೆಯಾದ ವ್ಯಕ್ತಿ|
ಭಟ್ಕಳ(ಮೇ.02): ಬೆಂಗಳೂರಿನಲ್ಲಿ ಕೋವಿಡ್ ಸೋಂಕಿಗೊಳಗಾಗಿ ಅಲ್ಲಿನ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ತನ್ನ ಹುಟ್ಟೂರಾದ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಶೀಘ್ರ ಗುಣಮುಖರಾದ ಪ್ರತಿಷ್ಠಿತ ಸೋಲಾರ್ ಕಂಪೆನಿಯೊಂದರ ಉದ್ಯೋಗಿಯೊಬ್ಬರು ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ನನಗೆ ಬೆಡ್ ಸಿಗದೇ ತೀವ್ರ ತೊಂದರೆ ಅನುಭವಿಸಿದ್ದೆ. ತಮ್ಮ ಹುಟ್ಟೂರೆನ್ನುವ ಸಹಜ ನಂಬಿಕೆಯಿಂದ ಆಂಬುಲೆನ್ಸ್ ಮೂಲಕ ಭಟ್ಕಳಕ್ಕೆ ಬಂದು ಇಲ್ಲಿನ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದೆ. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನನಗೆ ಅತ್ಯುತ್ತಮ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
undefined
ಮೃತ ಕೋವಿಡ್ ವ್ಯಕ್ತಿಯ ತಲೆಯಲ್ಲಿ ರಕ್ತ ಸೋರಿಕೆ: ವಿಡಿಯೋ ವೈರಲ್
ಇಲ್ಲಿನ ವೈದ್ಯರ ಸೇವೆ, ದಾದಿಯರ ಹಾಗೂ ಇತರೇ ಸಿಬ್ಬಂದಿಗಳ ಸೇವೆ ಅವಿಸ್ಮರಣೀಯ. ಇದು ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದೆ. ದಿ ಬೆಸ್ಟ್ ಹಾಸ್ಪಿಟಲ್ ಆಗಿದೆ. ನಾನು ಹುಟ್ಟಿದ ಸರ್ಕಾರಿ ಆಸ್ಪತ್ರೆ ಇಂದು ನನಗೆ ಪುನರ್ಜನ್ಮ ನೀಡಿದೆ. ಬೆಂಗಳೂರಿನಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ ಎನ್ನುವ ಭಯದಲ್ಲಿದ್ದ ನನಗೆ ಮೊದಲು ನೆನಪಾದದ್ದು ಈ ಸರ್ಕಾರಿ ಆಸ್ಪತ್ರೆ. ಆಸ್ಪತ್ರೆಯ ವಾತಾವರಣ ಕೂಡಾ ಅತ್ಯಂತ ಉತ್ತಮವಾಗಿದ್ದು ಈ ಹಿಂದೆ ನೋಡಿದ ಆಸ್ಪತ್ರೆಗೂ ಇಂದಿಗೂ ತುಂಬಾ ಬದಲಾವಣೆಯಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಬೆಂಗಳೂರಿನಿಂದ ಭಟ್ಕಳಕ್ಕೆ ಬರುವ ನಿರ್ಧಾರ ಮಾಡಿರುವುದು ಸಾರ್ಥಕವಾಯಿತು ಎನ್ನುವ ಅವರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಡಾ. ಸತೀಶ್ ಸೇರಿದಂತೆ ಇನ್ನಿತರರ ಸೇವೆಯನ್ನು ಶ್ಲಾಘಿಸಿದಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ರೀತಿ ವ್ಯವಸ್ಥೆ ಮುಂದುವರಿಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona