ಬೆಂಗಳೂರಿಗರಿಗೆ ಗುಡ್ ನ್ಯೂಸ್ : ಕೊರೋನಾ ಮಾಯವಾಗುವ ದಿನಗಳು ಸಮೀಪ

By Kannadaprabha NewsFirst Published Nov 10, 2020, 6:59 AM IST
Highlights

ರಾಜ್ಯದಿಂದ ಕೊರೋನಾ ಮಹಾಮಾರಿ ಪ್ರಕರಣ ಕೊಂಚ ಕೊಂಚವೇ ದೂರಾಗುತ್ತಿದೆ. ಸಂಪೂರ್ಣವಾಗಿ ಮಾಯವಾಗುವ ದಿನಗಳುಸಪೀಸುತ್ತಿದೆ. 

ಬೆಂಗಳೂರು (ನ.10):  ರಾಜಧಾನಿಯಲ್ಲಿ ಕೊರೋನಾ ಸೋಂಕು ಹಾಗೂ ಸಾವಿನ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿದ್ದು ಸೋಮವಾರ 978 ಮಂದಿಯಲ್ಲಿ ಮಾತ್ರ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 5 ಮಂದಿ ಬಲಿಯಾಗಿದ್ದಾರೆ.

ಈ ಮೂಲಕ ಐದು ತಿಂಗಳ ಬಳಿಕ ದಿನವೊಂದರ ಸೋಂಕು ಪ್ರಕರಣಗಳ ಸಂಖ್ಯೆ ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ. ಜೂನ್‌ ಬಳಿಕ 1 ಸಾವಿರಕ್ಕಿಂತ ಕಡಿಮೆ ಸೋಂಕು ಪ್ರಕರಣ ವರದಿಯಾಗಿರಲಿಲ್ಲ. ಸೋಮವಾರ ಸೋಂಕು 1 ಸಾವಿರ ಗೆರೆ ಇಳಿದಿದೆ. ಇನ್ನು 5 ಮಂದಿ ಸೋಂಕಿಗೆ ಬಲಿಯಾಗಿದ್ದು, ಸತತ ಎರಡನೇ ದಿನವೂ ಒಂದಂಕಿ ಸಾವು ವರದಿಯಾಗಿದೆ.

ಕಳೆದ ಎರಡು ತಿಂಗಳಿನಿಂದ ಸೋಂಕಿಗೆ ಹೋಲಿಸಿಕೊಂಡರೆ ಸಾವಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಪರಿಣಾಮ ಸಾವಿನ ದರ ಶೇ.1.13ಕ್ಕೆ ಇಳಿಕೆಯಾಗಿದೆ. ಅಲ್ಲದೆ ಒಟ್ಟು ಸೋಂಕಿತರಲ್ಲಿ ಶೇ. 93.61 ಮಂದಿ ಗುಣಮುಖ ಹೊಂದಿದ್ದಾರೆ.

ಸಾವಿನ ದರ ಇಳಿಕೆ:

ಬೆಂಗಳೂರಿನಲ್ಲಿ ಮೇ 1ರ ವರೆಗಿನ ಮೊದಲ 84 ದಿನಗಳ ಅವಧಿಯಲ್ಲಿ 386 ಪ್ರಕರಣ ವರದಿಯಾಗಿ 12 ಮಂದಿ ಮೃತಪಟ್ಟಿದ್ದರು. ಈ ಮೂಲಕ ಶೇ.3.11 ಸಾವಿನ ದರ ದಾಖಲಾಗಿತ್ತು. ಜೂನ್‌ ತಿಂಗಳಲ್ಲಿ ಶೇ.1.69, ಜುಲೈ ತಿಂಗಳಲ್ಲಿ ಶೇ.1.85 ರಷ್ಟುವರದಿಯಾಗಿತ್ತು. ಈ ಮೂಲಕ ಒಟ್ಟು ಸಾವಿನ ದರ ಶೇ.1.8ಕ್ಕಿಂತ ಹೆಚ್ಚಿತ್ತು. ಆದರೆ, ಸೆಪ್ಟೆಂಬರ್‌ನಿಂದ ಈಚೆಗೆ ಸಾವಿನ ದರ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಆಗಸ್ಟ್‌ ತಿಂಗಳಲ್ಲಿ 74,696 ಮಂದಿಗೆ ಸೋಂಕು ತಗುಲಿದ್ದರೆ, ಶೇ.1.27 ಸಾವಿನ ದರದಂತೆ 950 ಮಂದಿ ಮೃತಪಟ್ಟಿದ್ದರು. ಸೆಪ್ಟೆಂಬರ್‌ ತಿಂಗಳಲ್ಲಿ 1.02 ಲಕ್ಷ ಸೋಂಕು ಪತ್ತೆಯಾಗಿದ್ದು, 971 ಸಾವಿನ ಮೂಲಕ ಶೇ.0.97ರಷ್ಟುಸಾವು ಸಂಭವಿಸಿತ್ತು. ಅಕ್ಟೋಬರ್‌ನಲ್ಲೂ ಶೇ.0.97ರಷ್ಟೇ ಸಾವಿನ ದರ ವರದಿಯಾಗುವ ಮೂಲಕ ಒಟ್ಟು ಸಾವಿನ ದರ ಶೇ.1.13ಕ್ಕೆ ಇಳಿಕೆಯಗಿದೆ.

3.50 ಲಕ್ಷ ಮಂದಿಗೆ ಸೋಂಕು:

ಸೋಮವಾರದ 978 ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಮೂರುವರೆ ಲಕ್ಷ ಗಡಿ ದಾಟಿದ್ದು, ಸಂಖ್ಯೆ 3,50,305ಕ್ಕೆ ಏರಿಕೆಯಾಗಿದೆ. 959 ಮಂದಿ ಗುಣಮುಖರಾಗಿದ್ದು, ಈವರೆಗಿನ ಗುಣಮುಖರ ಸಂಖ್ಯೆ 3,27,948ಕ್ಕೆ ಏರಿಕೆಯಾಗಿದೆ. ಸೋಮವಾರದ 5 ಸಾವು ಸೇರಿ ಒಟ್ಟು ಸಾವಿನ ಸಂಖ್ಯೆ 3,961ಕ್ಕೆ ತಲುಪಿದೆ.

ಉಳಿದಂತೆ 18,395 ಸಕ್ರಿಯ ಪ್ರಕರಣಗಳಿದ್ದು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ 470 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪೂರ್ವ, ಮಹದೇವಪುರದಲ್ಲೇ ಹೆಚ್ಚು ಸೋಂಕು

ಕಳೆದ ಹತ್ತು ದಿನಗಳಲ್ಲಿ ಮಹದೇವಪುರ ಹಾಗೂ ಬೆಂಗಳೂರು ಪೂರ್ವ ಭಾಗದಲ್ಲಿ ಸೋಂಕು ಹೆಚ್ಚಾಗಿದೆ. ಕಳೆದ ಹತ್ತು ದಿನದಲ್ಲಿ ವರದಿಯಾಗಿರುವ ಒಟ್ಟು ಪ್ರಕರಣದಲ್ಲಿ ಶೇ.17ರಷ್ಟುಮಹದೇವಪುರ, ಶೇ.16ರಷ್ಟುಪೂರ್ವ ವಲಯದಲ್ಲೇ ದಾಖಲಾಗಿವೆ. ಉಳಿದಂತೆ ದಾಸರಹಳ್ಳಿ ಶೇ.4 ಹಾಗೂ ರಾಜರಾಜೇಶ್ವರಿನಗರ ಶೇ.9 ರಷ್ಟುದಾಖಲಾಗುವ ಮೂಲಕ ಕಡಿಮೆ ಪ್ರಕರಣಗಳು ವರದಿಯಾಗಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

click me!