* 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಿದ್ದೇವೆ: ಮುಖ್ಯ ಆಯುಕ್ತ
* 1,711 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
* ಪಾಸಿಟಿವಿಟಿ ದರ ಮತ್ತೆ ಹೆಚ್ಚಳ
ಬೆಂಗಳೂರು(ಫೆ.03): ರಾಜಧಾನಿಯಲ್ಲಿ ಕೊರೋನಾ(Coronavirus) ಸೋಂಕು ಪರೀಕ್ಷೆಗಳು ಇಳಿಕೆಯಾಗಿದ್ದರೂ, ಹೊಸ ಪ್ರಕರಣಗಳು ಮಾತ್ರ ಎರಡು ಸಾವಿರದಷ್ಟು ಹೆಚ್ಚಳವಾಗಿದೆ. ಇನ್ನೊಂದೆಡೆ ಕಳೆದ ಒಂದು ವಾರದಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಗುಮುಖರಾಗುವ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆಯಾಗಿದೆ.
ಬುಧವಾರ 8850 ಮಂದಿ ಸೋಂಕಿತರಾಗಿದ್ದು, 13 ಸೋಂಕಿತರು ಸಾವಿಗೀಡಾಗಿದ್ದಾರೆ. 21493 ಮಂದಿ ಗುಣಮುಖರಾಗಿದ್ದಾರೆ. ಸದ್ಯ 92,469 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಮಂಗಳವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 35 ಸಾವಿರ ಕುಸಿದಿವೆ. ಆದರೆ, ಹೊಸ ಸೋಂಕಿತರ ಸಂಖ್ಯೆ 2,165 ಹೆಚ್ಚಳವಾಗಿವೆ. ಹೀಗಾಗಿಯೆ, ಬೆರಳೆಣಿಕೆಗೆ ಕುಸಿದಿದ್ದ ಪರೀಕ್ಷೆಗಳ ಪಾಸಿಟಿವಿಟಿ ದರ(Positivity Rate) ಮತ್ತೆ ಹೆಚ್ಚಳವಾಗಿದೆ. ಬುಧವಾರ 42 ಸಾವಿರ ಪರೀಕ್ಷೆ ನಡೆದಿದ್ದು, ಪಾಸಿಟಿವಿಟಿ ದರ ಶೇ.20ರಷ್ಟು ವರದಿಯಾಗಿದೆ.
undefined
Corona Update ಕರ್ನಾಟಕದಲ್ಲಿ ಕೊರೋನಾ ಕೇಸ್ ಇಳಿಕೆ, ಸಾವಿನ ಸಂಖ್ಯೆ ಏರಿಕೆ
ಬೆರಳೆಣಿಕೆಗೆ ಇಳಿಕೆಯಾಗಿದ್ದ ಸೋಂಕಿತರ ಸಾವು(Death) ಕೂಡಾ ಮತ್ತೆ ಹೆಚ್ಚಳವಾಗಿದೆ. ಪರೀಕ್ಷೆ(Covid Test) ಇಳಿಕೆಯಾದರೂ ಸೋಂಕು ಹೆಚ್ಚಳವಾಗಿದೆ. ಈ ಮೂಲಕ ರಾಜಧಾನಿಯಲ್ಲಿ ಸೋಂಕು ಮತ್ತೆ ಹೆಚ್ಚಳವಾಗುತ್ತಿದೆಯೇ ಎಂಬ ಆತಂಕ ಹೆಚ್ಚಾಗಿದೆ. ನಗರದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 17.36 ಲಕ್ಷಕ್ಕೆ, ಗುಣಮುಖರ ಸಂಖ್ಯೆ 16.27 ಲಕ್ಷಕ್ಕೆ, ಸೋಂಕಿತರ ಸಾವಿನ ಸಂಖ್ಯೆ 16,616ಕ್ಕೆ ಏರಿಕೆಯಾಗಿದೆ. ಸದ್ಯ ನಗರದಲ್ಲಿ ಐದಕ್ಕಿಂತ ಕಡಿಮೆ ಪ್ರಕರಣವಿರುವ 161 ಸಕ್ರಿಯ ಕಂಟೈನ್ಮೆಂಟ್ ವಲಯ, ಐದಕ್ಕೂ ಹೆಚ್ಚು ಪ್ರಕರಣವಿರುವ 95 ಕ್ಲಸ್ಟರ್ ವಲಯಗಳನ್ನು ಗುರುತಿಸಲಾಗಿದೆ.
ಒಂದು ವಾರದಿಂದ ನಿತ್ಯ ಸರಾಸರಿ 30 ಸಾವಿರದಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ. ಕಳೆದ ಏಳು ದಿನಗಳಲ್ಲಿ ಒಟ್ಟು 2.11 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಸಕ್ರಿಯ ಸೋಂಕಿತರ ಸಂಖ್ಯೆ 92 ಸಾವಿರಕ್ಕೆ ತಗ್ಗಿದೆ. ಈ ಪೈಕಿ 1,711 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 253 ಸೋಂಕಿತರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 90 ಸಾವಿರಕ್ಕೂ ಅಧಿಕ ಸೋಂಕಿತರು ಮನೆಯ ಆರೈಕೆಯಲ್ಲಿದ್ದಾರೆ.
ಸಂಭಾವ್ಯ ಕೊರೋನಾದ ಹೊಸ ಅಲೆ ಎದುರಿಸಲು ಸಿದ್ಧರಾಗಬೇಕು: ಗುಪ್ತಾ
ಕೊರೋನಾ ಮೂರನೇ ಅಲೆಯನ್ನು(Corona 3rd Wave) ಸಮರ್ಥವಾಗಿ ಎದುರಿಸಿದ್ದು, ಭವಿಷ್ಯದಲ್ಲಿ ಸಂಭಾವ್ಯ ಅಲೆಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ(Gaurav Gupta) ಅವರು ಹೇಳಿದರು.
ಬುಧವಾರ ಕೋವಿಡ್-19(Covid-19) ತಜ್ಞರ ಸಮಿತಿಯೊಂದಿಗೆ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಎಲ್ಲರ ಶ್ರಮದಿಂದ ಯಶಸ್ವಿಯಾಗಿ ಕೊರೋನಾ ಮೂರನೇ ಅಲೆಯನ್ನು ನಿಭಾಯಿಸಿದ್ದೇವೆ. ಮುಂದೇನಾದರೂ ಹೊಸ ಅಲೆಗಳು ಬಂದಲ್ಲಿ ಅವುಗಳನ್ನು ಸಹ ಎದುರಿಸಲು ಸದಾ ಸಿದ್ಧರಾಗಿರಬೇಕು ಎಂದರು.
ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಕ್ರಿಯಾಶೀಲ ಸಂಚಾರಿ ಟ್ರಯಾಜ್ ಮತ್ತು ಟೆಲಿ ಟ್ರಯಾಜ್ ಘಟಕ, ವೈದ್ಯರು ಮತ್ತು ಸಿಬ್ಬಂದಿ ನೆರವಿನಿಂದ ದಿನಕ್ಕೆ 3 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರಿಗೆ ಮನೆಯಲ್ಲಿ ಟ್ರಯಾಜ್ ಮಾಡಲಾಗುತ್ತಿದೆ. ಮೂರನೇ ಅಲೆಯ ಬಗ್ಗೆ ಜನರಲ್ಲಿನ ಭಯ ಹೋಗಲಾಡಿಸುವ ಕಾರ್ಯ ಮಾಡಿದ್ದೇವೆ. ಶೀಘ್ರದಲ್ಲಿಯೇ ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣವು(VAccination) ನಿರ್ದೇಶಿತ ಗುರಿ ತಲುಪಲಿದೆ ಎಂದು ಹೇಳಿದರು.
Covid 3rd Wave: ಕೊರೋನಾ ಕ್ರಮೇಣ ಇಳಿಕೆ, ಮತ್ತೆ ಹೆಚ್ಚಾಗಲ್ಲ: ಸುಧಾಕರ್
ಜನವರಿಯಲ್ಲಿ ತಿಂಗಳಲ್ಲಿ ಕೋವಿಡ್ ದಾಖಲಾತಿಗಳಲ್ಲಿ ಕೇವಲ ಶೇಕಡ 1.8 ಸಕ್ರಿಯ ಪ್ರಕರಣಗಳಿದ್ದವು. ಅದರಲ್ಲಿ ಹೆಚ್ಚಿನವರು 60 ವರ್ಷ ಮೇಲ್ಪಟ್ಟವರು. ನಗರದಲ್ಲಿ ಕೋವಿಡ್ ಸೋಂಕು ದೃಢಪಟ್ಟು, ಐಸಿಯುನಲ್ಲಿ ದಾಖಲಾಗುವ ಎಲ್ಲ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ. ಈ ಸಂಬಂಧ ಗಂಭೀರ ಪ್ರಕರಣಗಳ ಪೈಕಿ ಆಸ್ಪತ್ತೆಗೆ ದಾಖಲಾಗಿರುವವರ ಮಾದರಿಗಳನ್ನು ಜಿನೋಮಿಕ್ ಸಿಕ್ವೆನ್ಸಿಂಗ್‌ಗೆ ಕಳುಹಿಸಲಾಗುತ್ತದೆ. ಪ್ರಸ್ತುತ ಅಂತಹ ಎಲ್ಲ ಮಾದರಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್, ಕೋವಿಡ್ ತಜ್ಞರ ಸಮಿತಿ ಸದಸ್ಯರು ಹಾಗೂ ಇನ್ನಿತರು ಉಪಸ್ಥಿತರಿದ್ದರು.