ಸೇನಾಕಾಂಕ್ಷಿಗಳು ಕರೆ ನೀಡಿದ್ದ 'Belagavi Band' ವಿಫಲಗೊಳಿಸಿದ ಪೊಲೀಸರು

Published : Jun 20, 2022, 06:11 PM IST
ಸೇನಾಕಾಂಕ್ಷಿಗಳು ಕರೆ ನೀಡಿದ್ದ 'Belagavi Band' ವಿಫಲಗೊಳಿಸಿದ ಪೊಲೀಸರು

ಸಾರಾಂಶ

'ಅಗ್ನಿಪಥ್' ಯೋಜ‌ನೆ ವಿರೋಧಿಸಿ 'ಬೆಳಗಾವಿ ಚಲೋ, ಬಂದ್' ವಿಫಲ ಹೋಟೆಲ್, ಬಸ್ ನಿಲ್ದಾಣ ಎಲ್ಲೆಂದೆಡೆ ಸಿಕ್ಕ ಯುವಕರು ವಶಕ್ಕೆ 250ಕ್ಕೂ ಹೆಚ್ಚು ಯುವಕರ ವಶಕ್ಕೆ ಪಡೆದು ಪೊಲೀಸರಿಂದ ಬುದ್ದಿವಾದ

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಜೂನ್): 'ಅಗ್ನಿಪಥ್' ಯೋಜನೆ ವಿರೋಧಿಸಿ ಸೇನಾಕಾಂಕ್ಷಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಅನಾಮಧೇಯ ಸಂದೇಶ ಮೂಲಕ ಕರೆ ನೀಡಿದ್ದ 'ಬೆಳಗಾವಿ ಚಲೋ', 'ಬೆಳಗಾವಿ ಬಂದ್' ಸಂಪೂರ್ಣ ವಿಫಲವಾಗಿದೆ.

ಯಾವುದೇ ‌ನಿರ್ದಿಷ್ಟ ಸಂಘಟನೆ ಬಂದ್‌ಗೆ ಕರೆ ನೀಡಿರಲಿಲ್ಲವಾದರೂ ವಾಟ್ಸಪ್‌ನಲ್ಲಿ ಸಂದೇಶಗಳು ಮಾತ್ರ ಹರದಾಡುತ್ತಿದ್ದವು. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಬೆಳಗಾವಿಯಲ್ಲಿ ಯಾವುದೇ ಪ್ರತಿಭಟನೆ ಅಥವಾ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ತೀವ್ರ ನಿಗಾ ವಹಿಸಿದ್ದರು‌. 

ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ‌‌‌.ಬೋರಲಿಂಗಯ್ಯ ಬೆಳಗ್ಗೆಯಿಂದಲೇ ಫೀಲ್ಡ್‌ಗಿಳಿದು ನಿರಂತರವಾಗಿ ಸಿಟಿ ರೌಂಡ್ ಹಾಕಿದರು. ಇತ್ತ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಸಹ ಜಿಲ್ಲೆಯ ವಿವಿಧೆಡೆಯ ಟೋಲ್ ಹಾಗೂ ವಿವಿಧೆಡೆ ಭೇಟಿ ನೀಡಿ ಪ್ರತಿಭಟನೆಗಾಗಿ ಬೆಳಗಾವಿಗೆ ತೆರಳುತ್ತಿದ್ದ ಹಲವರನ್ನು ವಶಕ್ಕೆ ಪಡೆದು ಮನವೊಲಿಸಿ ವಾಪಸ್ ಕಳಿಸುವ ಕಾರ್ಯ ಮಾಡಿದರು‌. 

ಬೆಳಗಾವಿಯ ಕೋಟೆ, ಚನ್ನಮ್ಮ ವೃತ್ತದಲ್ಲಿ ಜಮಾವಣೆಗೊಳ್ಳಲು ವಾಟ್ಸಪ್ ಸಂದೇಶಗಳು ಹರದಾಡುತ್ತಿದ್ದ ಹಿನ್ನೆಲೆ ಬೆಳಗಾವಿ ನಗರ, ಜಿಲ್ಲೆಯಾದ್ಯಂತ ತೀವ್ರ ನಿಗಾ ಇಡಲಾಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ 97 ಬಟಾಲಿಯನ್ ‌ನ ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್‌ನ 65 ಸಿಬ್ಬಂದಿಯ ತುಕಡಿ ನಗರಕ್ಕೆ ಆಗಮಿಸಿತ್ತು.

UDUPI; ಬಡ ಮಕ್ಕಳ ಶಿಕ್ಷಣದ ಜೊತೆಗೆ ಮನೆ ಕಟ್ಟಿಸಿಕೊಡುವ ಅಪರೂಪದ ಸಂಸ್ಥೆ ಯಕ್ಷಗಾನ ಕಲಾರಂಗ

'ಊಹಾಪೋಹ ಮೇಲೆ ಬಂದ್‌ಗೆ ಕರೆ ಕೊಟ್ಟಿದ್ದಾರೆ': ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಸಿಟಿ ರೌಂಡ್ಸ್ ವೇಳೆ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿ 'ಬೆಳಗಾವಿ ನಗರ ಸೇರಿ ಹೊರವಲಯದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹ ಮೇಲೆ ಬೆಳಗಾವಿ ಚಲೋ, ಬಂದ್ ಕರೆ ಕೊಟ್ಟಿದ್ದಾರೆ. ಯಾವುದೇ ನಿರ್ದಿಷ್ಟ ಸಂಘಟನೆ ಅಥವಾ ಲೀಡರ್‌ಶಿಪ್‌ನಲ್ಲಿ ಕರೆ ಕೊಟ್ಟಿಲ್ಲ‌.‌ ನಮ್ಮ ಬಳಿ ಪ್ರತಿಭಟನೆಗೆ ಯಾರೂ ಸಹ ಅ‌ನುಮತಿ ಪಡೆದಿಲ್ಲ. ಬೆಳಗಾವಿ ನಗರದಾದ್ಯಂತ ಕೆಎಸ್‌ಆರ್‌ಪಿ, ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್ ಸಹ ಬೆಳಗಾವಿ ಬಂದಿದೆ.‌

ಸಿಸಿ ಕ್ಯಾಮರಾ, ಸ್ಟಿಲ್ ಕ್ಯಾಮರಾಗಳ ಕಣ್ಗಾವಲು ಇದೆ.‌ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದ್ರೆ ಐದು ಡ್ರೋಣ್ ಕ್ಯಾಮರಾ ಮೂಲಕ ಕಣ್ಗಾವಲು ಇಡಲು ಸಹ ಸಿದ್ಧತೆ ಮಾಡಿದ್ದು, ಬೆಳಗಾವಿ ಸುತ್ತಮುತ್ತಲಿನ ಜಿಲ್ಲೆಗಳ ಎಸ್‌ಪಿಗಳ ಸಹಕಾರ ಇದೆ. ರಾಷ್ಟ್ರೀಯ ಹೆದ್ದಾರಿ 4ರ ಹಿರೇಬಾಗೇವಾಡಿ ಟೋಲ್ ಬಳಿ ಭದ್ರತೆ ಇದ್ದು, ಕೆಲವರು ಮೆಸೇಜ್ ಹಾಕ್ತಾರೆ ಅಂತಾ ಮುಗ್ಧರು ಬರುತ್ತಾರೆ. ಹೀಗಾಗಿ ಜಾಗೃತಿ ಮೂಡಿಸಲು ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದೇವೆ. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ' ಎಂದರು.

Toddy ತೆಗೆಯಲು ಅನುಮತಿಗೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ಉಪವಾಸ ಸತ್ಯಾಗ್ರಹ

 ರ್‍ಯಾಪಿಡ್ ಆ್ಯಕ್ಷನ್ ಫೋರ್ಸ್‌ನಿಂದ ಪಥ ಸಂಚಲನ: ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಚಲೋ, ಬೆಳಗಾವಿ ಬಂದ್‌ಗೆ ಕರೆ ಕೊಟ್ಟ ಹಿನ್ನೆಲೆ ಬೆಳಗಾವಿಗೆ ಆಗಮಿಸಿದ್ದ ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್‌ ಸಿಬ್ಬಂದಿ ಪಂಥ ಸಂಚಲನ ನಡೆಸಿದರು. ಬೆಳಗಾವಿಯ ಚನ್ನಮ್ಮ ವೃತ್ತದಿಂದ ಆರಂಭವಾದ ಪಂಥ ಸಂಚಲನ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸಿತು‌. ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ್, ಡಿಸಿಪಿ ರವೀಂದ್ರ ಗಡಾದಿ ಸೇರಿ ಹಲವು ಅಧಿಕಾರಿಗಳು ಸಾಥ್ ನೀಡಿದ್ರು.

ಟೋಲ್‌ಗೇಟ್‌ನಲ್ಲಿ ಪ್ರತಿ ಬಸ್ ತಪಾಸಣೆ, ಯುವಕರ ಮನವೊಲಿಕೆ: ಇನ್ನು ಬೆಳಗಾವಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಹಿರೇಬಾಗೇವಾಡಿ ಹಾಗೂ ಹತ್ತರಗಿ ಟೋಲ್ ಬಳಿ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಬೆಳಗಾವಿ ನಗರಕ್ಕೆ ಆಗಮಿಸುವ ಪ್ರತಿಯೊಂದು ಬಸ್ ತಪಾಸಣೆ ಮಾಡಿ ಪ್ರತಿಭಟನೆಗೆ ಆಗಮಿಸುತ್ತಿದ್ದ ಸೇನಾಕಾಂಕ್ಷಿಗಳನ್ನು ತಡೆದು ಬುದ್ದಿವಾದ ಹೇಳಿ ವಾಪಸ್ ಕಳಿಸಲಾಯಿತು. ಹತ್ತರಗಿ ಟೋಲ್‌ಗೇಟ್ ಬಳಿ ಖುದ್ದು ಎಸ್ ಪಿ ಲಕ್ಷಣ್ ನಿಂಬರಗಿ ಮೊಕ್ಕಾಂ ಹೂಡಿದ್ದರು.

ಎಂಟು ಜಿಲ್ಲೆಗಳಿಂದ ಆಗಮಿಸಿದ್ದ 250ಕ್ಕೂ ಹೆಚ್ಚು ಸೇನಾಕಾಂಕ್ಷಿಗಳ ವಶಕ್ಕೆ, ಮನವೊಲಿಕೆ
ಇನ್ನು ನಗರದಾದ್ಯಂತ ತೀವ್ರ ನಿಗಾ ಇಟ್ಟಿದ್ದ ಪೊಲೀಸರು ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಯುವಕರನ್ನು ವಶಕ್ಕೆ ಪಡೆದು ಬೆಳಗಾವಿಯ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದ ಆವರಣದಲ್ಲಿ ಇರುವ ಬಸವೇಶ್ವರ ದೇವಸ್ಥಾನಕ್ಕೆ ಕರೆತಂದರು. ಬೆಳಗಾವಿ,ಧಾರವಾಡ, ಬಾಗಲಕೋಟ, ವಿಜಯಪುರ, ಯಾದಗಿರಿ,ಕಲಬುರಗಿ, ರಾಯಚೂರು, ಕೊಪ್ಪಳ ಸೇರಿ ಸುಮಾರು 8 ಜಿಲ್ಲೆಗಳ ಯುವಕರು ಬೆಳಗಾವಿಗೆ ಆಗಮಿಸಿದ್ದರು. ದೈಹಿಕ ಪರೀಕ್ಷೆ ಮುಗಿಸಿ ಸಿಇಇ ಪರೀಕ್ಷೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಪ್ರತಿಭಟನೆಗೆ ಆಗಮಿಸಿದ ಸೇನಾಕಾಂಕ್ಷಿಗಳಿಗೆ ಎಸಿಪಿ ನಾರಾಯಣ ಭರಮಣಿ ಬುದ್ದಿವಾದ ಹೇಳಿದರು.

ಅನುಮತಿ ಇಲ್ಲದೇ ಪ್ರತಿಭಟನೆ ನಡೆಸುವುದರಿಂದ ಕೇಸ್ ದಾಖಲಾಗುತ್ತೆ. ಮುಂದಿನ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ತಿಳುವಳಿಕೆ ನೀಡಿದರು. ವಶಕ್ಕೆ ಪಡೆದ ಸೇನಾಕಾಂಕ್ಷಿಗಳಿಗೆ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದಲ್ಲಿಯೇ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬುದ್ದಿವಾದ ಹೇಳಿ ವಶಕ್ಕೆ ಪಡೆದ ಸೇನಾಕಾಂಕ್ಷಿಗಳನ್ನು ವಾಪಸ್ ಕಳಿಸಿಕೊಟ್ಟರು.

ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನಾಮಧೇಯ ಸಂದೇಶ ನೀಡಿ ಬೆಳಗಾವಿ ಚಲೋ ಬೆಳಗಾವಿ ಬಂದ್‌ನ್ನು ಪೊಲೀಸರು ವಿಫಲಗೊಳಿಸಿದ್ದು ಬೆಳಗಾವಿ ನಗರದಾದ್ಯಂತ ಎಂದಿನಂತೆ ಜನಜೀವನ ಕಂಡು ಬಂತು.

PREV
Read more Articles on
click me!

Recommended Stories

ಬಸವತತ್ವ ಪ್ರಚಾರಕ, ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು ಲಿಂಗೈಕ್ಯ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!