
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.18): ಪ್ರವಾಸೋದ್ಯಮದ ಪಾಲಿಗೆ ಕೊಡಗು ಜಿಲ್ಲೆ ಚಿನ್ನದ ಮೊಟ್ಟೆ ಇಡೋ ಕೋಳಿ. ಹಾಗಾಗಿಯೇ ರಾಜ್ಯ ಸರ್ಕಾರ ಇತ್ತೀಚೆಗೆ ಕೊಡಗಿನ ಪದ್ಧತಿ, ಆಚಾರ ವಿಚಾರ ಇಲ್ಲಿನ ಬೆಳೆಗಳಿಗೂ ಉತ್ತೇಜನ ನೀಡಿ ಸಂಸ್ಕೃತಿ ಸಾರಲು ಕೂರ್ಗ್ ವಿಲೇಜ್ ಎಂಬ ಕಲ್ಪನೆಯನ್ನ ಹುಟ್ಟುಹಾಕಿ ಅದಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಕೂಡ ಮಾಡಿತ್ತು. ಆದ್ರೆ ಈ ಯೋಜನೆಗೆ ಇದೀಗ ಸರ್ಕಾರವೇ ಎಳ್ಳು ನೀರು ಬಿಟ್ಟಿದೆ. ಕೂರ್ಗ್ ವಿಲೇಜ್... ಮೊದಲು ಈ ಹೆಸರು ಕೇಳಿದವರಿಗೆ ಇದೇನು ವಿಲೇಜು ಅಂತ ಗೊಂದಲವಾಗಬಹುದು. ಆದ್ರೆ ಇದು ಕೊಡಗು ಜಿಲ್ಲೆಯ ಪಾಲಿಗೆ ಬಹುದೊಡ್ಡ ಆಸ್ತಿಯಾಗಬೇಕಾಗಿದ್ದ ಯೋಜನೆಯಾಗಿತ್ತು.
ಮಡಿಕೇರಿ ನಗರದ ರಾಜಸೀಟ್ ಕೆಳಭಾಗದಲ್ಲಿ ಆಕರ್ಷಕ ಕೆರೆಯ ಪ್ರದೇಶವನ್ನು ಅಭಿವೃದ್ಧಿ ಮಾಡಲಾಗಿತ್ತು. ಅಲ್ಲಿ ಕೊಡಗಿನ ಸಾಂಬಾರ ಪದಾರ್ಥಗಳು, ಮಸಾಲೆ, ಕಾಫಿ ಪುಡಿ, ಜೇನುತುಪ್ಪ ಮತ್ತಿತರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಕೊಡಗಿನ ಆಚಾರ, ವಿಚಾರ, ಪದ್ಧತಿ ಪರಂಪರೆಗಳ ಅನಾವರಣಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅದನ್ನು ಆಗಿನ ಕೊಡಗು ಉಸ್ತುವಾರಿ ಸಚಿವರಾಗಿದ್ದ ವಿ ಸೋಮಣ್ಣ ಉದ್ಘಾಟನೆ ಮಾಡಿದ್ದರು. ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಬೇಕಾಗಿತ್ತು. ಆದ್ರೆ ಕೊಡಗಿನ ಬಹು ನಿರೀಕ್ಷಿತ ಈ ಕೂರ್ಗ್ ವಿಲೇಜ್ ಯೋಜನೆ ನೆನೆಗುದಿಗೆ ಪಾಳುಬಿದ್ದಿದೆ.
Kodagu: ವಾಸನೆ ಸಹಿತ ಹಳದಿ ಬಣ್ಣ ಕೊಳಚೆ ನೀರೇ ಕಟ್ಟೆಹಾಡಿ ಜನರಿಗೆ ಜೀವಜಲ!
ಕೂರ್ಗ್ ವಿಲೇಜ್ ಕೇಂದ್ರ ಪ್ರವಾಸಿಗರನ್ನು ಆಕರ್ಷಿಸಲು ವಿಫಲವಾಗಿದೆ. ಪ್ರವಾಸೋದ್ಯಮ ಇಲಾಖೆಯ ಕೋಟ್ಯಂತರ ರೂಪಾಯಿ ಅನುದಾನವನ್ನು ತೋಟಗಾರಿಕೆ ಇಲಾಖೆ ವ್ಯಯಿಸಿ ಸಂಪೂರ್ಣ ಹಾಳಾಗುವಂತೆ ಮಾಡಿದೆ. ಮೊದಲು ಇಂತಹ ಯೋಜನೆಗಳ ಅಗತ್ಯವಿದೆ ಎಂದು ಸರ್ಕಾರಕ್ಕೆ ಕಳುಹಿಸುತ್ತಾರೆ. ಯೋಜನೆಗೆ ಅನುದಾನ ಬಂದ ಮೇಲೆ ಅದರ ಕಾಮಗಾರಿಯನ್ನು ಸರಿಯಾಗಿ ನಿಭಾಯಿಸದೆ, ಅಥವಾ ಯೋಜನೆ ಅಭಿವೃದ್ಧಿಗೊಳಿಸುವ ಬಗೆಗೆ ನಿರ್ಲಕ್ಷ್ಯ ವಹಿಸಿ ಹೀಗೆ ಹಾಳಾಗುವಂತೆ ಮಾಡಲಾಗುತ್ತಿದೆ.
ಇಂತಹ ಯೋಜನೆಗಳೆಲ್ಲಾ ಅಧಿಕಾರಿಗಳಿಗೆ ಒಂದು ರೀತಿ ಬಿಳಿಯಾನೆಯಂತೆ ಆಗಿವೆ ಎಂದು ಮಡಿಕೇರಿ ನಗರ ಸಭೆ ಸದಸ್ಯ ಅಮಿನ್ ಮೋಯ್ಸಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂರ್ಗ್ ವಿಲೇಜ್ ಕೇಂದ್ರವನ್ನು ಪ್ರವಾಸೋದ್ಯಮ ಇಲಾಖೆ ನಿರ್ವಹಿಸುತ್ತಿದ್ದು, ಸರ್ಕಾರದಿಂದ ಮಾನ್ಯತೆ ಪಡೆದ ಕೆಲವರಿಗಷ್ಟೇ ಇಲ್ಲಿ ವ್ಯಾಪಾರ ಮಳಿಗೆ ಇಡಲು ಅವಕಾಶ ಮಾಡಿಕೊಡಲಾಗಿದೆ. ಅದಕ್ಕಾಗಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದ್ರೆ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕೂರ್ಗ್ ವಿಲೇಜ್ ಪಾಳು ಬಿದ್ದಿದೆ. ಪ್ರವಾಸೋದ್ಯಮ ಕೇಂದ್ರ ಸಂಪೂರ್ಣ ಕಾಡುಗಳಿಂದ ಆವೃತವಾಗಿದೆ.
ಸಾವಿಗೆ ಶರಣಾಗುವ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್ ಸೋಮಯ್ಯ: ಹೃದಯ ಹಿಂಡಿದ ಭಾವನಾತ್ಮಕ ಪತ್ರ!
ಪ್ರವಾಸಿಗರು ಕೂರಬೇಕಾಗಿದ್ದ ಬೆಂಚುಗಳು ಪಾಚಿ ಬೆಳೆದು ಕಾಡಿನಿಂದ ತುಂಬಿ ಹೋಗಿವೆ. ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಜನರ ಕೋಟ್ಯಂತರ ರೂಪಾಯಿ ಹಣ ಪೋಲಾಗಿದೆ. ಇದೇ ಹಣವನ್ನು ಕೊಡಗಿನ ರಸ್ತೆಗಳಿಗೋ, ಇಲ್ಲ ಪ್ರವಾಸಿ ತಾಣಗಳಲ್ಲಿ ಪಾಳುಬಿದ್ದಿರುವ ಶೌಚಾಲಯಗಳ ಅಭಿವೃದ್ಧಿಗೋ ವಿನಿಯೋಗಿಸಬಹುದಿತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗು ಪ್ರವಾಸೋದ್ಯಮದ ಆಕರ್ಷಣೆಯಾಗಬೇಕಾಗಿದ್ದ ಕೂರ್ಗ್ ವಿಲೇಜ್ ಅತ್ತ ಪ್ರವಾಸಿಗರಿಗೂ ಇಲ್ಲದೆ, ಇತ್ತ ಕೊಡಗಿಗೆ ಆದಾಯವನ್ನೂ ತರದೆ ಬೀಗ ಹಾಕಿದ ಸ್ಥಿತಿಯಲ್ಲೇ ಪಾಳು ಬಿದ್ದಿದೆ.